ಮಂಗಳವಾರ, ಮಾರ್ಚ್ 31, 2020
19 °C
ಕಸ ವಿಲೇವಾರಿ ತಾಣವಾದ ಸೀತಾರಾಮನ ಕೆರೆಯ ಕೋಡಿ ಹಳ್ಳ

ಬಿಡದಿ: ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಇಲ್ಲಿನ ಪುರಸಭೆ 21ನೇ ವಾರ್ಡ್ ವ್ಯಾಪ್ತಿಯ ತೊರೆದೊಡ್ಡಿ ಮತ್ತು ಬಿಸಿಲೇಶ್ವರಿನಗರ ಗ್ರಾಮಗಳ ಸಮೀಪದ ಹಳ್ಳದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ಸುರಿಯುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪಟ್ಟಣ ಪ್ರದೇಶದ ತ್ಯಾಜ್ಯವನ್ನು ತಂದು ಗ್ರಾಮದ ಪಕ್ಕದಲ್ಲಿ ವಿಲೇವಾರಿ ಮಾಡುತ್ತಿರುವುದರಿಂದ ಉಂಟಾಗುತ್ತಿರುವ ದುರ್ವಾಸನೆ ಮತ್ತು ಅಧಿಕ ಸೊಳ್ಳೆ- ನೊಣಗಳ ಕಾಟದಿಂದ ಇಡೀ ವಾತಾವರಣವೇ ಹಾಳಾಗಿದೆ. ಗ್ರಾಮಗಳ ನಿವಾಸಿಗಳ ಆರೋಗ್ಯವೂ ಹದಗೆಡುತ್ತಿದೆ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ನಿತ್ಯ ಸಂಗ್ರಹವಾಗುತ್ತಿರುವ ಕಸ ವಿಲೇವಾರಿಗೆ ಸೂಕ್ತ ಜಾಗವಿಲ್ಲದ ಕಾರಣ ಪುರಸಭೆ ಸಿಬ್ಬಂದಿ ಗ್ರಾಮೀಣ ಭಾಗದ ಹಳ್ಳ-ಕೊಳ್ಳಗಳು, ಖಾಲಿ ನಿವೇಶನಗಳ ಬಳಿ ತಂದು ಸುರಿಯುತ್ತಿರುವುದು ಕಂಡು ಬಂದಿದೆ. ಕಸವನ್ನು ಒಣಕಸ ಮತ್ತು ಹಸಿ ಕಸವನ್ನಾಗಿ ವಿಂಗಡಣೆ ಮಾಡದೆ ಪ್ಲಾಸ್ಟಿಕ್ ಮತ್ತು ರಾಸಾಯನಿಕ ವಸ್ತುಗಳ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡಲಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ತ್ಯಾಜ್ಯ ವಿಲೇವಾರಿಗಾಗಿ ಒಂದು ವರ್ಷದ ಅವಧಿಗೆ ಇಂತಿಷ್ಟು ಹಣ ನೀಡುವುದಾಗಿ ಬಿಡದಿ ಪುರಸಭೆ ಅಧಿಕಾರಿಗಳು ಮತ್ತು ಜಮೀನಿನ ಮಾಲೀಕರಾದ ಇಟ್ಟಮಡು ರಾಮಚಂದ್ರಯ್ಯ ಎಂಬುವರ ನಡುವೆ ಒಪ್ಪಂದವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಜಮೀನು ಮಾಲೀಕರು ತಮ್ಮ ಜಮೀನಿನ ಮಧ್ಯೆ ಹಾದುಹೋಗಿರುವ ಸೀತಾರಾಮನ ಕೆರೆಯ ಕೋಡಿ ಹಳ್ಳದ ಜಾಗವನ್ನು ಮುಚ್ಚುವುದಕ್ಕೆ ತ್ಯಾಜ್ಯವನ್ನು ಬಳಸುತ್ತಿದ್ದಾರೆ ಎನ್ನುವ ಆರೋಪ ಗ್ರಾಮಸ್ಥರದು. 

ತ್ಯಾಜ್ಯವನ್ನು ಹಳ್ಳದಲ್ಲಿ ಸುರಿಯುತ್ತಿರುವುದರಿಂದ ಇಲ್ಲಿಂದ ಕೇವಲ 200 ಮೀಟರ್‌ನಷ್ಟು ಅಂತರದಲ್ಲಿರುವ ತೊರೆದೊಡ್ಡಿ ಮತ್ತು ಬಿಸಿಲೇಶ್ವರಿ ನಗರದ ನಿವಾಸಿಗಳು ತ್ಯಾಜ್ಯದ ಗಬ್ಬುವಾಸನೆಯಿಂದ ಕಂಗಾಲಾಗಿದ್ದಾರೆ. ಈಗಾಗಲೇ ಕೆಲವರು ಜ್ವರದಿಂದ ಬಳಲುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಅಕ್ರಮ ಕಸ ವಿಲೇವಾರಿಯ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಕೇಳಿಬಂದ ಮೇರೆಗೆ ಇಟ್ಟಮಡು – ತೊರೆದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಸ ವಿಲೇವಾರಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಪುರಸಭೆಗೆ ಪತ್ರ ಬರೆದಿದ್ದಾರೆ.

ಪತ್ರ ಬರೆಯಲಾಗಿದೆ: ಈಗಾಗಲೇ ಅಧಿಕ ಪ್ರಮಾಣದಲ್ಲಿ ವಿಲೇವಾರಿ ಮಾಡಿರುವ ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸಿದ ನಂತರ ಕಸವನ್ನು ಮಣ್ಣಿನಿಂದ ಮುಚ್ಚುವಂತೆ ಆಗ್ರಹಿಸಲಾಗಿದೆ. ಗ್ರಾಮೀಣ ಜನರ ಆರೋಗ್ಯದ ಹಿತದೃಷ್ಟಿಯಿಂದ ಕಸ ವಿಲೇವಾರಿಯನ್ನು ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಅವೈಜ್ಞಾನಿಕ ಕಸ ವಿಲೇವಾರಿ ಕ್ರಮದಿಂದ ಮುಂದಿನ ದಿನಗಳಲ್ಲಿ ಉದ್ಬವಿಸುವ ಸಮಸ್ಯೆಗಳಿಗೆ ಬಿಡದಿ ಪುರಸಭೆಯ ಎಂಜಿನಿಯರ್‌ ಅರ್ಚನಾ ಅವರೇ ಹೊಣೆಯಾಗಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿ, ಪುರಸಭೆಗೆ ಲಿಖಿತ ಪತ್ರ ಬರೆದಿರುವುದಾಗಿ ಪುರಸಭೆ ಸದಸ್ಯೆ ವೈಶಾಲಿ ಚೆನ್ನಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು