ಗುರುವಾರ , ಆಗಸ್ಟ್ 22, 2019
27 °C

ಮಾಗಡಿ: ದುಡುಪನಹಳ್ಳಿ ಗೇಟ್‌ ಬಳಿ ಬೆಂಗಳೂರು ತ್ಯಾಜ್ಯ

Published:
Updated:
Prajavani

ಮಾಗಡಿ: ತಾಲ್ಲೂಕಿನ ದುಡುಪನಹಳ್ಳಿ ಗೇಟ್‌ ಬಳಿ ಇರುವ ಸರ್ಕಾರಿ ಪ್ರೌಢಶಾಲೆಯ ಎದುರು ಬೆಂಗಳೂರಿನ ಕಾರ್ಖಾನೆಗಳ ಕಲುಷಿತ ರಾಸಾಯನಿಕ, ಪ್ಲಾಸ್ಟಿಕ್‌, ಗಾಜಿನ ಚೂರು ಇತರೆ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ ಎಂದು ಪರಿಸರವಾಗಿ ರಾಜೀವ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಂಗಳೂರು–ಮಾಗಡಿ ಪಟ್ಟಣದ ವರೆಗಿನ ರಸ್ತೆಯುದ್ದಕ್ಕೂ ನಗರದ ತ್ಯಾಜ್ಯವನ್ನು ಲಾರಿ, ಟ್ರಕ್‌ಗಳಲ್ಲಿ ತುಂಬಿಕೊಂಡು ಬಂದು ರಾತ್ರೋರಾತ್ರಿ ಸುರಿದು ಪರಾರಿಯಾಗುತ್ತಿದ್ದಾರೆ’ ಎಂದು ದೂರಿದರು.

ವಾಹನಗಳಲ್ಲಿ ಪ್ರಯಾಣಿಸುವಾಗ ರಸ್ತೆಯುದದ್ದಕ್ಕೂ ಕೊಳೆತ ದುರ್ಗಂಧ ಮೂಗಿಗೆ ಬಡಿಯುತ್ತಿದೆ. ನಗರದ ಕಾರ್ಖಾನೆಗಳ ಪ್ಲಾಸ್ಟಿಕ್‌, ಗ್ಲಾಸ್‌ ಇತರೆ ತ್ಯಾಜ್ಯದಿಂದ ಹೊರಡುವ ವಿಷಾನಿಲ ಪರಿಸರದ ಮೇಲೆ ದುಸ್ಪರಿಣಾಮ ಬೀರುತ್ತಿದೆ. ಪಕ್ಷಿ, ಪ್ರಾಣಿ, ಸಸ್ಯ ಸಂಕುಲಗಳಿಗೆ ಹಾನಿಯಾಗಲಿದೆ ಎಂದರು.

ಶಾಲೆಯ ಎದುರು ತ್ಯಾಜ್ಯ ಸುರಿದಿರುವುದರಿಂದ ಶಾಲಾ ಮಕ್ಕಳ ಆರೋಗ್ಯದ ಮೇಲೆ ದುಸ್ಪರಿಣಾಮ ಬೀರುತ್ತಿದೆ. ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ರಸ್ತೆ ಬದಿ ತ್ಯಾಜ್ಯ ಸುರಿಯುವುದರಿಂದ ಜಲಾಶಯದ ನೀರು ಮಲೀನವಾಗಲಿದೆ. ತಾಲ್ಲೂಕು ಆಡಳಿತ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಜಾಗೃತರಾಗಿ ರಸ್ತೆ ಬದಿ ತ್ಯಾಜ್ಯ ಸುರಿದು ಬಾಚೇನಹಟ್ಟಿ, ವರದೋನಹಳ್ಳಿ, ತಿಪ್ಪಗೊಂಡನಹಳ್ಳಿ, ಚೋಳನಾಯಕನ ಹಳ್ಳಿ ಸುತ್ತಮುತ್ತಲಿನಲ್ಲಿ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದರು.

ರಸ್ತೆ ಬದಿ ಸುರಿದ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುತ್ತಾರೆ. ಇದರಿಂದ ವಿಷಾನೀಲ ಬಿಡುಗಡೆಯಾಗುತ್ತಿದೆ. ವಾಹನಗಳಲ್ಲಿ ಸಂಚರಿಸುವಾಗ ಉಸಿರು ಕಟ್ಟಿದಂತಾಗುತ್ತಿದೆ. ವಿಷಾನಿಲದಿಂದ ಗಿಡಮರಗಳು ಅಕಾಲಿಕವಾಗಿ ಒಣಗುತ್ತಿವೆ. ಹೊಲದಲ್ಲಿ ಕೆಲಸ ಮಾಡುವ ರೈತರ ಮೈಮೇಲೆ ತುರಿಕೆಯಾಗುತ್ತಿದೆ ಎಂದು ಬಾಚೇನಹಟ್ಟಿ ಬಾಳೇಗೌಡ, ಕಲ್ಲೂರಿನ ಶಿವಣ್ಣ, ಶ್ಯಾನುಬೋಗನಹಳ್ಳಿ ಮುದ್ದಹನುಮೇಗೌಡ ಅವರು ತಿಳಿಸಿದ್ದಾರೆ.

ರೈತರ ಹೊಲಗಳಲ್ಲಿ ತ್ಯಾಜ್ಯ ಸುರಿದು ಪರಾರಿಯಾಗುವವರನ್ನು ಹಿಡಿದು, ರೈತರ ಭೂಮಿ ವಿಷಯುಕ್ತವಾಗುವುದನ್ನು ತಡೆಗಟ್ಟಬೇಕು ಎಂದು ತಾಲ್ಲೂಕು ರೈತ ಸಂಘದ ಮುಖಂಡ ದೊಡ್ಡರಂಗಯ್ಯ ಒತ್ತಾಯಿಸಿದ್ದಾರೆ.

Post Comments (+)