ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ

ಕಾಂಗ್ರೆಸ್ ಅಭ್ಯರ್ಥಿ ಸುರೇಶ್‌ಗೆ ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಸವಾಲು
Published 17 ಏಪ್ರಿಲ್ 2024, 7:37 IST
Last Updated 17 ಏಪ್ರಿಲ್ 2024, 7:37 IST
ಅಕ್ಷರ ಗಾತ್ರ

ರಾಮನಗರ: ‘ರಾಮನಗರದ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ನಾವು. ಆ ಯೋಜನೆಗಳನ್ನು ತಮ್ಮದೆಂದು ಹೇಳಿಕೊಳ್ಳುವವರು, ಸಂಸದರಾಗಿ ಹತ್ತು ವರ್ಷಗಳಲ್ಲಿ ತಾವು ಮಾಡಿರುವ ಸಾಧನೆಯ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರಿಗೆ ಸವಾಲು ಹಾಕಿದರು.

‘ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಸಂಸ್ಕೃತ ವಿಶ್ವವಿದ್ಯಾಲಯ, ಜಲ ಜೀವನ್ ಮಿಷನ್, ರಸ್ತೆಗಳ ನಿರ್ಮಾಣ, ಜಿಟಿಟಿಸಿ, ಸತ್ತೆಗಾಲ ನೀರಾವರಿ ಯೋಜನೆಗಳನ್ನು ನಾವು ಜಾರಿಗೆ ತಂದಿದ್ದೇ ವಿನಾ ಅವರಲ್ಲ’ ಎಂದು ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದ್ವೇಷ ರಾಜಕಾರಣ ಮಾಡುತ್ತಾ, ಎದುರಾಳಿಗಳನ್ನು ಬೆದರಿಸಿಕೊಂಡು ಕ್ಷೇತ್ರದಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿರುವುದೇ ಸುರೇಶ್ ಅವರ ಸಾಧನೆ. ಕ್ಷೇತ್ರದಲ್ಲಿ ನಿಜವಾಗಿಯೂ ಅಭಿವೃದ್ಧಿ ಕೆಲಸಗಳಾಗಿದ್ದರೆ ಅದು ನಮ್ಮ ಕಾಲದಲ್ಲಿ. ಜನರು ಕೂಲಿ ಕೊಡಬೇಕಿರುವುದು ನಮಗೇ ಹೊರತು ಅವರಿಗಲ್ಲ’ ಎಂದು ಟಾಂಗ್ ನೀಡಿದರು.

‘ಸಬಲೀಕರಣಕ್ಕೆ ಸಂಕಲ್ಪ’: ‘ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ನಿಚ್ಚಳ ಬಹುಮತ ಗಳಿಸಲಿದ್ದು, ಮೋದಿ ಅವರು ಮೂರನೇ ಸಲ ಪ್ರಧಾನಿಯಾಗುವುದರಲ್ಲಿ ಅನುಮಾನವೇ ಇಲ್ಲ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಕ್ಕಾಗಿ ಬಿಜೆಪಿಯ ಸಂಕಲ್ಪ ಪತ್ರದ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದೆ’ ಎಂದು ಹೇಳಿದರು.

‘ನಾರಿಶಕ್ತಿ, ಯುವಶಕ್ತಿ, ರೈತ ಶಕ್ತಿ ಸೇರಿದಂತೆ ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದು, ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಹಿಂದಿನ ಯೋಜನೆಗಳಿಗೆ ಮತ್ತಷ್ಟು ಬಲ ತುಂಬಲಿದೆ. 70 ವರ್ಷ ದಾಟಿದ ವೃದ್ಧರಿಗೆ ಉಚಿತ ಆರೋಗ್ಯ ಸೇವೆ, ಯುವ ಸಮುದಾಯಕ್ಕೆ ಉದ್ಯೋಗಾವಕಾಶದೊಂದಿಗೆ ನಿರುದ್ಯೋಗ ಇಳಿಕೆಗೂ ಕ್ರಮ ಕೈಗೊಂಡಿದೆ’ ಎಂದರು.

‘ರೈತರನ್ನು ಆರ್ಥಿಕವಾಗಿ ಮತ್ತಷ್ಟು ಸ್ವಾವಲಂಬಿಗಳಾಗಿಸಲು ವೈಜ್ಞಾನಿಕ ಕೃಷಿ ಉತ್ತೇಜನಕ್ಕೆ ಯೋಜನೆಗಳನ್ನು ರೂಪಿಸಿದೆ. ಮಹಿಳೆಯರನ್ನು ಲಕ್ಷಾಧಿಪತಿಗಳಾಗಿಸುವ ಮೂಲಕ ಅವರಿಗೆ ಆರ್ಥಿಕ ಬಲ ತುಂಬಲು ಸ್ವಯಂ ಉದ್ಯೋಗ, ಮುದ್ರಾ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ’ ಎಂದು ತಿಳಿಸಿದರು.

‘ಬಿಜೆಪಿಯ ಸಂಕಲ್ಪ ಪತ್ರಕ್ಕೂ, ಕಾಂಗ್ರೆಸ್‌ನ ನ್ಯಾಯಪತ್ರಕ್ಕೂ ಹೋಲಿಕೆ ಮಾಡಲಾಗದು. ಅವರ ಪ್ರಣಾಳಿಕೆಯಲ್ಲೂ ದೇಶದ ಚಿತ್ರಗಳ ಬದಲು, ವಿದೇಶಗಳ ಚಿತ್ರ ಬಳಸಲಾಗಿದೆ. ಇದರಲ್ಲೇ ಗೊತ್ತಾಗುತ್ತದೆ ದೇಶ ಮತ್ತು ಜನರ ಪರವಾದ ಅವರ ಕಾಳಜಿ ಎಂತಹದ್ದೆಂದು’ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಸ್ವಾಮಿ, ಮುಖಂಡರಾದ ಗಿರಿಗೌಡ, ಗೌತಮ್‌ ಗೌಡ, ಜಯಕುಮಾರ್, ಮೋಹನ್, ಅಶ್ವತ್ಥ ಮುಂತಾದವರು ಇದ್ದರು.

‘ಮಂಜುನಾಥ್ ಗೆಲುವು ಖಚಿತ’

‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಗೆಲುವು ಸಾಧಿಸಿ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ತಂಡದ ಸದಸ್ಯರಲ್ಲಿ ಒಬ್ಬರಾಗುವುದರಲ್ಲಿ ಅನುಮಾನವೇ ಬೇಡ. ಮಂಜುನಾಥ್ ಅವರ ಗೆಲುವಿನೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಶಕೆ ಶುರುವಾಗಲಿದೆ. ದಿನದಿಂದ ದಿನಕ್ಕೆ ನಶಿಸುತ್ತಿರುವ ಕಾಂಗ್ರೆಸ್‌ಗೆ ಮತ ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅರಿವು ಜನರಲ್ಲಿ ಮೂಡಿದೆ. ಹಾಗಾಗಿ ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನವೂ ಸಿಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT