ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ

ಕನಕಪುರ: ಬೀದಿ ವ್ಯಾಪಾರಿಗಳ ಮನವಿ l ನಿರ್ಬಂಧ ಸಡಿಲಿಸಲು ಒತ್ತಾಯ
Last Updated 13 ಆಗಸ್ಟ್ 2020, 6:30 IST
ಅಕ್ಷರ ಗಾತ್ರ

ಕನಕಪುರ: ರಸ್ತೆಬದಿಯಲ್ಲಿ ವ್ಯಾಪಾರ ಮಾಡದಂತೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕು. ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ರಸ್ತೆಬದಿ ವ್ಯಾಪಾರಿಗಳ ವರ್ತಕರ ಸಂಘ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿತು.

ಕೊರೊನಾ ಸೋಂಕು ತಡೆಗಟ್ಟಲು ಮಾರ್ಚ್‌ನಲ್ಲಿ ಲಾಕ್‌ಡೌನ್‌ ಮಾಡಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗಿಲ್ಲ. ಇದರಿಂದ ಸುಮಾರು 150 ಮಂದಿ ವ್ಯಾಪಾರಿಗಳ ಕುಟುಂಬ ಸಂಕಷ್ಟಕ್ಕೆ ಸಿಲುಕಿಕೊಂಡಿವೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

ರಸ್ತೆಬದಿ ವ್ಯಾಪಾರ ಹೊರತು ಪಡಿಸಿ ನಗರದಲ್ಲಿ ಎಲ್ಲಾ ವ್ಯಾಪಾರ ವಹಿವಾಟಿಗೆ ಅವಕಾಶ ಕೊಡಲಾಗಿದೆ. ರಾಮನಗರ ಮತ್ತು ಚನ್ನಪಟ್ಟಣ ಹಾಗೂ ಮಾಗಡಿಯಲ್ಲೂ ಬೀದಿಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಪಟ್ಟಣದಲ್ಲಿ ಮಾತ್ರ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದರು.

ವ್ಯಾಪಾರ ಮಾಡಿದರೆ ನಗರಸಭೆ ಅಧಿಕಾರಿಗಳೂ ಎಲ್ಲಾ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ₹ 500 ರಿಂದ ₹ 5 ಸಾವಿರ ದಂಡ ವಿಧಿಸುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳಿಂದ ಪ್ರತಿ ದಿನ ನಗರಸಭೆ ₹ 10 ಸುಂಕ ವಸೂಲಿ ಮಾಡಲಾಗುತ್ತಿದೆ. ಇವರಿಂದ ಇಷ್ಟೊಂದು ತೆರಿಗೆ ಪಡೆಯುವ ನಗರಸಭೆ ಈವರೆಗೆ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಕಾರ್ಡನ್ನು ಕೊಟ್ಟಿಲ್ಲ ಎಂದು ಹೇಳಿದರು.

ಲಾಕ್‌ಡೌನ್‌ ವೇಳೆಯಲ್ಲಿ ಸರ್ಕಾರದಿಂದ ಕೊಟ್ಟಂತಹ ಪರಿಹಾರ ಹಣ ಪಡೆಯಬೇಕಾದರೆ ಗುರುತಿನ ಕಾರ್ಡ್‌ ಕಡ್ಡಾಯವಾಗಿ ಬೇಕಿದೆ.ವ್ಯಾಪಾರವನ್ನೇ ನಂಬಿಕೊಂಡಿರುವ ನಮ್ಮ ಕುಟುಂಬಕ್ಕೆ ಬೇರೆ ಆದಾಯವಿಲ್ಲ ಎಂದು ವಿವರಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ವರ್ಷ ಒಡೆಯರ್‌ ಮಾತನಾಡಿ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಗರಸಭೆಗೆ ಸಂಬಂಧಿಸಿದ್ದಾಗಿದ್ದು, ನಗರಸಭೆ ಆಯುಕ್ತರಿಗೆ ಪತ್ರವನ್ನು ಬರೆಯಲಾಗಿದೆ. ರಸ್ತೆಬದಿ ಬೀದಿ ವ್ಯಾಪಾರಿಗಳು ಕೊಟ್ಟಿರುವ ಮನವಿಯನ್ನು ಪರಿಶೀಲಿಸಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.

ರಸ್ತೆಬದಿ ಬೀದಿ ವ್ಯಾಪಾರಿಗಳ ವರ್ತಕರ ಸಂಘದ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ನೀಲಿರಮೇಶ್‌,ಅಧ್ಯಕ್ಷ ಆನಂದ್‌, ಉಪಾಧ್ಯಕ್ಷ ಶ್ರೀನಿವಾಸ್‌, ಕಾರ್ಯದರ್ಶಿ ಮುನಿಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT