ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

3 ಕ್ಷೇತ್ರಗಳಲ್ಲಿ 'ಕೈ' ಶಾಸಕರಿದ್ದರೂ ಕನಕಪುರ–ರಾಮನಗರದಲ್ಲಷ್ಟೇ ಸುರೇಶ್‌ಗೆ ಲೀಡ್‌

ಮಾಗಡಿ–ಕುಣಿಗಲ್‌, ಆನೇಕಲ್‌ನಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಸಿಗದ ಮುನ್ನಡೆ
Published 5 ಜೂನ್ 2024, 7:07 IST
Last Updated 5 ಜೂನ್ 2024, 10:04 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕಡೆ ಕಾಂಗ್ರೆಸ್ ಶಾಸಕರಿದ್ದರೂ, ಡಿ.ಕೆ. ಸುರೇಶ್‌ ಗೆಲುವಿನ ದಡ ಸೇರಲು ಸಾಧ್ಯವಾಗಿಲ್ಲ. ಐದು ಕ್ಷೇತ್ರಗಳ ಪೈಕಿ, ತವರು ಕ್ಷೇತ್ರ ಕನಕಪುರ ಮತ್ತು ರಾಮನಗರದಲ್ಲಷ್ಟೇ ಸುರೇಶ್‌ಗೆ ಅಲ್ಪಮತಗಳ ಲೀಡ್ ಸಿಕ್ಕಿದೆ. ಉಳಿದೆಡೆ ಮುನ್ನಡೆ ಸಾಧಿಸುವಲ್ಲಿ ಬಿಜೆಪಿಯ ಡಾ. ಸಿ.ಎನ್. ಮಂಜುನಾಥ್ ಯಶಸ್ವಿಯಾಗಿದ್ದಾರೆ.

ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳನ್ನು ಒಳಗೊಂಡಂತೆ ಗ್ರಾಮಾಂತರ ಕ್ಷೇತ್ರದಲ್ಲಿ ಆನೇಕಲ್, ಕನಕಪುರ, ರಾಮನಗರ, ಮಾಗಡಿ, ಕುಣಿಗಲ್‌ ಸೇರಿ 5 ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. ಉಳಿದಂತೆ ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್‌ ಅಧಿಕಾರದಲ್ಲಿದೆ.

ಸುರೇಶ್ ಅವರ ತವರು ಕ್ಷೇತ್ರವಾಗಿರುವ ಕನಕಪುರದಲ್ಲಿ ವರ್ಷದ ಹಿಂದೆ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಅವರ ಅಣ್ಣ ಡಿ.ಕೆ. ಶಿವಕುಮಾರ್ ಬರೋಬ್ಬರಿ 1,21,595 ಮತಗಳ ಅಂತರದಿಂದ ಗೆದ್ದಿದ್ದರು. ವರ್ಷದ ಬಳಿಕ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಸುರೇಶ್‌ 1,08,980 ಮತಗಳನ್ನು ಪಡೆದು, ಕೇವಲ 25,677 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಡಾ. ಸಿ.ಎನ್. ಮಂಜುನಾಥ್ ಅವರು ನಿರೀಕ್ಷೆಗೂ ಮೀರಿ 83,303 ಮತಗಳನ್ನು ಪಡೆದಿದ್ದಾರೆ.

ಕಾಂಗ್ರೆಸ್‌ನಿಂದ ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕರಾಗಿರುವ ರಾಮನಗರದಲ್ಲಿ ಸುರೇಶ್ 92,090 ಮತಗಳನ್ನು ಮತ್ತು ಮಂಜುನಾಥ್ 91,945 ಮತಗಳನ್ನು ಪಡೆದಿದ್ದು, ಸುರೇಶ್ ಕೇವಲ 145 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಮುನ್ನಡೆಯು ರಾಮನಗರ ನಗರದಲ್ಲಷ್ಟೇ ಬಂದಿದೆ. ಗ್ರಾಮೀಣ ಭಾಗದ ಮತದಾರರು ಮಂಜುನಾಥ್ ಅವರ ಪರವಾಗಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮಾಗಡಿಯಲ್ಲಿ ಎಚ್‌.ಸಿ. ಬಾಲಕೃಷ್ಣ ಶಾಸಕರಾಗಿದ್ದರೂ ಅಲ್ಲಿ ಮಂಜುನಾಥ್ ಅವರು 1,13,911 ಮತಗಳನ್ನು ಪಡೆದು 29,973 ಮತಗಳ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಸುರೇಶ್ ಅವರಿಗೆ 83,938 ಮತಗಳಷ್ಟೇ ಬಂದಿವೆ. ಆನೇಕಲ್‌ನಲ್ಲಿ ಮಂಜುನಾಥ್ 1,37,693 ಮತಗಳೊಂದಿಗೆ 22,365 ಲೀಡ್ ಪಡೆದಿದ್ದಾರೆ. ಸುರೇಶ್ ಇಲ್ಲಿ 1,15,328 ಮತಗಳನ್ನು ಗಳಿಸಿದ್ದಾರೆ. ಮುಂದುವರಿದು ಕುಣಿಗಲ್‌ನಲ್ಲಿ ಮಂಜುನಾಥ್‌ಗಿಂತ 23,838 ಕಡಿಮೆ ಮತಗಳನ್ನು ಪಡೆದಿದ್ದಾರೆ. ಈ ಮೂರೂ ಕ್ಷೇತ್ರಗಳಲ್ಲಿರುವ ಕಾಂಗ್ರೆಸ್ ಶಾಸಕರು ತಮ್ಮ ನಾಯಕನಿಗೆ ಮುನ್ನಡೆಯ ಮತಗಳನ್ನು ತಂದು ಕೊಡುವಲ್ಲಿ ವಿಫಲರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT