ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಎಲ್ಲರಿಗೂ ಆರೋಗ್ಯ ಕಾರ್ಡ್ ವಿತರಣೆಗೆ ಪಣ

Published 5 ಜನವರಿ 2024, 5:39 IST
Last Updated 5 ಜನವರಿ 2024, 5:39 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಜಿಲ್ಲಾ ಪಂಚಾಯಿತಿ ಹೊಸ ವರ್ಷದ ಆರಂಭದಲ್ಲೇ ಹೊಸದೊಂದು ತೀರ್ಮಾನ ಕೈಗೊಂಡು ಒಳ್ಳೆಯ ಕಾರ್ಯಕ್ಕೆ ಮುಂದಾಗಿದೆ. ಅದೆಂದರೆ ನಾಲ್ಕು ಇಲಾಖೆಗಳ ಸಹಕಾರದೊಂದಿಗೆ ಜನವರಿ 5ರಿಂದ ಎಲ್ಲರಿಗೂ ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್ ವಿತರಿಸಲು ಮುಂದಾಗಿದೆ.

ಜಿಲ್ಲೆಯಲ್ಲಿ 16.26 ಲಕ್ಷ ಜನ ಇದ್ದಾರೆ. ಆರೋಗ್ಯ ಇಲಾಖೆಯಿಂದ ಈವರೆಗೆ 4 ಲಕ್ಷ ಜನರಿಗೆ ಮಾತ್ರ ಆಯುಷ್ಮಾನ್‌ ಭಾರತ ಕಾರ್ಡ್ ವಿತರಿಸಲು ಸಾಧ್ಯವಾಗಿದೆ. ಇದೀಗ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ ಹೊಂದಿದ ಎಲ್ಲರಿಗೂ 100 ದಿನಗಳ ಅವಧಿಯಲ್ಲಿ ಕಾರ್ಡ್‌ ವಿತರಿಸಲು ದೃಢ ನಿರ್ಧಾರ ಮಾಡಿದೆ.

ಜಿಲ್ಲಾ ಪಂಚಾಯಿತಿಯು ಜಿಲ್ಲೆಯ 175 ಪಂಚಾಯಿತಿಗಳಲ್ಲಿ ನೋಂದಣಿ ಮಾಡಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಿದೆ. ಇದಕ್ಕೆ ಆರೋಗ್ಯ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಹಕಾರ ಪಡೆದುಕೊಂಡಿದೆ. ಇದಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನೇ ನಿಯೋಜಿಸಿದೆ.

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಆರೋಗ್ಯ ಕಾರ್ಡ್‌ಗಳು ವಿತರಣೆಯಾಗಲಿವೆ. ನಿತ್ಯ ಕನಿಷ್ಠ 7 ಸಾವಿರ ಜನರ ನೋಂದಣಿ ಮಾಡಿಕೊಂಡರೂ ನಿಗದಿತ ಗುರಿ ತಲುಪಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರಬಾಬು ಹೇಳುತ್ತಾರೆ,

ತಾಂತ್ರಿಕ ದೋಷಕ್ಕೂ ಪರಿಹಾರ: ಗ್ರಾಮೀಣ ಪ್ರದೇಶದಲ್ಲಿ ಎಲ್ಲರ ಬಳಿಯೂ ಮೊಬೈಲ್‌ಗಳು ಇಲ್ಲ. ಹೀಗಾಗಿ ನೋಂದಣಿ ಮಾಡಿಕೊಳ್ಳಲು ಬರುವ ವ್ಯಕ್ತಿಯ ಹೆಬ್ಬೆರಳು ಗುರುತು ಪಡೆದು ಆರೋಗ್ಯ ಕಾರ್ಡ್ ವಿತರಿಸಲು ಯೋಚಿಸಲಾಗಿದೆ.

ಆಧಾರ್‌ಕಾರ್ಡ್‌ ಹಾಗೂ ಪಡಿತರಚೀಟಿಯಲ್ಲಿ ಒಂದೇ ನಂಬರ್‌ ಇದ್ದರೆ ಆರೋಗ್ಯ ಕಾರ್ಡ್‌ ಮಾಡುವುದು ಸರಳ ಹಾಗೂ ಸುಲಭ. ಮೊಬೈಲ್‌ ನಂಬರ್‌ಗೆ ಬರುವ ಓಟಿಪಿಗಳನ್ನು ದಾಖಲಿಸಿಕೊಂಡು ತ್ವರಿತವಾಗಿ ಕಾರ್ಡ್‌ಗಳನ್ನು ಕೊಡಲು ಸಾಧ್ಯವಾಗಲಿದೆ ಎಂದು ಡಿಎಚ್‌ಒ ತಿಳಿಸುತ್ತಾರೆ.

‘ಆರೋಗ್ಯ ಕಾರ್ಡ್‌ ವಿತರಣೆಗೆ ಗ್ರಾಮ ಒನ್‌ ಕೇಂದ್ರಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕೆ ಕಂದಾಯ ಇಲಾಖೆಯ ಪೂರ್ಣ ಸಹಕಾರ ಕೊಡುವ ಭರವಸೆ ನೀಡಿದೆ. ಪಂಚಾಯಿತಿ ಕಚೇರಿ ಹಾಗೂ ಗ್ರಾಮ ಒನ್‌ ಕಚೇರಿಗಳಲ್ಲೂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವ ಕಾರಣ ಎಲ್ಲರಿಗೂ ಆರೋಗ್ಯ ಕಾರ್ಡ್‌ ಕೊಟ್ಟು ನಿಗದಿತ ಗುರಿ ಸಾಧಿಸಲು ಸಾಧ್ಯವಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾ ಅಧಿಕಾರಿ ರಾಹುಲ್‌ ಪಾಂಡ್ವೆ ಹೇಳುತ್ತಾರೆ.

ಜಿಲ್ಲಾ ಪಂಚಾಯಿತಿ ಡಿಸೆಂಬರ್ ಅಂತ್ಯದಲ್ಲಿ ಮಹಿಳೆಯರ ಉಚಿತ ಆರೋಗ್ಯ ತಪಾಸಣೆ ನಡೆಸಿ ಅವರಿಗೆ ಆರೋಗ್ಯ ಸೇವೆಗಳ ಮಾಹಿತಿ ಒದಗಿಸಿದೆ. ಹೊಸ ವರ್ಷದಲ್ಲಿ ಇನ್ನೂಒಂದು ಹೆಜ್ಜೆ ಮುಂದಿಟ್ಟು ಸಾರ್ವಜನಿಕರಿಗೆ ಆರೋಗ್ಯ ಕಾರ್ಡ್‌ ಕೊಡಲು ಮುಂದಾಗಿದೆ.

ಇಂದಿನಿಂದ ಗ್ರಾಮದಲ್ಲೇ ಆರೋಗ್ಯ ಕಾರ್ಡ್‌ ಪಡೆಯಲು ಅವಕಾಶ
ಜ.5ರಿಂದ ಐದು ವರ್ಷ ಮೇಲ್ಪಟ್ವರು ತಮ್ಮ ಆಧಾರ್ ಕಾರ್ಡ್ ಪಡಿತರ ಚೀಟಿ ಆಧಾರ್ ನೋಂದಾಯಿತ ಮೊಬೈಲ್ ನಂಬರ್‌ ಇರುವ ಮೊಬೈಲ್‌ ತೆಗೆದೊಕೊಂಡು ಸಮೀಪದ ಗ್ರಾಮ ಒನ್‌ ಕೇಂದ್ರಕ್ಕೆ ಹೋಗಿ ಕಾರ್ಡ್‌ ಮಾಡಿಕೊಳ್ಳಬಹುದಾಗಿದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ₹10 ಶುಲ್ಕದೊಂದಿಗೆ ನೀಡಲಾಗುತ್ತದೆ. ಗ್ರಾಮ ಒನ್ ಒನ್ ಮತ್ತು ಸೇವ ಸಿಂಧು ಕೇಂದ್ರಗಳಲ್ಲೂ ಕನಿಷ್ಠ ಶುಲ್ಕದೊಂದಿಗೆ ಆರೋಗ್ಯ ಕಾರ್ಡ್‌ ನೀಡಲಾಗುವುದು. ಈ ಯೋಜನೆಯು ಬಿ.ಪಿ.ಎಲ್ ಕಾರ್ಡ್ ಹೊಂದಿದವರಿಗೆ ₹ 5 ಲಕ್ಷ ವರೆಗೆ ವೈದ್ಯಕೀಯ ಸೌಲಭ್ಯ ಒಂದು ವರ್ಷದವರಿಗೆ ಮತ್ತು ಎ.ಪಿ.ಎಲ್ ಕಾರ್ಡ್ ಹೊಂದಿದವರಿಗೆ ₹ 1.50 ಲಕ್ಷ ವರೆಗೆ ವೈದ್ಯಕೀಯ ಸೌಲಭ್ಯ ದೊರೆಯುತ್ತದೆ. ಕ್ಲಿಷ್ಟಕರ ಚಿಕಿತ್ಸೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ನೀಡಲಾಗುತ್ತದೆ. ಇಲ್ಲದಿದ್ದರೆ ರೆಫರಲ್ ನೀಡಲಾಗುತ್ತದೆ. ರೆಫರಲ್ ಪಡೆದುಕೊಂಡ ರೋಗಿಯು ತಾನು ಇಚ್ಚಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹು ಎಂದು ಡಿಎಚ್‌ಒ ಡಾ.ಸುರೇಂದ್ರಬಾಬು ತಿಳಿಸಿದ್ದಾರೆ.

Cut-off box -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT