ಶನಿವಾರ, ಜನವರಿ 28, 2023
15 °C
ರಾಯಚೂರು ಕೃಷಿ ವಿವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ

‘ಮಣ್ಣು ಸಂರಕ್ಷಣೆ ರೈತರಿಂದಲೇ ಸಾಧ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಭವಿಷ್ಯಕ್ಕಾಗಿ ಮಣ್ಣು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.‌ ಇದು ರೈತರಿಂದ ಮಾತ್ರ ಸಾಧ್ಯ. ಇದಕ್ಕಾಗಿ ಸೂಕ್ತ ಬೇಸಾಯ ಪದ್ಧತಿಗಳನ್ನು  ರೈತರು ಅಳವಡಿಸಿಕೊಳ್ಳಬೇಕು ಎಂದು ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ವಿಸ್ತರಣಾ ನಿರ್ದೇಶಕ ಡಾ.ಎನ್‌.ಎ.ಯಲೇದಹಳ್ಳಿ ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ರಾಯಚೂರು ಐಸಿಎಆರ್‌–ಕೃಷಿ ವಿಜ್ಞಾನ ಕೇಂದ್ರ,  ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗ, ಸುಜಲಾ–4/ರಿವಾರ್ಡ್‌ ಯೋಜನೆ–ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿಕ ಸಮಾಜ, ರಿಲಯನ್ಸ್‌ ಫೌಂಡೇಷನ್‌, ಇಫ್ಕೊ, ಮೈರಾಡ್‌ನಿಂದ ಸೋಮವಾರ ಏರ್ಪಡಿಸಿದ್ದ ‘ವಿಶ್ವ ಮಣ್ಣು ದಿನಾಚರಣೆ–2022’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ರೈತರು ಸಾವಯವ ಕೃಷಿ ಪದ್ಧತಿ ಅಥವಾ ಸಸ್ಯಶೇಷಗಳನ್ನು ಮಣ್ಣಿನಲ್ಲಿ ಸೇರಿಸುವ ವಿಧಾನ ಅನುಸರಿಸಬೇಕು. ಸರ್ಕಾರ ಕೂಡಾ ಸಸ್ಯಜನ್ಯಗಳನ್ನು ಕತ್ತರಿಸಿ, ಮಣ್ಣೊಳಗೆ ಸೇರಿಸುವ ಯಂತ್ರೋಪಕರಣಗಳನ್ನು ಸಹಾಯಧಾನದಲ್ಲಿ ಒದಗಿಸಲು ಯೋಜನೆ ರೂಪಿಸಬೇಕು. ಪರ್ಯಾಯ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ಗುಣಮಟ್ಟ ಕಾಯ್ದುಕೊಳ್ಳಬಹುದು ಎಂದರು.

ಮಣ್ಣಿನಿಂದಲೇ ಜೀವನವು ಆರಂಭವಾಗುತ್ತದೆ ಮತ್ತು ಅಂತ್ಯವಾಗುತ್ತದೆ. ರೈತರು ನಿಜವಾಗಿಯೂ ಮಣ್ಣಿನ‌ ಮಕ್ಕಳು. ಮುಂದಿನ ಪೀಳಿಗೆಗೆ ಸುರಕ್ಷಿತವಾದ ಮಣ್ಣು ಕೊಡಬೇಕಿದೆ. ಮಣ್ಣಿನ ಫಲವತ್ತತೆ ಹಾಳಾದರೆ ಇಡೀ ಆಹಾರ ಜಾಲ ತೊಂದರೆಗೆ ಸಿಲುಕುತ್ತದೆ ಎಂದು ಹೇಳಿದರು.

ಭೂಮಿಯ ಮೇಲೆ ಮಣ್ಣು ಕೂಡಾ ಜೀವಂತವಾಗಿದೆ. ಮಣ್ಣಿನ ಮೇಲಿರುವ ಜೀವಗಳಿಗಿಂತ ಅದರೊಳಗಡೆ ಅತಿಹೆಚ್ಚು ಜೀವಿಗಳಿವೆ. ಬೆಳೆಯ ಉತ್ಪಾದಕತೆ ಹೆಚ್ಚಿಸಲು ಮಣ್ಣೊಂದೆ ಆಧಾರ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ. ದೇಸಾಯಿ ಮಾತನಾಡಿ, ಭೂಮಿಯ ಮೇಲ್ಪದರನ್ನು ಮಣ್ಣು ಎಂದು ಕರೆಯುತ್ತೇವೆ.‌ ಮನುಕುಲಕ್ಕೆ ಆಧಾರವೇ ಈ ಮಣ್ಣು, ಅದನ್ನು ಸಂರಕ್ಷಿಸುವ ಕಾರ್ಯ ಮೊದಲಿಂದಲೂ ಹಿರಿಯರು ಮಾಡಿಕೊಂಡು ಬರುತ್ತಿದ್ದಾರೆ. ಭೂಮಿತಾಯಿ ಎಂದು ಗೌರವದಿಂದ ಸಂಭೋದಿಸುತ್ತಾ ಬರಲಾಗಿದೆ. ಈ ವರ್ಷ ‘ಮಣ್ಣಿನಿಂದಲೇ ಆಹಾರ ಆರಂಭ‘ ಎನ್ನುವ ಘೋಷವಾಕ್ಯ ನೀಡಲಾಗಿದೆ ಎಂದು ತಿಳಿಸಿದರು.

ಮಣ್ಣಿನಿಂದಲೇ ಹಸಿರುಕ್ರಾಂತಿ ಆಯಿತು. ಭೂಮಿಯ ಸುಸ್ಥಿರತೆ ಕಾಪಾಡಿ ಕೊಳ್ಳಬೇಕಾಗಿದೆ. ಭೂಮಿಯನ್ನು ಇರುವ ಸ್ಥಿತಿಯಲ್ಲೇ ಬಳಸಿಕೊಂಡು ಮುಂದಿನ ಪೀಳಿಗೆಗೆ ಬಿಟ್ಟುಹೋಗಬೇಕು. ಮಣ್ಣಿನ ಆರೋಗ್ಯ ಹದಗೆಟ್ಟರೆ ಉತ್ಪಾದಕತೆ ಕಡಿಮೆಯಾಗುತ್ತದೆ. ಮಣ್ಣಿನ ಸಂರಕ್ಷಣೆ ಬಹಳ‌ ಮುಖ್ಯ. ನಿಸರ್ಗ ಕೃಷಿ ಪದ್ದತಿ ಇತ್ತಿಚೆಗೆ‌ ವ್ಯಾಪಕವಾಗುತ್ತಿದೆ. ಗೋವು ಆಧರಿತ ಕೃಷಿಯಿಂದಲೂ ಭೂಮಿಯ ಫಲವತ್ಥತೆ ಕಾಯ್ದು ಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎಂ.ಕೆ.ನಾಯ್ಕ್‌ ಮಾತನಾಡಿ, ವಿಶ್ವದಲ್ಲಿ ಶೇ 4 ರಷ್ಟು ನೀರು, ಶೇ 3 ರಷ್ಟು ಅರಣ್ಯ, ಶೇ 12 ರಷ್ಟು ಪ್ರಾಣಿಗಳು ಹಾಗೂ ಶೇ 16 ರಷ್ಟು ಮನುಕುಲ ಭಾರತದಲ್ಲಿದೆ. ಇಡೀ ಭೂಮಂಡಲದಲ್ಲಿ ಮನುಕುಲದ ಸಾಮರಸ್ಯ ಕಾಪಾಡಬೇಕಿದೆ. ಇದರಿಂದ ಮಾತ್ರ ಮಾಲಿನ್ಯ ತಡೆದು ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಕೃಷಿ ವಿಜ್ಞಾನ ಕೇಂದ್ರ ಮಣ್ಣು ವಿಜ್ಞಾನಿ ಡಾ.ಎಸ್‌.ಎನ್‌.ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಗತಿಪರ ರೈತ ಶಿವಕುಮಾರ್‌ ಪಾಟೀಲ ಗುಡಿಯಾಳ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಕೊಟ್ರೇಶಪ್ಪ ಬಿ.ಕೋರಿ, ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ನಯೀಮ್‌ ಹುಸೇನ್‌, ಆಡಳಿತ ಅಧಿಕಾರಿ ಡಾ.ಜಾಗೃತಿ ದೇಶಮಾನ್ಯೆ, ನಿವೃತ್ತ ಕೃಷಿ ಉಪನಿರ್ದೇಶಕ ಸಿದ್ದಾರೆಡ್ಡಿ ಮಾತನಾಡಿದರು.

ವ್ಯವಸ್ಥಾಪನಾ ಮಂಡಳಿ ಸದಸ್ಯ ಸುನೀಲಕುಮಾರ ವರ್ಮಾ, ಕುಲಸಚಿವ ಡಾ.ಎಂ.ವೀರನಗೌಡ, ಡೀನ್‌ ಡಾ.ಗುರುರಾಜ ಸುಂಕದ ಮತ್ತಿತರರು ಇದ್ದರು.

ರಾಯಚೂರು ಕೃಷಿ ಮಹಾವಿದ್ಯಾಲಯ ಮಣ್ಣು ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ನಾರಾಯಣರಾವ್‌ ಸ್ವಾಗತಿಸಿದರು. ಮಣ್ಣು ವಿಜ್ಞಾನಿ ಡಾ.ರಾಜೇಶ ಎನ್.ಎಲ್‌. ಪರಿಚಯಿಸಿದರು. ಸ್ನಾತಕೋತ್ತರ ವಿದ್ಯಾರ್ಥಿ ರವಿರಾಜ ಪ್ರಾರ್ಥಿಸಿದರು. ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ಹೇಮಲತಾ ಕೆ.ಜೆ. ನಿರೂಪಿಸಿದರು. ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಪ್ರಹ್ಲಾದ್‌ ಉಭಾಳೆ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು