ಭಾನುವಾರ, ಏಪ್ರಿಲ್ 11, 2021
33 °C

ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ: ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮತದಾರರು ಯಾವುದೇ ಆಸೆ, ಆಮಿಷ, ಜಾತಿ-ಧರ್ಮಕ್ಕೆ ಮರುಳಾಗದೇ ಮತದಾನದ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಸಲಹೆ ನೀಡಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾರತ ಚುನಾವಣಾ ಆಯೋಗದಿಂದ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

18 ವರ್ಷದ ತುಂಬಿದ ಎಲ್ಲಾ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ತಪ್ಪದೇ ಹೆಸರು ಸೇರಿಸಬೇಕು. ಸಂವಿಧಾನದ ಘನತೆ ಎತ್ತಿಹಿಡಿಯಲು‌ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಎಲ್ಲರೂ ತಪ್ಪದೇ ಮತ ಹಾಕಬೇಕು. ಕೆಲ‌ ಯುವ ಮತದಾರರು ಸರ್ಕಾರಿ ರಜೆ ಇದ್ದರೂ‌ ಮತದಾನದಿಂದ ಹಿಂದೆ ಸರಿಯುವುದು ಉಳಿತಲ್ಲ ಎಂದರು.

ಮತದಾನದ ಮಹತ್ವ, ಮಾಹಿತಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ 2010 ಜನವರಿ 25 ರಿಂದ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದೆ. ಮಾಜಿ ಪ್ರಧಾನಿ‌ ಮನಮೋಹನಸಿಂಗ್ ಅವರು ಉತ್ತಮ ಆರ್ಥಿಕ ತಜ್ಞರಾಗಿ ದೇಶದಲ್ಲಿ ಜಿಡಿಪಿ ಕುಸಿದಾಗ ಆರ್ಥಿಕ ಸ್ಥಿತಿ ಬಗ್ಗೆ ತಮ್ಮದೇ ಆದ ಸಲಹೆ ಸೂಚನೆ ನೀಡಿರುವುದು ದೇಶಕ್ಕೆ ಸಹಕಾರಿ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್‌ ಮಾತನಾಡಿ, ಮತದಾನದ ಕುರಿತು ಪ್ರತಿಜ್ಞಾ ವಿಧೀ ಬೋಧಿಸಿದರು. ಆನಂತರ ಮಾತನಾಡಿದ ಅವರು, ಚುನಾವಣೆಯಲ್ಲಿ ಶೇ 50 ರಷ್ಟು ಮಾತ್ರ ಮತದಾನವಾಗುತ್ತಿದೆ. ಬೆಂಗಳೂರಿನಲ್ಲಿ ಕೇವಲ 45 ರಷ್ಟು ಮತದಾನವಾಗುತ್ತಿದೆ. ಇದರಿಂದ ಸಮರ್ಥವಾದ ಆಳವವರನ್ನು ಆರಿಸಲು ಹೇಗೆ ಸಾಧ್ಯ.

ಒಂದೇ ಒಂದು ಮತವೂ ಅವಶ್ಯಕ.‌ ಒಬ್ಬರು ಮತ ಹಾಕದಿದ್ದರೆ ದೇಶ ಹಾಳಾಗಲ್ಲ ಎಂಬ ಮನೋಭಾವ ತೊರೆಯಬೇಕು. ಈ ಬಗ್ಗೆ ಹಳ್ಳಿ ಹಳ್ಳಿಗೂ ಜಾಗೃತಿಯಾಗಬೇಕು. ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಗಮನಿಸಬೇಕು. ಯಾವ ಕೆಲಸಗಳಾಗುತ್ತವೆ. ಯಾವು ಕೆಲಸಗಳು ಆಗುವುದಿಲ್ಲ ಎಂಬ ಅಂಶಗಳನ್ನು ಪ್ರತಿಯೊಬ್ಬ ಮತದಾರರು ಪರಿಗಣಿಸಬೇಕು. ಅನಕ್ಷರಸ್ಥರಿಗೂ ಈ ಬಗ್ಗೆ ತಿಳಿಸಿ ಹೇಳಬೇಕು ಎಂದರು.

ಚುನಾವಣೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು