ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಸ್‌ಪ್ರೆಸ್ ವೇ | ತಗ್ಗಿದ ಅಪಘಾತ–ಒಂದಂಕಿಗೆ ಇಳಿದ ಸಾವಿನ ಸಂಖ್ಯೆ

Published 4 ಸೆಪ್ಟೆಂಬರ್ 2023, 23:30 IST
Last Updated 4 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ರಾಮನಗರ: ಅಪಘಾತಗಳಿಂದಾಗಿ ಗಮನ ಸೆಳೆದಿದ್ದ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ದ್ವಿಚಕ್ರ ಸೇರಿದಂತೆ ನಿರ್ದಿಷ್ಟ ವಾಹನಗಳ ಸಂಚಾರ ನಿಷೇಧ ಹಾಗೂ ವೇಗದ ಮಿತಿಯನ್ನು ಗಂಟೆಗೆ 100 ಕಿ.ಮೀ.ಗೆ ಇಳಿಸಿದ ಬೆನ್ನಲ್ಲೇ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಮೂರು ತಿಂಗಳ ಹಿಂದೆಯಷ್ಟೇ ಎರಡಂಕಿ ಇರುತ್ತಿದ್ದ ಪ್ರತಿ ತಿಂಗಳ ಅಪಘಾತ ಸಂಖ್ಯೆ ಇದೀಗ ಒಂದಂಕಿಗೆ ಇಳಿಕೆಯಾಗಿರುವ ಕುರಿತು, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

‘ಅಪಘಾತಗಳ ತಡೆ ನಿಟ್ಟಿನಲ್ಲಿ ಹೆದ್ದಾರಿಯಲ್ಲಿ ಕೈಗೊಂಡ ಗಸ್ತು, ಅತಿ ವೇಗದ ಮೇಲೆ ನಿಗಾ, ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಪೊಲೀಸರ ಸತತ ಕಾರ್ಯಾಚರಣೆಯ ಕಾರಣದಿಂದಾಗಿ ಅಪಘಾತಗಳು ಹಾಗೂ ಸಾವಿನ ಪ್ರಕರಣಗಳು ತಗ್ಗಿವೆ. ಮೇ ತಿಂಗಳಲ್ಲಿ 29 ಇದ್ದ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ, ಜೂನ್‌ನಲ್ಲಿ 28ಕ್ಕೆ, ಜುಲೈನಲ್ಲಿ 8 ಹಾಗೂ ಆಗಸ್ಟ್‌ನಲ್ಲಿ 6ಕ್ಕೆ ಇಳಿಕೆಯಾಗಿದೆ’ ಎಂದು ಅಲೋಕ್‌ ಕುಮಾರ್ ಟ್ವೀಟ್ ಮಾಡಿದ್ದಾರೆ.

ರಾಜ್ಯಮಟ್ಟದಲ್ಲಿ ಅಪಘಾತಗಳ ಸಾವಿನ ಸಂಖ್ಯೆ ಸ್ವಲ್ಪ ಇಳಿದಿದೆ. ಮೇ ತಿಂಗಳಲ್ಲಿ ಅಪಘಾತಕ್ಕೆ 1094 ಜನ ಮೃತಪಟ್ಟಿದ್ದರೆ ಜೂನ್‌ನಲ್ಲಿ 965 ಜುಲೈನಲ್ಲಿ 807 ಹಾಗೂ ಆಗಸ್ಟ್‌ನಲ್ಲಿ 795 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯಲ್ಲೇ ಹೆಚ್ಚು ಸಾವು ಸಂಭವಿಸಿವೆ.
ಅಲೋಕ್ ಕುಮಾರ್, ಎಡಿಜಿಪಿ, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗ

‘ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸತತ ಕಾರ್ಯಾಚರಣೆಯೇ ಅಪಘಾತ ಮತ್ತು ಸಾವಿನ ಸಂಖ್ಯೆ ಇಳಿಕೆಗೆ ಕಾರಣ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಗಳಿಗೆ ಕಾರಣವಾಗಿದೆ. ಹೆದ್ದಾರಿಯಲ್ಲಿ ಇದಕ್ಕೆ ಅವಕಾಶವಿಲ್ಲದಂತೆ, ಹದ್ದಿನ ಕಣ್ಣಿಟ್ಟು ಸಾವಿನ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಲು ಇಲಾಖೆಯು ಶ್ರಮಿಸುತ್ತಿದೆ’ ಎಂದು ಹೇಳಿದ್ದಾರೆ.

ರಾಜ್ಯದಲ್ಲೂ ಇಳಿಮುಖ

‘ಎಕ್ಸ್‌ಪ್ರೆಸ್ ಹೆದ್ದಾರಿ ಮಾತ್ರವಲ್ಲದೆ, ರಾಜ್ಯದಾದ್ಯಂತ ಅಪಘಾತಕ್ಕೆ ಸಂಬಂಧಿಸಿದ ಸಾವಿನ ಪ್ರಕರಣಗಳು ಸಹ ಸ್ವಲ್ಪಮಟ್ಟಿಗೆ ಇಳಿಮುಖವಾಗುತ್ತಿವೆ. ರಾಜ್ಯದಾದ್ಯಂತ 2023ನೇ ವರ್ಷದ ಮೊದಲ ಆರು ತಿಂಗಳುಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 5,830 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ಪ್ರಮುಖ ರಸ್ತೆಗಳಲ್ಲಿ ಅಪಘಾತಗಳ ತಡೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ’ ಎಂದು ಗಮನ ಸೆಳೆದಿದ್ದಾರೆ.

ಹೆದ್ದಾರಿಯು ವಾಹನಗಳ ಸಂಚಾರಕ್ಕೆ ಮುಕ್ತವಾದ ಬಳಿಕ, ಒಂಬತ್ತು ತಿಂಗಳಲ್ಲಿ 158 ಸಾವು ಸಂಭವಿಸಿದ್ದರ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಯು, ಹೆಚ್ಚಿನ ಗಮನ ಸೆಳೆದಿತ್ತು. ಅದರ ಬೆನ್ನಲ್ಲೇ, ಹೆದ್ದಾರಿಯ ಸುರಕ್ಷತೆ ಮತ್ತು ಸಂಚಾರ ನಿಯಮ ಪಾಲನೆ ಕುರಿತು ವ್ಯಾಪಕ ಚರ್ಚೆಯಾಗಿತ್ತು.

ಅಪಘಾತಗಳ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆಯು ಗಸ್ತು, ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ, ಜಾಗೃತಿ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಹೆದ್ದಾರಿಯಲ್ಲಿ ದ್ವಿಚಕ್ರ ಹಾಗೂ ಕೆಲ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿತ್ತು. ಹೆದ್ದಾರಿ ಗಸ್ತು ಆರಂಭಿಸುವ ಜೊತೆಗೆ, ನಿಯಮ ಉಲ್ಲಂಘನೆ ಮೇಲೆ ಕಣ್ಣಿಡಲು ಆರು ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳನ್ನು ಕೆಲವೆಡೆ ಅಳವಡಿಸಿದೆ.

ರಾಜ್ಯಮಟ್ಟದಲ್ಲಿ ಅಪಘಾತಗಳ ಸಾವಿನ ಸಂಖ್ಯೆ ಸ್ವಲ್ಪ ಇಳಿದಿದೆ. ಮೇ ತಿಂಗಳಲ್ಲಿ ಅಪಘಾತಕ್ಕೆ 1094 ಜನ ಮೃತಪಟ್ಟಿದ್ದರೆ ಜೂನ್‌ನಲ್ಲಿ 965 ಜುಲೈನಲ್ಲಿ 807 ಹಾಗೂ ಆಗಸ್ಟ್‌ನಲ್ಲಿ 795 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯಲ್ಲೇ ಹೆಚ್ಚು ಸಾವು ಸಂಭವಿಸಿವೆ –ಅಲೋಕ್ ಕುಮಾರ್ ಎಡಿಜಿಪಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT