ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ, ಅಂಗನವಾಡಿ ಸಿಬ್ಬಂದಿಗಿಲ್ಲ ಭದ್ರತೆ: ಸಂಸದ ಡಿ.ಕೆ. ಸುರೇಶ್‌ ಅಸಮಾಧಾನ

Last Updated 13 ಜೂನ್ 2021, 4:46 IST
ಅಕ್ಷರ ಗಾತ್ರ

ಕನಕಪುರ: ‘ಜೀವನಕ್ಕಿಂತ ಜೀವ ಮುಖ್ಯವೆಂದು ಜನಸಾಮಾನ್ಯರು ಪ್ರಾಣ ರಕ್ಷಣೆಗೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜೀವಕ್ಕಿಂತ ಜನರ ಜೀವನ ಮುಖ್ಯವೆಂದು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರಾಣ ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದಾರೆ. ಆದರೂ, ಇವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ’ ಎಂದು ಸಂಸದ ಡಿ.ಕೆ. ಸುರೇಶ್‌
ದೂರಿದರು.

ತಾಲ್ಲೂಕಿನ ಹಾರೋಹಳ್ಳಿಯ ಆರ್‌ಎಚ್‌ಎಸ್‌ ಶಾಲೆಯಲ್ಲಿ ಬಮೂಲ್‌ನಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ದಿನಸಿ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊರೊನಾ ಸೋಂಕು ತಡೆಯುವ ಹೋರಾಟದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಪ್ರಾಣ ಮತ್ತು ಕುಟುಂಬ ತ್ಯಜಿಸಿ ಆಶಾ ಕಾರ್ಯಕರ್ತೆಯರು ₹ 4 ಸಾವಿರ ಗೌರವಧನಕ್ಕೆ ಕೆಲಸ ಮಾಡುತ್ತಿದ್ದಾರೆ. ಸೋಂಕಿತರ ಹುಡುಕುವುದೇ ಇವರ ಮೊದಲ ಕೆಲಸವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 16 ಆಶಾ ಕಾರ್ಯಕರ್ತೆಯರು ಜೀವ ಕಳೆದುಕೊಂಡಿದ್ದಾರೆ. ಹೊರಗಡೆ ಸೋಂಕಿತರ ಮಧ್ಯೆ ಕೆಲಸ ಮಾಡುವ ಇವರು ಕುಟುಂಬದಲ್ಲಿ ಎಲ್ಲರಿಂದಲೂ ತಿರಸ್ಕೃತರಾಗಿ ಅಪಮಾನ ಅನುಭವಿಸಬೇಕಿದೆ. ಮಾಹಿತಿ ಪಡೆಯುವ ಸ್ಥಳದಲ್ಲಿ ನಿಂದನೆ ಮತ್ತು ಸೋಂಕಿತ ಕುಟುಂಬದವರ ಕೋಪಕ್ಕೂ ತುತ್ತಾದ ಘಟನೆಗಳು ನಡೆದಿವೆ. ಆದರೆ, ಅವರ ಸೇವೆಗೆ ಭದ್ರತೆ ಇಲ್ಲ ಎಂದು ಹೇಳಿದರು.

ಒಂದೂವರೆ ವರ್ಷದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಏರುಪೇರಾಗಿದೆ. ಮನೆಗಳಲ್ಲಿ ಪೋಷಕರು ಎಷ್ಟು ಬೇಗ ಶಾಲೆ, ಕಾಲೇಜು ಪ್ರಾರಂಭವಾಗುತ್ತದೋ ಎಂದು ಕಾಯುತ್ತಿದ್ದಾರೆ. ಮುಂದೆ ನಿಮ್ಮ ಜೀವನದಲ್ಲಿ ಕೊರೊನಾದಂತಹ ಘಟನೆ ಮರುಕಳಿಸದಿರಬಹುದು. ಇದರಿಂದ ನೀವು ಜೀವನದ ಪಾಠ ಕಲಿಯಬೇಕು. ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಲು ಕಠಿಣ ಪರಿಶ್ರಮ ಪಡಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ಎ. ಇಕ್ಬಾಲ್‌ ಹುಸೇನ್‌ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಬೆಂಬಲವಾಗಿ ನಿಲ್ಲಬೇಕು. ಅವರು ಮಾಡುವ ಹೋರಾಟಕ್ಕೆ ಪ್ರೋತ್ಸಾಹಿಸಬೇಕೆಂದು ಪಕ್ಷದಿಂದ ದಿನಸಿ ಕಿಟ್‌ ವಿತರಣೆ ಮಾಡುತ್ತಿರುವುದಾಗಿ ತಿಳಿಸಿದರು.

ಬಮೂಲ್‌ ನಿರ್ದೇಶಕ ಎಚ್‌.ಎಸ್‌. ಹರೀಶ್‌ಕುಮಾರ್‌, ಸಮಾಜ ಸೇವಕ ಕೀರಣಗೆರೆ ಜಗದೀಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಗೀತಾ ಈಶ್ವರ್‌, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುರುಪ್ರಸಾದ್‌, ಸದಸ್ಯ ಕೋಟೆ ಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT