ಸ್ಪರ್ಧೆ ಶತಸಿದ್ಧ; ಪಕ್ಷ ಗೊತ್ತಿಲ್ಲ: ಯೋಗೇಶ್ವರ್
ಚನ್ನಪಟ್ಟಣ: ‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಶತಸಿದ್ಧ. ಆದರೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬ ತೀರ್ಮಾನವನ್ನು ಬೆಂಬಲಿಗರು, ಹಿತೈಷಿಗಳಿಗೆ ಬಿಟ್ಟಿದ್ದೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಸಭೆಯೊಂದರಲ್ಲಿ ಮಾತನಾಡಿ, ‘ಚನ್ನಪಟ್ಟಣ ಜನತೆ ನನ್ನ ಸ್ಪರ್ಧೆಯನ್ನು ಬಯಸುತ್ತಿದೆ. ನಿಮ್ಮ ಜೊತೆ ಇರುತ್ತೇವೆ ಎಂದು ಜನರು ಪಕ್ಷಾತೀತವಾಗಿ ಹೇಳುತ್ತಿದ್ದಾರೆ. ಆ.11ರಂದು ತಾಲ್ಲೂಕಿನಲ್ಲಿ ‘ನಮ್ಮ ಶಾಸಕ, ನಮ್ಮ ಹಕ್ಕು’ ಸ್ವಾಭಿಮಾನಿ ಸಮಾವೇಶ ನಡೆಯಲಿದೆ. ಇದು ತಾಲ್ಲೂಕಿನ ರಾಜಕೀಯ ಅಸ್ಮಿತೆ, ಸ್ವಾಭಿಮಾನವನ್ನು ತೀರ್ಮಾನಿಸುವ ದಿಕ್ಸೂಚಿ ಆಗಲಿದೆ. ನಾನು ರಾಜಕೀಯದಲ್ಲಿ ಮುಂದುವರೆಯುವ ಅಥವಾ ರಾಜಕೀಯ ಬಿಡುವ, ಚುನಾವಣೆಗೆ ಸ್ವರ್ಧಿಸುವ ಇಲ್ಲವೇ ಹಿಂದೆ ಸರಿಯುವ ನಿರ್ಧಾರ ಆ ಸಭೆಯಲ್ಲಿ ಅಂತಿಮವಾಗಲಿದೆ’ ಎಂದು ಹೇಳಿದರು.