ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಭೀಮ ಬಲವರ್ಧನೆ ಸಮಾವೇಶ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಹೇಶ್

Published 15 ಜನವರಿ 2024, 7:28 IST
Last Updated 15 ಜನವರಿ 2024, 7:28 IST
ಅಕ್ಷರ ಗಾತ್ರ

ರಾಮನಗರ: ಬಿಜೆಪಿ ಸರ್ಕಾರ ರಾಜ್ಯದಲ್ಲಿ ಒಳಮೀಸಲಾತಿ ಪ್ರಕಟಿಸಿದ ನಂತರ ಉಂಟಾದ ತಪ್ಪು ಗ್ರಹಿಕೆಯಿಂದಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸಾಕಷ್ಟು ನಷ್ಟ ಉಂಟಾಯಿತು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಹೇಶ್ ಅಭಿಪ್ರಾಯಪಟ್ಟರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಸಂಬಂಧ ದಲಿತ ಸಮುದಾಯದಲ್ಲಿ ತಪ್ಪು ಅಭಿಪ್ರಾಯ ಮತ್ತು ಗ್ರಹಿಕೆ ಹೋಗಲಾಡಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಭೀಮ ಬಲವರ್ಧನೆ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ರಾಮನಗರ ಜಿಲ್ಲೆಯಲ್ಲಿ ಜನವರಿ ಅಂತ್ಯದೊಳಗೆ ಭೀಮ ಬಲವರ್ಧನೆ ಸಮಾವೇಶ ಆಯೋಜಿಸಲು ತಯಾರಿ ನಡೆದಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಿಂದಲೂ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಈ ಸಂಬಂಧ ಸ್ಥಳೀಯ ಮುಖಂಡರು ದಿನಾಂಕ ನಿಗದಿಪಡಿಸಿ ಸಮಾವೇಶ ಯಶಸ್ವಿ ಮಾಡಬೇಕು ಎಂದರು.

ದೇಶದ ಸಂವಿಧಾನ ಬದಲಾಯಿಸುವುದು ಅಸಾಧ್ಯ ಮಾತು. ಬಿಜೆಪಿ ಇರಲಿ, ಅನಂತ್ ಕುಮಾರ್ ಹೆಗಡೆಯಿಂದಲೂ ಅಸಾಧ್ಯವಾದ ಕಾರ್ಯ. ಈ ಬಗ್ಗೆ ದಲಿತ ಸಮುದಾಯಕ್ಕೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಕಾಂಗ್ರೆಸ್ ದಲಿತ ಸಮುದಾಯವನ್ನು ಮತ ಬ್ಯಾಂಕ್ ಮಾಡಿಕೊಂಡಿದೆ. ಮೊದಲ ಆರು ಪಂಚವಾರ್ಷಿಕ ಯೋಜನೆಗಳಲ್ಲಿ ಕಾಂಗ್ರೆಸ್ ದಲಿತ ಸಮುದಾಯದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿರಲಿಲ್ಲ. ವಾಜಪೇಯಿ ಪ್ರಧಾನಿ ಆಗಿದ್ದ ವೇಳೆ ರಾಷ್ಟ್ರಪತಿ ಕೆ.ಆರ್. ನಾರಾಯಣ್ ಸಲಹೆ ಮೇರೆಗೆ ದಲಿತ ಸಮುದಾಯದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಯೋಜನೆ ರೂಪಿಸಲಾಯಿತು ಎಂದು ತಿಳಿಸಿದರು.

ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ 2013ರಲ್ಲಿ ದಲಿತ ಸಮುದಾಯದ ಅಭಿವೃದ್ಧಿಗಾಗಿ ಜಾರಿಗೆ ತಂದಿದ್ದ ವಿಶೇಷ ಘಟಕ ಯೋಜನೆಯಲ್ಲಿ ₹60 ಸಾವಿರ ಕೋಟಿ ದುರುಪಯೋಗವಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಬಿಜೆಪಿ ಎಸ್‌.ಸಿ ಮೋರ್ಚಾದ ಅಧ್ಯಕ್ಷ ಹಾರೋಹಳ್ಳಿ ಚಂದ್ರು, ಮುಖಂಡರಾದ ವಿ.ಎಚ್.ರಾಜು ಸಿಂಗ್ರಯ್ಯ, ಶಂಕರ್, ಚೌಡಯ್ಯ, ರಾಘವೇಂದ್ರ, ಕಾಳಯ್ಯ, ಕಿಶನ್, ನಾಗೇಶ್, ಚಂದನ್ ಮೋರೆ, ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT