ಗುರುವಾರ , ಮೇ 6, 2021
27 °C
ಜಿಲ್ಲಾಡಳಿತದಿಂದ ಅಂಬೇಡ್ಕರ್‌ ಜಯಂತಿ ಆಚರಣೆ

ಅಂಬೇಡ್ಕರ್ ಸಮಾನತೆ ಎತ್ತಿ ಹಿಡಿದ ಸಂತ: ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಡಾ.ಬಿ.ಆರ್. ಅಂಬೇಡ್ಕರ್ ಜೀವನದಲ್ಲಿ ಬಹಳ ಕಷ್ಟ ಅನುಭವಿಸಿ ಭಾರತಕ್ಕೆ ಸಂವಿಧಾನ ನೀಡಿದ್ದಾರೆ. ಅವರು ನೀಡಿರುವ ತತ್ವ ಮತ್ತು ಆದರ್ಶವನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವೇ ಅಭಿವೃದ್ಧಿಯ ಮೂಲ ಮಂತ್ರ. ಜೀವನದ ಸಂಕಷ್ಟಕ್ಕೆ ಶಿಕ್ಷಣ ದಾರಿ ನೀಡುತ್ತದೆ ಎಂದು ನಂಬಿದ್ದ ಅಂಬೇಡ್ಕರ್ ಅವರು ಜ್ಞಾನರ್ಜನೆಗೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದರು. ಆಧುನಿಕ ಭಾರತವನ್ನು ಜಾತಿ ಮತ್ತು ಮೇಲು-ಕೀಳುಗಳಂತ ವ್ಯವಸ್ಥೆಯನ್ನು ಮೀರಿ ಕಟ್ಟುವ ಹಾಗೂ ಸಮಾನತೆ ಎತ್ತಿಹಿಡಿಯುವ ಮೂಲಕ ಸಮಾನತೆಯ ಕನಸನ್ನು ಕಂಡಿದ್ದರು. ದೇಶದಲ್ಲಿ ಅಸ್ಪೃಶ್ಯತೆ ದೂರ ಮಾಡಲು ಶ್ರಮಿಸಿದರು ಎಂದು ತಿಳಿಸಿದರು.

ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರಕಿತು. ಸಂವಿಧಾನವನ್ನು ತಿಳಿದುಕೊಂಡು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಂಬೇಡ್ಕರ್ ಅವರ ಕೊಡುಗೆ, ಬರಹಗಳನ್ನು ಯುವಪೀಳಿಗೆ ತಿಳಿದುಕೊಳ್ಳಬೇಕು. ಪ್ರತಿಯೊಬ್ಬರು ಶಿಕ್ಷಣಕ್ಕೆ ಆದ್ಯತೆ ನೀಡಿ, ಜ್ಞಾನಗಳಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಮಾತನಾಡಿ, ಅಂಬೇಡ್ಕರ್ ಅವರು ಮಹಾರಾಷ್ಟ್ರದ ಅಂಬೇವಾಡ ಗ್ರಾಮದಲ್ಲಿ ಜನಿಸಿದರು. ಅವರು ಬಾಲ್ಯದಲ್ಲಿ ಅಸಮಾನತೆ ಪಿಡುಗನ್ನು ಎದುರಿಸಿದಾಗ ಮೌನಕ್ಕೆ ಜಾರಿ, ಸದಾ ಜ್ಞಾನ ಪಡೆಯುವಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದಕ್ಕೆ ಸಹಾಯಕವಾಗಿ ನಿಂತ ಅವರ ತಂದೆ ಅವರಿಗೆ ಬಹಳಷ್ಟು ಪುಸ್ತಕಗಳನ್ನು ಗ್ರಂಥಾಲಯದಿಂದ ತಂದುಕೊಡುತ್ತಿದ್ಧರು. ಅವರ ತಂದೆ ಅವರಿಗೆ ವಿದ್ಯಾಭ್ಯಾಸಕ್ಕೆ ನೀಡಿದ ಪೂರಕ ವಾತಾವರಣ ಅವರನ್ನು ಮಹಾನ್ ವ್ಯಕ್ತಿ, ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿಯಾಗಿ ರೂಪಿಸಿತು. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ವ್ಯಾಪಾರಿಗಳಿಗೆ ಸಮಯ ಎಂದರೆ ಹಣ, ಅಂಬೇಡ್ಕರ್ ಅವರಿಗೆ ಸಮಯ ಎಂದರೆ ಜ್ಞಾನಾರ್ಜನೆ. ಅವರಿಗೆ ಪ್ರಾಣಿಗಳು ಎಂದರೆ ತುಂಬಾ ಪ್ರೀತಿ, ಪ್ರಾಣಿಗಳು ಮನುಷ್ಯನ ಮೇಲೆ ತೋರಿಸುವ ಪ್ರೀತಿಯನ್ನು ಮನುಷ್ಯ, ಮನುಷ್ಯನ ಮೇಲೆ ತೋರಿಸಿದ್ದರೆ ಯಾವುದೇ ಜನಾಂಗೀಯ ಭೇದಭಾವ ಇರುತ್ತಿರಲಿಲ್ಲ ಎಂದು ಅಂಬೇಡ್ಕರ್ ಅವರು ಹೇಳುತ್ತಿದ್ದರು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಮಾತನಾಡಿ, ಶ್ರೀಮಂತರಾಗಲಿ, ಬಡವರಾಗಲಿ ಅವರು ಯಾವುದಾದರೂ ಒಂದು ಪರಿಸ್ಥಿತಿಯಲ್ಲಿ ಅಸಮಾನತೆಯನ್ನು ಎದುರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಎಲ್ಲರಿಗೂ ನೆನಪಿಗೆ ಬರುವುದೇ ಅಂಬೇಡ್ಕರ್ ಮತ್ತು ಅವರು ಅಸಮಾನತೆ ವಿರುದ್ಧ ನಡೆಸಿದ ಹೋರಾಟ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ‌ಇಕ್ರಂ, ಉಪ ವಿಭಾಗಾಧಿಕಾರಿ ಮಂಜುನಾಥ್, ನಗರಸಭೆ ಪೌರಾಯುಕ್ತ ನಂದಕುಮಾರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು