ಶನಿವಾರ, ಜುಲೈ 2, 2022
25 °C

‘ವಿದ್ಯಾಭ್ಯಾಸಕ್ಕೆ ಧರ್ಮ ಅಡ್ಡಿ ಸಲ್ಲ’: 16 ಚಿನ್ನದ ಪದಕ ಪಡೆದ ಬುಶ್ರಾ ಮತೀನ್‌

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ನಮ್ಮದು ಪ್ರಜಾಪ್ರಭುತ್ವ ದೇಶ. ವಿದ್ಯಾಭ್ಯಾಸ ಮಾಡುವುದಕ್ಕೆ ಧರ್ಮದ ವಿಷಯಗಳು ಅಡ್ಡಿ ಆಗಬಾರದು. ವಿದ್ಯಾಭ್ಯಾಸದಲ್ಲಿ ತಾರತಮ್ಯ ಇರಬಾರದು. ಶಿಕ್ಷಣಕ್ಕೆ ಎಲ್ಲರೂ ಮಹತ್ವ ಕೊಡಬೇಕು’.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ 16 ಚಿನ್ನದ ಪದಕ ಪಡೆದಿರುವ ಇಲ್ಲಿನ ಎಸ್‌ಎಲ್‌ಎನ್‌ ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಬುಶ್ರಾ ಮತೀನ್‌ ಅವರ ಮನದಾಳ ಇದು.

ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಈವರೆಗೆ ಗರಿಷ್ಠ 13 ಚಿನ್ನದ ಪದಕ ಪಡೆದಿರುವ ದಾಖಲೆ ಇತ್ತು. ಇದೀಗ ಬುಶ್ರಾ ಮತೀನ್‌ ಆ ದಾಖಲೆ ಮುರಿದಿದ್ದಾರೆ. ಇದೇ 10ರಂದು ಬೆಳಗಾವಿಯಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಬುಶ್ರಾ ಅವರಿಗೆ ಚಿನ್ನದ ಪದಕಗಳ ಪ್ರದಾನವಾಗಲಿದೆ.

‘ಪ್ರಜಾವಾಣಿ‘ ಯೊಂದಿಗೆ ಮಾತನಾಡಿದ ಅವರು ‘ಚಿನ್ನದ ಪದಕಗಳ ಸಾಧನೆ ಹೆಮ್ಮೆ ಮೂಡಿಸಿದೆ. ಹಿಂದುಳಿದ ರಾಯಚೂರು ಜಿಲ್ಲೆಗೂ ಇದು ಹೆಮ್ಮೆಯ ವಿಷಯ. ಈ ಸಾಧನೆಗೆ ಸ್ನೇಹಿತೆಯರು, ಬೋಧಕರು, ಕುಟುಂಬದ ಸದಸ್ಯರೆಲ್ಲರೂ ನನಗೆ ಬೆಂಬಲ ನೀಡಿದ್ದಾರೆ’ ಎಂದರು.

‘ಆರಂಭದಿಂದಲೂ ರಾಯಚೂರಿನಲ್ಲೇ ವಿದ್ಯಾಭ್ಯಾಸ ಮಾಡಿಕೊಂಡು ಬಂದಿದ್ದೇನೆ. ಪ್ರಮಾಣ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ್ದೇನೆ. ನನ್ನ ತಂದೆ ಶೇಖ್‌ ಜಹಿರುದ್ದೀನ್‌ ಲಿಂಗಸುಗೂರಿನಲ್ಲಿ ಪಿಎಂಜಿಎಸ್‌ವೈ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್‌ ಹುದ್ದೆಯಲ್ಲಿದ್ದಾರೆ. ತಂದೆಯ ಮಾರ್ಗದಲ್ಲೇ ನಡೆಯಬೇಕು ಎನ್ನುವ ಗುರಿಯೊಂದಿಗೆ ಸಿವಿಲ್‌ ಎಂಜಿನಿಯರಿಂಗ್‌ ಓದುತ್ತಿದ್ದೇನೆ’ ಎಂದರು.

‘ಕೇಳಿದ ಪಾಠಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಿದ್ದೆ. ಅಂದಿನ ಪಾಠಗಳನ್ನು ಅದೇ ದಿನ ಓದಿಕೊಳ್ಳುತ್ತಿದ್ದೆ. ಬರೀ ಕಣ್ಣುಹಾಯಿಸಿದರೆ ಸಾಕಾಗುವುದಿಲ್ಲ. ಮನನ ಮಾಡಿಕೊಳ್ಳುವುದು ತುಂಬಾ ಮುಖ್ಯ. ಇದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಬಹಳ ಅನುಕೂಲವಾಗಿದೆ‘ ಎಂದರು.

‘ಪಾಲಕರು ನನಗೆ ಸ್ವತಂತ್ರವಾಗಿ ಓದುವುದಕ್ಕೆ ಅವಕಾಶ ಮಾಡಿದ್ದಾರೆ.  ಶಿಕ್ಷಣದಲ್ಲಿ ಮನಸ್ಸನ್ನು ಸಂಪೂರ್ಣವಾಗಿ ಕೇಂದ್ರಿಕೃತ ಮಾಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ. ವಿದ್ಯಾರ್ಥಿನಿಯರು ಶಿಕ್ಷಣದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು