ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಬಂದ್‌ ಬೆಂಬಲಿಸಲು ಸಂಘಟನೆಗಳ ಮನವಿ

Published 29 ಸೆಪ್ಟೆಂಬರ್ 2023, 6:55 IST
Last Updated 29 ಸೆಪ್ಟೆಂಬರ್ 2023, 6:55 IST
ಅಕ್ಷರ ಗಾತ್ರ

ರಾಮನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಆಗ್ರಹಿಸಿ, ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯ ವಿವಿಧ ಸಂಘಟನೆಗಳು ಸಹ ಬೆಂಬಲ ಸೂಚಿಸಿವೆ. ಬಂದ್‌ಗೆ ಸಹಕಾರ ನೀಡುವಂತೆ ಸಂಘಟನೆಗಳ ಮುಖಂಡರು ಗುರುವಾರ ನಗರದಲ್ಲಿ ಕರಪತ್ರ ಹಂಚಿ ಮನವಿ ಮಾಡಿದರು.

ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಜಿಲ್ಲಾ ಘಟಕವು ಬಂದ್‌ಗೆ ಬಂಬಲ ವ್ಯಕ್ತಪಡಿಸಿದ್ದು, ಒಕ್ಕೂಟ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

‘ಕಾವೇರಿ ನಮ್ಮದು, ನಮ್ಮ ಹಕ್ಕು. ಈ ಹಿನ್ನೆಲೆಯಲ್ಲಿ ನಾಡು–ನುಡಿ ವಿಚಾರಕ್ಕೆ ಎಲ್ಲರೂ ಸ್ಪಂದಿಸಲೇಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಖಾಸಗಿ ಶಾಲೆಗಳು ಗುರುವಾರ ತಮ್ಮ ಶಾಲೆಗಳಿಗೆ ರಜೆ ಘೋಷಿಸಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಲು ತೀರ್ಮಾನಿಸಿವೆ’ ಎಂದು ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಪಟೇಲ್ ಸಿ. ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಬುಧವಾರ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ್ದ ಕರುನಾಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ರಾಜ್ಯ ರೈತ ಸಂಘ, ಭಾರತ್ ವಿಕಾಸ್ ಪರಿಷತ್, ಮಾನವ ಹಕ್ಕುಗಳ ಸಮಿತಿ, ಕರುನಾಡ ಸೇನೆ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಲು ತೀರ್ಮಾನಿಸಿದ್ದರು.

ಪಂಜಿನ ಮೆರವಣಿಗೆ

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಗರದ ಐಜೂರು ವೃತ್ತದಲ್ಲಿ ಗುರುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ ಗೌಡ, ‘ಸರ್ಕಾರ ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು. ಸುಪ್ರೀಂಕೋರ್ಟ್‌ಗೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಇಲ್ಲದಿದ್ದರೆ, ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತದೆ. ವಿವಾದ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು’ ಎಂದು ಒತ್ತಾಯಿಸಿದರು.

‘ತಮಿಳುನಾಡು ಮುಖ್ಯಮಂತ್ರಿಯ ಅಣಕು ತಿಥಿ ಮಾಡಿ ಪ್ರತಿಭಟಿಸಿದ್ದಕ್ಕೆ ಎಫ್‌ಐಆರ್ ದಾಖಲಿಸಿರುವ ಸರ್ಕಾರ, ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಶುಕ್ರವಾರದ ಕರ್ನಾಟಕ ಬಂದ್ ಹತ್ತಿಕ್ಕುವ ಕೆಲಸವೂ ನಡೆಯುತ್ತಿದೆ. ಅದಕ್ಕಾಗಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಹಲವರಿಗೆ ನೋಟಿಸ್ ಜಾರಿ ಮಾಡಿದೆ. ಸರ್ಕಾರದ ಈ ಧೋರಣೆ ಖಂಡನೀಯವಾಗಿದ್ದು, ಕಾವೇರಿ ಪರ ಹೋರಾಟ ನಿಲ್ಲದು’ ಎಂದು ಹೇಳಿದರು.

ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಶ್ರೀನಿವಾಸ ಸುಬ್ರಮಣಿ, ಬೆಂಕಿ ಶ್ರೀಧರ್, ರಂಜಿತ್‌ಗೌಡ, ಜಗದೀಶ್, ರಾಜು, ಮಾದೇಗೌಡ,  ಜಗದಾಪುರ ಕೃಷ್ಣೆಗೌಡ, ನಾಗಲಕ್ಷ್ಮಿ, ಮಮತಾ, ವೆಂಕಟರಮಣ, ಚಿಕ್ಕಣ್ಣಪ್ಪ, ಪುನಿತ್, ಉಮೇಶ್, ಶ್ಯಾಮ್, ತೆಂಗಿನ ಕಲ್ಲು ಚಂದ್ರೇಗೌಡ, ಮಣಿ, ಸಿದ್ದಪ್ಪಾಜಿ, ಚಿನ್ಮಯಿ, ಪಟೇಲ್ ಹರೀಶ್ ಮುಂತಾದವರು ಇದ್ದರು.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಗರದ ಐಜೂರು ವೃತ್ತದಲ್ಲಿ ಗುರುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಗರದ ಐಜೂರು ವೃತ್ತದಲ್ಲಿ ಗುರುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು

ತಮಿಳುನಾಡಿನಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಣಕು ತಿಥಿ ಮಾಡಿ ಪ್ರತಿಭಟನೆ ಮಾಡಿದ್ದನ್ನು ಖಂಡಿಸಿ ನಾವು ರಾಮನಗರದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದರ ಬಗ್ಗೆ ನಮ್ಮ ಮೇಲೆ ನಮ್ಮ ರಾಜ್ಯದ ಸರ್ಕಾರ ಮತ್ತು ಪೊಲೀಸರು ಕೇಸ್ ಹಾಕಿದ್ದಾರೆ.

ಈ ಹಿಂದೆ ಮೇಕೆದಾಟು ಹೋರಾಟದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಸರ್ಕಾರ ಹಾಕಿದ್ದ ಕೇಸ್‌ಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಕೇಸ್‌ಗಳನ್ನು ರದ್ದು ಮಾಡಿದ್ದಾರೆ. ಆಡಳಿತದಲ್ಲಿರುವವರಿಗೆ ಒಂದು ರೂಲ್ಸ್ ಸಾಮಾನ್ಯರಿಗೆ ಒಂದು ರೂಲ್ಸ್ ಇದೆಯಾ ಎಂದು ರಮೇಶ್‌ಗೌಡ ಪ್ರಶ್ನೆ ಮಾಡಿದರು. ಕಾವೇರಿ ನೀರು ಹಂಚಿಕೆ ವಿಚಾರ ನೂರಾರು ವರ್ಷಗಳ ಹಿಂದಿನ ಸೂತ್ರವಾಗಿದೆ. ಅಂದು ನಮ್ಮ ರಾಜ್ಯದಲ್ಲಿ ಜನಸಂಖ್ಯೆ ೩ ಕೋಟಿ ಇತ್ತು. ಆದರೆ ಇಂದು ಏಳು ಕೋಟಿ ಜನಸಂಖ್ಯೆ ದಾಟಿದೆ. ಜೊತೆಗೆ ಕೃಷಿ ಚಟುವಟಿಕೆ ಬೆಳೆದಿದ್ದು ಸಾವಿರಾರು ಹೆಕ್ಟೇರ್ ಪ್ರದೇಶ ಕೃಷಿ ಭೂಮಿಯಾಗಿ ಬದಲಾಗಿದೆ. ಜೊತೆಗೆ ಜಾನುವಾರುಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ನಮ್ಮ ರಾಜ್ಯದಲ್ಲಿನ ಜಲಾಶಯಗಳಲ್ಲಿ ನೀರು ಸಂಗ್ರಹಣೆಯ ವಿಸ್ತೀರ್ಣ ಬದಲಾಗಿಲ್ಲ. ಎಷ್ಟೇ ಮಳೆ ಬಂದರು ಇರುವಷ್ಟು ವಿಸ್ತೀರ್ಣದಲ್ಲಿ ತುಂಬಿದ ನಂತರದ ನೀರನ್ನು ಸಂಗ್ರಹಣೆ ಮಾಡಲು ನಮ್ಮಲ್ಲಿ ಪ್ರತ್ಯೇಕ ಡ್ಯಾಂಗಳಿಲ್ಲ. ಈ ನಿಟ್ಟಿನಲ್ಲಿ ಹೆಚ್ಚು ಮಳೆ ಬಂದಾಗ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಆದರೆ ತಮಿಳುನಾಡಿನ ಸರ್ಕಾರ ನೀರಾವರಿ ಇಲಾಖೆಗೆ ಮೊದಲ ಆಧ್ಯತೆ ನೀಡುತ್ತಿದ್ದು ಈ ನಿಟ್ಟಿನಲ್ಲಿ ಅವರು ಮೆಟ್ಟೂರು ಅಣೆಕಟ್ಟೆಯ ನೀರಾವರಿ ವಿಸ್ತೀರ್ಣವನ್ನು ಒಂದೂವರೆ ಲಕ್ಷ ಎಕರೆಯಷ್ಟು ಹೆಚ್ಚು ವಿಸ್ತೀರ್ಣ ಮಾಡಿ ಮೂರು ಪಟ್ಟು ಹೆಚ್ಚು ನೀರು ಬಳಕೆ ಮಾಡಿಕೊಳ್ಳುವ ಯೋಜನೆ ಮಾಡಿಕೊಂಡು ಭಕ್ತ ಭತ್ತ ಬೆಳೆಯುವುದಕ್ಕೆ ಮುಂದಾಗಿದ್ದಾರೆ. ಜೊತೆಗೆ ಪಕ್ಕದಲ್ಲೇ ಗ್ರ್ಯಾಂಡ್ ಅಣೆಕಟ್ಟೆಗೆ ಮೆಟ್ಟೂರು ಡ್ಯಾಂನಿಂದ ಈ ನೀರು ಹರಿಸಿ ಸಂಗ್ರಹಣೆ ಮಾಡಿಕೊಳ್ಳುತ್ತಿದ್ದಾರೆ.

ಈ ಎಲ್ಲವನ್ನು ನಮ್ಮ ಸರ್ಕಾರ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳ ತಂಡ ಗಮನಿಸಿ ಎಚ್ಚೆತ್ತುಕೊಂಡು ನಮ್ಮ ರಾಜ್ಯದಲ್ಲಿನ ಜನಜಾನು ವಾರುಗಳ ಅಂಕಿ ಅಂಶ ನೀರಿನ ಬಳಕೆ ಬೆಂಗಳೂರಿಗೆ ಕುಡಿಯುವ ನೀರಿನ ಬಗ್ಗೆ ಪ್ರಾಧಿಕಾರ ಮತ್ತು ಸುಪ್ರಿಂ ಕೋರ್ಟ್ ನ ಗಮನಕ್ಕೆ ತರಬೇಕು. ಜೊತೆಗೆ ಮೇಕೆದಾಟು ಅಣೆಕಟ್ಟೆ ನಿರ್ಮಾಣದ ಯೋಜನೆಯನ್ನು ಜಾರಿಗೆ ತರಬೇಕು. ಜೊತೆಗೆ ಹಾರಂಗಿ ಕಬಿನಿ ಹೇಮಾವತಿ ಕೆಆರ್‌ಎಸ್ ಜಲಾಶಯದ ಕೃಷಿ ಪ್ರದೇಶದ ವಿಸೀರ್ಣವನ್ನು ಹೆಚ್ಚುವರಿ ಮಾಡಿ ಅಣೆಕಟ್ಟೆಯಲ್ಲಿ ಹೆಚ್ಚು ನೀರು ಸಂಗ್ರಹಣೆ ಆದ ಸಂದರ್ಭದಲ್ಲಿ ಕೃಷಿ ಚಟುಟಿಕೆಗಳಿಗೆ ಮೊದಲ ಆಧ್ಯತೆ ನೀಡಲು ಮುಂದಾಗಬೇಕು ಎಂದು ರಮೇಶ್‌ಗೌಡ ಸರ್ಕಾರವನ್ನು ಒತ್ತಾಯಿಸಿದರು.ಬೆಂಗಳೂರು ನಗರದಲ್ಲಿ ೧೪೪ ಸಕ್ಷನ್ ಜಾರಿ ಮಾಡಿ ಶುಕ್ರವಾರದ ಕರ್ನಾಟಕ ಬಂದ್‌ಅನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಈಗಾಗಲೇ ನಮಗೆ ನೋಟೀಸ್ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಧೋರಣೆ ಖಂಡನೀಯವಾಗಿದೆ. ಬೆಂಗಳೂರಿನಲ್ಲಿ ಕಾವೇರಿ ನೀರು ಕುಡಿಯುವ ಪ್ರತಿಯೊಬ್ಬರು ಕರ್ನಾಟಕ ಬಂದ್‌ಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ನಮಗೆ ಇದೆ. ಚನ್ನಪಟ್ಟಣದಲ್ಲಿ ಬಂದ್ ಯಶಸ್ವಿಗೊಳಿಸುತ್ತೇವೆ ಅದೇ ರೀತಿ ಈಗಾಗಲೆ ರಾಮನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿಸಿಒಂದು ದಿನ ಬಂದ್ ಯಶಸ್ವಿಯಾಗಿ ಮಾಡಿರುವ ರಾಮನಗರದ ಜನತೆ ಇನ್ನೊಂದು ದಿನ ಸಂಪೂರ್ಣವಾಗಿ ಬಂದ್ ಮಾಡಿ ಒಂದು ದಿನದ ವ್ಯಾಪಾರ ವಹಿವಾಟು ನಿಂತು ಸ್ವಲ್ಪ ಕಷ್ಟ ಆದರೂ ಕಾವೇರಿಯನ್ನು ಉಳಿಸಿಕೊಳ್ಳಲು ಬಂದ್ ಅನಿವಾರ್ಯವಾಗಿದ್ದು ಈ ಕಷ್ಟವನ್ನು ಸಹಿಸಿಕೊಳ್ಳಿ ಎಂದು ರಮೇಶ್‌ಗೌಡ ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ರಾಜ್ಯ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ ಸುಬ್ರಮಣಿ ಪ್ರತಿಭಟನೆಯಲ್ಲಿ ವೇದಿಕೆ ರಾಜ್ಯ ಉಪಾಧ್ಯಕ್ಷರುಗಳಾದ ಬೆಂಕಿ ಶ್ರೀಧರ್ ರಂಜಿತ್‌ಗೌಡ ಕನ್ನಡ ಸೇನೆಯ ಉಪಾಧ್ಯಕ್ಷ ಜಗದೀಶ್ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾಜು ಕನ್ನಡ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಮಾದೇಗೌಡ ರಾಜ್ಯ ಸಂಘಟನಾಕಾರ್ಯದರ್ಶಿ ಜಗದಾಪುರ ಕೃಷ್ಣೆಗೌಡ ನಾಗಲಕ್ಷ್ಮಿ ಮಮತಾ ವೆಂಕಟರಮಣ ಚಿಕ್ಕಣ್ಣಪ್ಪ ಪುನಿತ್ ಉಮೇಶ್ ಶ್ಯಾಮ್ ತೆಂಗಿನ ಕಲ್ಲು ಚಂದ್ರೇಗೌಡ ಮಣಿ ಸಿದ್ದಪ್ಪಾಜಿ ಚಿನ್ಮಯಿ ಪಟೇಲ್ ಹರೀಶ್ ಸಾಗರ್ ಜಗ್ಗೀಸೀನಪ್ಪ ವಿ.ಎಂ. ರಮೇಶ್ ವಿ.ಹೆಚ್. ಶಿವಲಿಂಗಯ್ಯ ಸುಧಾ ಜಗದೀಶ್ ರಾಜಮ್ಮ ಮಂಗಳಮ್ಮ ಸೇರಿದಂತೆ ನೂರಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT