ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ | ಕೂಲಿ ಪಾವತಿ ಗೊಂದಲ: ನರೇಗಾ ಕಾರ್ಮಿಕರ ಆಕ್ರೋಶ

Published 23 ಜನವರಿ 2024, 14:23 IST
Last Updated 23 ಜನವರಿ 2024, 14:23 IST
ಅಕ್ಷರ ಗಾತ್ರ

ಕವಿತಾಳ: ‘ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಜನಸ್ಪಂದನ ಸಭೆ ನಡೆಸಲಾಗುತ್ತಿದೆ. ಸಾರ್ವಜನಿಕರ ಕುಂದು ಕೊರತೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗುವುದು’ ಎಂದು ಶಾಸಕ ಆರ್‌.ಬಸನಗೌಡ ತುರ್ವಿಹಾಳ ಹೇಳಿದರು.

ಸಮೀಪದ ಅಮೀನಗಡ ಗ್ರಾಮದಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವೈಯಕ್ತಿಕ ಹಾಗೂ ಗ್ರಾಮದಲ್ಲಿನ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕುಡಿಯುವ ನೀರು, ಚರಂಡಿ ಅವ್ಯವಸ್ಥೆ, ಅಂಗನವಾಡಿ ಬಳಿ ಗಲೀಜು ಉಂಟಾಗಿರುವುದು, ಜೆಜೆಎಂ ಕಾಮಗಾರಿಗಾಗಿ ಅಗೆದ ಗುಂಡಿಗಳನ್ನು ಮುಚ್ಚುವುದು, ಭೋಜನಾಲಯ ನಿರ್ಮಾಣ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಕುರಿತು ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.

‘ಉದ್ಯೋಗ ಖಾತರಿ ಯೋಜನೆಯಡಿ ಒಂದು ವಾರ ಕೆಲಸ ಮಾಡಿದ ಕೂಲಿಕಾರರ ಖಾತೆಗೆ ಕೇವಲ ₹ 20 ರಿಂದ ₹ 100 ಜಮೆಯಾಗಿದ್ದು, ಗುಳೆ ಹೋದ ಕೂಲಿಕಾರರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಲಾಗಿದೆ’ ಎಂದು ರಶೀದ್, ಪಂಪಾಪತಿ ಮತ್ತು ಖಾಜಾಸಾಬ್‌ ಆಕ್ರೋಶ ವ್ಯಕ್ತಪಡಿಸಿದರು.

‘5ಎ ನಾಲೆ ನಿರ್ಮಾಣದ ಕುರಿತು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗುವುದುʼ ಎಂದು ಶಾಸಕರು ಹೇಳಿದರು.

ಯತಗಲ್‌ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಬಸ್‌ ಸೌಲಭ್ಯ, ಅರಣ್ಯ ಇಲಾಖೆ ವಶಪಡಿಸಿಕೊಂಡ ಭೂಮಿಯನ್ನು ಮರಳಿ ರೈತರಿಗೆ ಕೊಡಿಸುವುದು, ಸ್ಮಶಾನಕ್ಕೆ ಜಾಗ ಮಂಜೂರು, ಶಾಲೆಗೆ ವಿದ್ಯುತ್‌ ಸಂಪರ್ಕ, ನೀರಿನ ಸೌಲಭ್ಯ, ಹೆಚ್ಚುವರಿ ಕೊಠಡಿ ಮಂಜೂರು ಮಾಡುವುದು, ಚರಂಡಿ, ಕಾಂಕ್ರೀಟ್‌ ರಸ್ತೆ ನಿರ್ಮಾಣ, ಶಾಲೆ ಸ್ಥಳಾಂತರ ಮತ್ತು ಬಸ್‌ ತಂಗುದಾಣ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮೌನೇಶ ದೊಡ್ಮನಿ, ತಾಲ್ಲೂಕು ಪಂಚಾಯಿತಿ ಇಒ ಉಮೇಶ, ಬಿಇಒ ಚಂದ್ರಶೇಖರ ದೊಡ್ಮನಿ, ಟಿಎಚ್‌ಒ ಡಾ.ಶರಣಬಸವರಾಜ ಪಾಟೀಲ, ಜೆಸ್ಕಾಂ ಎಇಇ ವೆಂಕಟೇಶ, ಕಂದಾಯ ಇಲಾಖೆಯ ಅನಿತಾ, ನಿಂಗಪ್ಪ, ರವಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT