ಶನಿವಾರ, ಜುಲೈ 31, 2021
27 °C
ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ವಿಡಿಯೊ ಕಾನ್ಫರೆನ್ಸ್‌

ರಾಮನಗರ: 570 ಹಾಸಿಗೆಯ ಕೋವಿಡ್‌ ಕೇರ್ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕೋವಿಡ್-19 ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ 570 ಹಾಸಿಗೆಗಳ ಸೆಂಟರ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ರಾಮನಗರ ಜಿಲ್ಲಾಡಳಿತದೊಂದಿಗೆ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡ ವೇಳೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಸಚಿವರಿಗೆ ಮಾಹಿತಿ ನೀಡಿದರು. ಪ್ರತಿ ತಾಲ್ಲೂಕಿನಲ್ಲಿ 500 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಅನ್ನು ಸ್ಥಾಪಿಸಲು ಸೂಚಿಸಲಾಗಿತ್ತು. ಅದರಂತೆ ಪ್ರಾರಂಭದಲ್ಲಿ 570 ಹಾಸಿಗೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ಸಾಮರ್ಥ್ಯವನ್ನು ಪ್ರತಿ ತಾಲ್ಲೂಕಿನಲ್ಲಿ 500ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯಕ್ಕೆ ವಿಸ್ತರಿಸುವ ನೀಲ ನಕ್ಷೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿಕೊಂಡಿದೆ ಎಂದು ವಿವರಿಸಿದರು.

500 ಹಾಸಿಗೆಗಳ ಆಸ್ಪತ್ರೆಯನ್ನು ಹಾಸ್ಟೆಲ್‌ ಇಲ್ಲವೇ ಕಲ್ಯಾಣ ಮಂಟಪಗಳಲ್ಲಿ ಸ್ಥಾಪಿಸುವ ಬಗ್ಗೆ ಪ್ರತಿ ತಾಲ್ಲೂಕಿನಲ್ಲೂ ಸ್ಥಳಗಳನ್ನು ಗೊತ್ತುಪಡಿಸಿಕೊಳ್ಳಲಾಗಿದೆ. ಯಾವ ತಾಲ್ಲೂಕಿನಲ್ಲಿ ಯಾವ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅದನ್ನು ವಹಿಸಬೇಕು ಎನ್ನುವ ಬಗ್ಗೆ ಕ್ರಿಯಾ ಯೋಜನೆಯನ್ನು ಮಾಡಿಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಚಿವರಿಗೆ ವಿವರಿಸಿದರು.

ಸುಸಜ್ಜಿತವಾಗಿಸಲು ಸೂಚನೆ: ಪ್ರತಿಯೊಂದು ಕೋವಿಡ್-19 ಕೇರ್ ಸೆಂಟರ್ ಸುಸಜ್ಜಿವಾಗಿರಬೇಕು. ಯಾವುದೇ ಲೋಪ ಬರಬಾರದು. ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆಮ್ಲಜನಕವನ್ನು ಅಳೆಯುವ ಆಕ್ಸಿಮೀಟರ್ ಅನ್ನು ಇರಬೇಕು. ಪ್ರತಿ ರೋಗಿಗೂ ಅಗತ್ಯ ಪರಿಕರಗಳಿಂದ ಕೂಡಿರುವ ‘ಕಿಟ್’ ಅನ್ನು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಆಂಬುಲೆನ್ಸ್: ಪ್ರತಿ ತಾಲ್ಲೂಕು ಸೆಂಟರ್‌ಗಳಿಗೂ ಎರಡು ಇಲ್ಲವೇ ಮೂರು ಆಂಬ್ಯುಲೆನ್ಸ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಯಾವುದೇ ರೋಗಿಯಲ್ಲಿ ಆಮ್ಲಜನಕದ ಇಳಿಕೆ ಕಂಡುಬಂದ ಕೂಡಲೇ ಅವರಿಗೆ ತೊಂದರೆಯಾಗದಂತೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ಇಲ್ಲದೆ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳಿಗೆ ಸಾಗಿಸುವ ವ್ಯವಸ್ಥೆಯಾಗಬೇಕು. ಇದರಲ್ಲಿ ಯಾವುದೇ ರೀತಿಯಲ್ಲೂ ಲೋಪವಾಗಬಾರದು ಎಂದು ಅಶ್ವತ್ಥನಾರಾಯಣ ತಿಳಿಸಿದರು. ಜಿಲ್ಲೆಗಾಗಿ ಪಡೆದುಕೊಳ್ಳುವ ಎಲ್ಲ ಆಂಬುಲೆನ್ಸ್‌ಗಳಿಗೆ ಜಿಪಿಎಸ್ ಅನ್ನು ಅಳವಡಿಸಿ ಅವುಗಳ ಜಾಡನ್ನು ಜಿಲ್ಲೆಯಲ್ಲಿರುವ ವಾರ್ ರೂಂನ ಮೂಲಕ ಗಮನಿಸಬೇಕು. ಅವುಗಳ ಓಡಾಟದ ಬಗ್ಗೆ ನೈಜ ಸಮಯದಲ್ಲಿ ಮಾಹಿತಿ ಪಡೆದುಕೊಳ್ಳುವಂತೆ ವ್ಯವಸ್ಥೆಮಾಡಿಕೊಳ್ಳಲು ಹೇಳಿದರು.

ಪರೀಕ್ಷಾ ಯಂತ್ರ: ರಾಮನಗರ ಜಿಲ್ಲಾ ಕೇಂದ್ರದಲ್ಲಿ ಕೋವಿಡ್-19 ಮಾದರಿಗಳನ್ನು ಪರೀಕ್ಷಿಸುವ ಲ್ಯಾಬ್ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಚಿವರು, ಒಂದೆರಡು ಗಂಟೆಗಳಲ್ಲಿ ವರದಿಯನ್ನು ನೀಡುವಂತ ಟ್ರೂನಾಟ್ ಪರೀಕ್ಷಾ ಯಂತ್ರಗಳನ್ನು ಅಳವಡಿಸಿಕೊಂಡು ಟ್ಯಾಬ್ ಅನ್ನು ಇನ್ನಷ್ಟು ಉತ್ತಮಗೊಳಿಸುವಂತೆ ತಿಳಿಸಿದರು.

ಟ್ಯಾಬ್‌ಗೆ ಅಗತ್ಯವಿರುವ ನಾಲ್ಕು ಟ್ರೂನಾಟ್ ಪರೀಕ್ಷಾ ಯಂತ್ರಗಳನ್ನು ಮುಂಬೈನಿಂದ ತರಿಸಿಕೊಳ್ಳಲಾಗುತ್ತಿದೆ. ಇನ್ನು 7 ದಿನಗಳ ಒಳಗಾಗಿ ಈ ಯಂತ್ರಗಳನ್ನು ಅಳವಡಿಸಿ ಪರೀಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಮಾಹಿತಿ ನೀಡಿದರು.

ಆಮ್ಲಜನಕ ಪೂರೈಕೆ: ಪ್ರತಿ ತಾಲ್ಲೂಕು ಕೇಂದ್ರಗಳಿಗೆ ಒಂದರಂತೆ ಒಟ್ಟು 5 ಹೈ ಫ್ಲೋ ಆಕ್ಸಿಜನ್ ಪೂರೈಸುವ ಯಂತ್ರಗಳನ್ನು ಖರೀದಿಸಿ ಅವುಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ತಿಳಿಸಿದರು.

ಕಟ್ಟುನಿಟ್ಟಿನ ಕ್ವಾರಂಟೈನ್: ಜಿಲ್ಲೆಯಲ್ಲಿ ಕಳೆದ ಸೋಮವಾರದಿಂದ ಪ್ರತಿದಿನ 15 ರಿಂದ 30ರ ಒಳಗೆ ಪ್ರಕರಣಗಳು ದಾಖಲಾಗುತ್ತಿದೆ. ಈ ಪೈಕಿ ಬಹುತೇಕ ಪ್ರಕರಣಗಳು ಪ್ರಾಥಮಿಕ ಇಲ್ಲವ ಇಲ್ಲವೆ ದ್ವಿತೀಯ ಸಂಪರ್ಕ ಹೊಂದಿರುವರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಕ್ವಾರಂಟೈನ್ ಅನ್ನು ಕಡ್ಡಾಯವಾಗಿ ಜಾರಿಗೆ ತನ್ನಿ. ಅನಗತ್ಯವಾಗಿ ಓಡಾಡಿದರೆ ಕ್ರಮ ಜರುಗಿಸಿ. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರುವವರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಸಚಿವರು ಸೂಚನೆ ನೀಡಿದರು.

ವಿಡಿಯೊ ಕಾನ್ಫರೆನ್ಸ್ ನಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿ.ಪಂ. ಸಿಇಒ ಇಕ್ರಂ, ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ್, ಜಿಲ್ಲಾ ಆರೋಗ್ಯ ಅಧಿಕಾರಿ ನಿರಂಜನ್ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಆರ್‌.ಆರ್‍. ವೈದ್ಯಕೀಯ ಕಾಲೇಜಿಗೆ ಎಚ್ಚರಿಕೆ

ಜಿಲ್ಲೆಯ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡುತ್ತಿರುವ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಅಶ್ವತ್ಥನಾರಾಯಣ ಅವರು ತಕ್ಷಣವೇ ಸ್ಪಂದಿಸುವಂತೆ ಆಸ್ಪತ್ರೆಗೆ ಎಚ್ಚರಿಕೆ ನೀಡಿದರು. ರಾಮನಗರದಿಂದ ಆಂಬುಲೆನ್ಸ್ ನಲ್ಲಿ ಬರುವ ರೋಗಿಗಳನ್ನು ತಕ್ಷಣವೇ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು. ವಿಳಂಬ ಧೋರಣೆ ಸಹಿಸಲು ಅಸಾಧ್ಯ. ತಪ್ಪಿದಲ್ಲಿ ಕ್ರಮಕ್ಕೆ ಮುಂದಾಗುವುದಾಗಿ ಸಚಿವರು ಹೇಳಿದರು.

ಜಿಲ್ಲಾಡಳಿತದೊಂದಿಗೆ ಒಪ್ಪಂದ ಮಾಡಿಕೊಂಡಿರುವ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ರಾಮನಗರದ ರೋಗಿಗಳಿಗೆ 300 ಹಾಸಿಗೆಗಳನ್ನು ಒದಗಿಸುವುದಾಗಿ ತಿಳಿಸಿತ್ತು. ಈ ಬಗ್ಗೆ ವಿವರವಾದ ಪತ್ರವನ್ನು ಬರೆದು ಆಸ್ಪತ್ರೆಗೆ ಎಚ್ಚರಿಕೆ ನೀಡುವಂತೆಯೂ ಸೂಚಿಸಿದರು. ಪ್ರಸಕ್ತ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 51 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ರೋಗಿಗಳನ್ನು ರಾಮನಗರದ ವೈದ್ಯಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ವೈಯಕ್ತಿಕವಾಗಿ ಅವರಿಂದ ಮಾಹಿತಿ ಪಡೆದುಕೊಂಡು ಅಲ್ಲಿರುವ ಸೌಲಭ್ಯ ಮತ್ತು ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. ಜಿಲ್ಲಾಡಳಿತದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ವೈದ್ಯಕೀಯ ಕಾಲೇಜು 15 ವೆಂಟಿಲೇಟರ್ ಮತ್ತು 30 ಐಸಿಯು ವಾರ್ಡ್ ಗಳನ್ನು ನೀಡಬೇಕಾಗಿರುತ್ತದೆ. ಇವುಗಳ ಬಗ್ಗೆಯೂ ಪರೀಕ್ಷಿಸಿ ವರದಿ ನೀಡುವಂತೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು