ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ: ತೃಪ್ತಿ ನೀಡದ ಸುರಕ್ಷಾ ಕ್ರಮ

ಸೂಕ್ತ ಕ್ರಮ ಕೈಗೊಳ್ಳದ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಎಡಿಜಿಪಿ ಅಸಮಾಧಾನ
Published 25 ಜುಲೈ 2023, 21:22 IST
Last Updated 25 ಜುಲೈ 2023, 21:22 IST
ಅಕ್ಷರ ಗಾತ್ರ

ರಾಮನಗರ: ‘ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸುರಕ್ಷತೆ ಮತ್ತು ಅಪಘಾತ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿಲ್ಲ. ರಸ್ತೆ ಸುರಕ್ಷತೆ ನಿಟ್ಟಿನಲ್ಲಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಂಚಾರ ಮತ್ತು ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

ಎಕ್ಸ್‌ಪ್ರೆಸ್‌ ವೇಯ ವಿವಿಧ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಿಂಗಳ ಹಿಂದೆ ಎಕ್ಸ್‌ಪ್ರೆಸ್‌ ವೇಗೆ ಭೇಟಿ ನೀಡಿದ್ದಾಗ ಸುರಕ್ಷತೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ, ಹೇಳಿಕೊಳ್ಳುವಂತಹ ಯಾವುದೇ ಕೆಲಸವಾಗಿಲ್ಲ’ ಎಂದರು.

ಸೂಚನಾ ಫಲಕ ಹಾಕಿಲ್ಲ: ‘ಅಪಘಾತ ಸ್ಥಳ, ಪ್ರವೇಶ–ನಿರ್ಗಮನ ಜಾಗದಲ್ಲಿ ಸೂಚನಾ ಫಲಕ ಇನ್ನೂ ಹಾಕಿಲ್ಲ. ಪೊಲೀಸರು ಗುರುತಿಸಿರುವ 18 ಅಪಘಾತದ ಸ್ಥಳಗಳಲ್ಲಿ ಕೇವಲ ಒಂದು ಕಡೆ ಮಾತ್ರ ಎಎನ್‌ಪಿಆರ್(ಆಟೋಮ್ಯಾಟಿಕ್‌ ನಂಬರ್‌ ಪ್ಲೇಟ್‌ ರೆಕಾರ್ಡರ್‌) ಕ್ಯಾಮೆರಾ ಅಳವಡಿಸಿರುವುದಾಗಿ ಹೇಳಿದ್ದಾರೆ. ಹೆದ್ದಾರಿ ಗಸ್ತು ವಾಹನ, ತುರ್ತು ವಾಹನಗಳ ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇನ್ನೂ 20 ದಿನದೊಳಗೆ ಅಳವಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ರಸ್ತೆ ದಾಟಲು ಸ್ಕೈವಾಕ್ ನಿರ್ಮಿಸಲು ಸೂಚಿಸಲಾಗಿದ್ದು, ಅದಕ್ಕೆ ಹೆಚ್ಚಿನ ಕಾಲಾವಕಾಶ ಕೋರಿದ್ದಾರೆ’ ಎಂದು ತಿಳಿಸಿದರು.

ವಿವಿಧೆಡೆ ಪರಿಶೀಲನೆ: ಹೆದ್ದಾರಿ ಆರಂಭಗೊಳ್ಳುವ ಕುಂಬಳಗೋಡು ಸಮೀಪದ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದಿಂದ ಪರಿಶೀಲನೆ ಆರಂಭಿಸಿದ ಎಡಿಜಿಪಿ, ರಾಮನಗರ ಜಿಲ್ಲೆಯ ಗಡಿ ನಿಡಘಟ್ಟದವರೆಗೆ ಸಂಚರಿಸಿದರು. ಮಾರ್ಗಮಧ್ಯೆ ಟೋಲ್ ಸಂಗ್ರಹ ಕೇಂದ್ರ ಮತ್ತು ಕೆಲ ಪ್ರವೇಶ–ನಿರ್ಗಮನ ಸ್ಥಳಗಳನ್ನು ಪರಿಶೀಲಿಸಿದರು.

ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿವೇಕ್ ಜೈಸ್ವಾಲ್, ಎಕ್ಸ್‌ಪ್ರೆಸ್‌ ವೇ ಯೋಜನಾ ಅಧಿಕಾರಿ ರಾಹುಲ್ ಗುಪ್ತಾ ಹಾಗೂ ಕನ್ಸಲ್ಟೆಂಟ್ ರವಿಕುಮಾರ್ ಇದ್ದರು.

ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತ ಹೆಚ್ಚಳದ ಬೆನ್ನಲ್ಲೇ, ಅಲೋಕ್ ಕುಮಾರ್ ಜೂನ್‌ನಲ್ಲಿ ಹೆದ್ದಾರಿಗೆ ಭೇಟಿ ನೀಡಿದ್ದರು.‌ ಅದಾದ ಒಂದು ತಿಂಗಳಲ್ಲೆ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿರ್ಲಕ್ಷ್ಯಿಸಿದರೆ ಕ್ರಮ: ಎಡಿಜಿಪಿ

‘ಎಕ್ಸ್‌ಪ್ರೆಸ್‌ ವೇನಲ್ಲಿ ಸುರಕ್ಷತೆ ಮತ್ತು ಸಂಚಾಯ ನಿಯಮ ತಡೆಗೆ ತಂತ್ರಜ್ಞಾನ ಆಧಾರಿತ  ಶಾಶ್ವತ ಪರಿಹಾರ ಸಿಗಬೇಕು. ಇಲ್ಲಿ ಹೆದ್ದಾರಿಯವರು ಮಾಡಬೇಕಾದ ಕೆಲಸಗಳೇ ಹೆಚ್ಚಿವೆ. ನಿರ್ಲಕ್ಷ್ಯ ಮಾಡಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಡಿಜಿ‍ಪಿ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದರು.

ಮೆಚ್ಚುಗೆ: ‘ನಮ್ಮ ಪೊಲೀಸರು ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಅಪಘಾತಗಳನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಿದ್ದಾರೆ. ಸಾವಿನ ಸಂಖ್ಯೆ ಒಂದಂಕಿಗೆ ಇಳಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಈ ತಿಂಗಳು 27 ಅಪಘಾತಗಳು ಸಂಭವಿಸಿವೆ. ಈ ಪೈಕಿ, ಮೂವರು ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಆರು ತಿಂಗಳಿಗೆ ಹೋಲಿಸಿದರೆ, ಇದು ಅತ್ಯಂತ ಕಡಿಮೆ’ ಎಂದರು.

‘ಚಾಲನಾ ಪರವಾನಗಿ ರದ್ದುಗೊಳಿಸಿ’

‘ಎಕ್ಸ್‌ಪ್ರೆಸ್ ವೇನಲ್ಲಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಪೊಲೀಸರು ಒಂದು ತಿಂಗಳು ನಡೆಸಿದ ಕಾರ್ಯಾಚರಣೆ ಹಾಗೂ ಇನ್ನಿತರ ಸುಧಾರಣಾ ಕ್ರಮಗಳಿಂದಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಸಾವಿನ ಸಂಖ್ಯೆಯೂ ಒಂದಂಕಿಗೆ ಇಳಿದಿದೆ. ಜುಲೈ ತಿಂಗಳಲ್ಲಿ 30 ಅಪಘಾತಗಳು ಸಂಭವಿಸಿದ್ದು ಮೂವರು ಮೃತಪಟ್ಟಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಎಡಿಜಿಪಿ ಅಲೋಕ್ ಕುಮಾರ್ ಗಮನಕ್ಕೆ ತಂದರು.

‘ಸಂಚಾರ ನಿಯಮವನ್ನು ಪದೇ ಪದೇ ಉಲ್ಲಂಘನೆ ಮಾಡಿರುವ 27 ಮಂದಿಯ ಚಾಲನಾ ಪರವಾನಗಿಯನ್ನು ರದ್ದುಪಡಿಸಲು ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ’ ಎಂದರು. ಆಗ ಎಡಿಜಿಪಿ, ‘ಕೂಡಲೇ ರದ್ದುಮಾಡಿ’ ಎಂದು ಪಕ್ಕದಲ್ಲೇ ಇದ್ದ ಆರ್‌ಟಿಒ ಅಧಿಕಾರಿ ಶಿವಕುಮಾರ್ ಅವರಿಗೆ ಸೂಚನೆ ನೀಡಿದರು.

ಆಗ ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ , ‘ನಾವು ಪರವಾನಗಿ ರದ್ದು ಪಡಿಸಲು ಶಿಫಾರಸ್ಸು ಮಾಡಿದರೂ, ಡಿಜಿಟಲ್ ಲಾಕರ್‌ನಲ್ಲಿ ಅದು ಇರುತ್ತದೆ. ಅಲ್ಲಿಯೂ ರದ್ದಾಗಿರುವ ಬಗ್ಗೆ ಮಾಹಿತಿ ಬರುವಂತೆ ಮಾಡಿ. ಇಲ್ಲದಿದ್ದರೆ ಅದನ್ನೇ ತೋರಿಸಿಕೊಂಡು ತಿರುಗಾಡುತ್ತಾರೆ’ ಎಂದು ಸಲಹೆ ನೀಡಿದರು.

ಅಂಕಿ ಅಂಶ (ಜುಲೈ 24ರವರೆಗೆ)

30: ಹೆದ್ದಾರಿಯಲ್ಲಿ ಜುಲೈ ತಿಂಗಳಲ್ಲಿ ಸಂಭವಿಸಿದ ಅಪಘಾತ
3: ಅಪಘಾತದಲ್ಲಿ ಮೃತಪಟ್ಟವರು
40: ಗಾಯಾಗಳುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT