ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ಶಾಲಾ ಆವರಣದಲ್ಲಿಯೇ ತ್ಯಾಜ್ಯ!

ನಗರಸಭೆಯ ಶೌಚಾಲಯದ ನೀರಿನಿಂದ ವಿದ್ಯಾರ್ಥಿಗಳಿಗೆ ನಿತ್ಯ ತೊಂದರೆ
Last Updated 4 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಸಿಂಧನೂರು: ‘ದೀಪದ ಕೆಳಗೆ ಕತ್ತಲು ಇರುವಂತೆ’ ನಗರಸಭೆ ಕಾರ್ಯಾಲಯದ ಹಿಂಭಾಗದಲ್ಲಿ ಇರುವ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನೆ ನಗರಸಭೆ ಅಧಿಕಾರಿಗಳು ಕೊಳಚೆಯನ್ನಾಗಿ ನಿರ್ಮಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ.

ನಗರಸಭೆಯ ಮೂತ್ರಾಲಯ ಮತ್ತು ಶೌಚಾಲಯದ ನೀರನ್ನು ಕಟ್ಟಡ ಹಿಂಭಾಗದಲ್ಲಿ ತೆರೆದ ಚರಂಡಿಗೆ ಬಿಡಲಾಗಿದೆ. ಶಾಲೆಯ ಬಿಸಿಯೂಟದ ಕೋಣೆಯ ಮುಂಭಾಗದಲ್ಲಿಯೇ ಚರಂಡಿ ಹರಿಯುತ್ತಿದೆ. ವಿದ್ಯಾರ್ಥಿಗಳು ಅಲ್ಲಿಯೇ ಕುಳಿತು ಬಿಸಿಯೂಟ ಸೇವಿಸುವ ದುಸ್ಥಿತಿಯಿದೆ. ಈ ಸ್ಥಿತಿ ಹಲವಾರು ತಿಂಗಳುಗಳಿಂದ ಇದ್ದರೂ ಸಹ ಇತ್ತ ನಗರಸಭೆ ಅಧಿಕಾರಿಗಳು ಗಮನ ಹರಿಸದೆ, ತಮಗೇನು ಸಂಬಂಧವಿಲ್ಲದಂತೆ ಮೌನ ವಹಿಸಿದ್ದಾರೆ. ಮುಖ್ಯಶಿಕ್ಷಕರು, ಪಾಲಕರು ನಗರಸಭೆಯ ಅಧಿಕಾರಿಗಳಿಗೆ ಈ ಪರಿಸ್ಥಿತಿಯನ್ನು ಮನವರಿಕೆ ಮಾಡಿದಾಗ್ಯೂ ಪ್ರತಿಫಲ ಶೂನ್ಯವಾಗಿದೆ ಎಂದು ಕೋಟೆ ಬಡಾವಣೆಯ ಬಸಪ್ಪ, ಮಲ್ಲಪ್ಪ ಮತ್ತಿತರರು ಆಪಾದಿಸಿದ್ದಾರೆ.

ಕೋಟೆ ಬಡಾವಣೆಯ ಮಕ್ಕಳು ಈ ಶಾಲೆಯಲ್ಲಿ ಪ್ರತಿನಿತ್ಯ ನಗರಸಭೆ ಸೃಷ್ಟಿಸಿದ ದುರ್ನಾತದಿಂದ ತಲೆನೋವು, ವಾಂತಿ, ಭೇದಿಯಿಂದ ನರಳುವಂತಾಗಿದೆ. ಕೊಳಚೆಯ ದುರ್ವಾಸನೆಗೆ ಬೇಸತ್ತ ಕೆಲ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಹ ಹಿಂಜರಿಯುತ್ತಿದ್ದಾರೆ ಎಂದು ಮದರ್‌ಸಾಬ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ತಮ್ಮ ಕಚೇರಿಯನ್ನೇ ಶುದ್ಧವಾಗಿಟ್ಟುಕೊಂಡು ನೈರ್ಮಲ್ಯ ಕಾಪಾಡಿಕೊಳ್ಳದ ನಗರಸಭೆ ಸ್ವಚ್ಛತಾ ಅಭಿಯಾನ ಮಾಡಿ ಸ್ವಚ್ಛ ಭಾರತದ ಪಾಠ ಹೇಳುತ್ತಿರುವುದು ವಿಪರ್ಯಾಸವಾಗಿದೆ’ ಎಂದು ನಗರಾಭಿವೃದ್ದಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ವೀರಭದ್ರಪ್ಪ ಕುರಕುಂದಿ ಟೀಕಿಸುತ್ತಾರೆ.

ಶೌಚಾಲಯದಲ್ಲಿ ಬಳಸಿದ ನೀರಿನ ಪರಿಣಾಮದಿಂದ ನಗರಸಭೆಯ ಹಿಂಭಾಗದ ಕಟ್ಟಡಕ್ಕೆ ತೇವಾಂಶ ಆವರಿಸಿದ್ದು, ಕಟ್ಟಡ ಬೀಳುವ ಅಪಾಯವೂ ಇದೆ ಎನ್ನುತ್ತಾರೆ ಕಟ್ಟಡ ಕಾರ್ಮಿಕ ಜಗದೀಶ.

ನಗರಸಭೆ ಕಟ್ಟಡ ನಿರ್ಮಾಣಗೊಂಡು ಐದಾರು ವರ್ಷ ಮಾತ್ರ ಗತಿಸಿದ್ದು, ಈಗಲೇ ಕಟ್ಟಡದಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟು ಬೀಳುವ ಹಂತಕ್ಕೆ ಬಂದರೆ ಪರಿಸ್ಥಿತಿ ಏನೆಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ಈ ಕುರಿತು ಕೋಟೆ ಏರಿಯಾದ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಪಾಟೀಲ್ ಅವರನ್ನು ಸಂಪರ್ಕಿಸಿದಾಗ, ‘ಈಗಾಗಲೇ ಪರಿಸರ ಎಂಜನಿಯರ್ ಸುಬ್ರಮಣ್ಯಂ, ಹಿರಿಯ ನೈರ್ಮಲ್ಯ ನಿರೀಕ್ಷಕರಾದ ಜಗದೀಶ ಮತ್ತು ಕಿಶನ್‍ರಾವ್ ಅವರ ಗಮನಕ್ಕೆ ತಂದರೂ ಸಹ ಸ್ಪಂದಿಸಿಲ್ಲ. ಚರಂಡಿ ಸ್ವಚ್ಛತೆಗೆ ಬೇಕಾಗುವ ಎಲ್ಲ ಸಲಕರಣೆ, ಪೌರಕಾರ್ಮಿಕರು ಇದ್ದರೂ ಸಹ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳು ಕಷ್ಟ ಅನುಭವಿಸಬೇಕಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ನಗರಸಭೆ ಪೌರಾಯುಕ್ತರು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಕೋಟೆ ಶಾಲೆಯ ಆವರಣದಲ್ಲಿ ಕೊಳಚೆ ನೀರು ಇಲ್ಲದಂತೆ ಕ್ರಮಕೈಗೊಂಡು ಸ್ವಚ್ಛತೆ ಕಾಪಾಡುವ ಮೂಲಕ ವಿದ್ಯಾರ್ಥಿಗಳ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಗರಸಭೆ ಮುತ್ತಿಗೆ ಚಳವಳಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮನುಜಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT