ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರು ಪಕ್ಷಕ್ಕಷ್ಟೇ ಸೀಮಿತರಾ..?

Published 11 ಜೂನ್ 2024, 4:42 IST
Last Updated 11 ಜೂನ್ 2024, 4:42 IST
ಅಕ್ಷರ ಗಾತ್ರ

ಮಾಗಡಿ: ‘ಪುರಸಭೆಯ 15ನೇ ಹಣಕಾಸು ಯೋಜನೆಯ ಹಣವನ್ನು ಕೇವಲ ಕಾಂಗ್ರೆಸ್ ಪುರಸಭಾ ಸದಸ್ಯರ ವಾರ್ಡ್‌ಗಷ್ಟೇ ಶಾಸಕ ಬಾಲಕೃಷ್ಣ ಅವರು ನೀಡಿದ್ದು, ಶಾಸಕರು ಕೇವಲ ಒಂದು ಪಕ್ಷಕ್ಕೆ ಸೀಮಿತರಾಗಿದ್ದಾರಾ? ನಮ್ಮ ವಾರ್ಡ್‌ನ ಹಣವನ್ನು ಬೇರೆ ವಾರ್ಡ್‌ಗೆ ವರ್ಗಾಯಿಸಲು ಶಾಸಕರಿಗೆ ಹಕ್ಕಿಲ್ಲ’ ಎಂದು ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆಯಲ್ಲಿ ಜೆಡಿಎಸ್ ಪುರಸಭಾ ಸದಸ್ಯರ ಜೊತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಪ್ರತಿ ವರ್ಷವೂ 15 ನೇ ಹಣಕಾಸು ಯೋಜನೆಯಡಿ ಪುರಸಭಾ ವ್ಯಾಪ್ತಿಯ 23 ವಾರ್ಡ್‌ಗಳಿಗೂ ಸಮಾನವಾಗಿ ಕಾಮಗಾರಿಗಳನ್ನು ಮಾಡಲು ಹಣ ಬಿಡುಗಡೆ ಮಾಡಲಾಗುತ್ತಿತ್ತು. ಹಿಂದಿನ ಶಾಸಕ ಎ.ಮಂಜುನಾಥ್ ಅವರ ಅವಧಿಯಿಂದಲೂ ಕೂಡ ಇದೇ ರೀತಿ ಅನುದಾನ ಹಂಚಿಕೆ ಮಾಡಲಾಗುತ್ತಿತ್ತು. ಶಾಸಕ ಬಾಲಕೃಷ್ಣ ಅವರು 15ನೇ ಹಣಕಾಸಿನ ಕಾಮಗಾರಿ ಅನುಮೋದನೆ ಪಡೆದ ಕಾಮಗಾರಿಗಳನ್ನು ರದ್ದುಪಡಿಸಿ, ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ಅನುದಾನ ವರ್ಗಾಯಿಸಿದ್ದಾರೆ. ಆ ಮೂಲಕ ವಾರ್ಡ್‌ನ ಜನಗಳಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

15ನೇ ಹಣಕಾಸು ಬಿಟ್ಟರೆ ಪುರಸಭೆಗೆ ಯಾವುದೇ ರೀತಿಯ ಅನುದಾನ ಇಲ್ಲ. ಇದಕ್ಕೆ ನೀವು ಕನ್ನ ಹಾಕಿದರೆ ನಮ್ಮ ವಾರ್ಡ್‌ನ ಸಮಸ್ಯೆಯನ್ನು ಯಾರು ಬಗೆಹರಿಸುತ್ತಾರೆ. ಪಕ್ಷದ ಸದಸ್ಯರ ಮೇಲೆ ಪ್ರೀತಿ ಇದ್ದರೆ ವಿಶೇಷ ಅನುದಾನ ತಂದು ಮಾಗಡಿ ಪಟ್ಟಣವನ್ನು ಅಭಿವೃದ್ಧಿ ಮಾಡಿ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಯಾವುದೇ ಕಾರಣಕ್ಕೂ ಹಿಂದೆ ಅನುಮೋದನೆ ಆಗಿದ್ದ ರೀತಿಯಲ್ಲಿ ಕಾಮಗಾರಿಗಳ ಜಾರಿ ಮಾಡಬೇಕು. ನಿಮ್ಮ ವಿರುದ್ಧ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ’ ಎಂದು ಎಂ.ಎನ್. ಮಂಜುನಾಥ್ ವಾಗ್ದಾಳಿ ನಡೆಸಿದರು.

ಪುರಸಭೆ ಸದಸ್ಯೆ ವಿಜಯ ರೂಪೇಶ್ ಮಾತನಾಡಿ, ‘23 ವಾರ್ಡ್‌ಗಳಿಗೆ ಸೇರಿ ₹1.24 ಕೋಟಿ ಅನುದಾನವಿದ್ದು, ಇದರಲ್ಲಿ ನಿರ್ಬಂಧಿತ ಅನುದಾನ ₹74.40 ಲಕ್ಷ, ಮುಕ್ತ ಅನುದಾನ ₹49.60 ಲಕ್ಷ, ಹಾಗೂ ಪುರಸಭಾ ನಿಧಿ ₹25.46 ಲಕ್ಷ ಅನುದಾನವಿದೆ. ಪ್ರತಿ ವಾರ್ಡ್‌ಗೂ ₹3ರಿಂದ ₹4ಲಕ್ಷ ಹಣದ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೆವು. ಆದರೆ ಶಾಸಕ ಬಾಲಕೃಷ್ಣ ಅವರು ಕೇವಲ 4, 6, 8, 14, 16 ವಾರ್ಡ್‌ಗಳಿಗೆ ಅನುದಾನ ಹಂಚಿಕೆ ಮಾಡುವ ಮೂಲಕ ಜೆಡಿಎಸ್ ಪುರಸಭಾ ಸದಸ್ಯರಿಗೆ ಅನ್ಯಾಯ ಮಾಡಿದ್ದಾರೆ. ಈ ಹಿಂದಿನಂತೆಯೇ ಅನುದಾನವನ್ನು ಸಮಾನವಾಗಿ ಹಂಚಬೇಕು’ ಎಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಕೆ.ವಿ.ಬಾಲು ಮಾತನಾಡಿ, ಪುರಸಭೆಯಲ್ಲಿ 10 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು ವಾರ್ಡ್‌ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಯುಜಿಡಿ, ಒಳಚರಂಡಿ ಉಕ್ಕಿಹರಿಯುತ್ತಿದ್ದು ಗಮನ ಹರಿಸುತ್ತಿಲ್ಲ. ಪುರಸಭೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಶಾಸಕ ಬಾಲಕೃಷ್ಣ ಅವರು ಪುರಸಭೆ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕು. ಇಲ್ಲವಾದರೆ ಪುರಸಭೆ ವಿರುದ್ಧವೇ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಪುರಸಭಾ ಸದಸ್ಯರಾದ ಅಶ್ವಥ್, ಅನಿಲ್ ಕುಮಾರ್, ಜಯರಾಂ, ರಾಮು, ರೇಖಾ ನವೀನ ನಾಗರತ್ನ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT