ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷಿ ಹೆಸರಿನಲ್ಲಿ ಬ್ಲ್ಯಾಕ್ ಮೇಲ್‌: ಆತ್ಮಹತ್ಯೆ

ಕನಕಪುರ: ಆರ್ಕಾವತಿ ನದಿಗೆ ಹಾರಿದ್ದ ವ್ಯಕ್ತಿ ಪ್ರಕರಣಕ್ಕೆ ಹೊಸ ತಿರುವು
Published 30 ಮಾರ್ಚ್ 2024, 5:24 IST
Last Updated 30 ಮಾರ್ಚ್ 2024, 5:24 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಟಿ.ಬೇಕುಪ್ಪೆ ಅರ್ಕಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಮುತ್ತುರಾಜು ಪ್ರಕರಣದಲ್ಲಿ ಬ್ಯ್ಲಾಕ್ ಮೇಲ್ ಮಾಡಿದ್ದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ತನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿ ತಾನು ಜ್ಯೋತಿಷಿ ಎಂಬುದಾಗಿ ನಂಬಿಸಿದ್ದ ವಿಷ್ಣು (22) ಬಂಧಿತ ಆರೋಪಿ. ಈತ ಬಾಗಲಕೋಟೆಯವನಾಗಿದ್ದು, ಬೆಂಗಳೂರಿನ ಬಸವೇಶ್ವರ ಕಾಲೇಜಿನ ವಿದ್ಯಾರ್ಥಿ. ಈತನನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬರ ಬ್ಲ್ಯಾಕ್‌ಮೇಲ್‌ನಿಂದಾಗಿ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುತ್ತುರಾಜು ಅವರ ಪತ್ನಿ ಶಿಲ್ಪಾ ಪೊಲೀಸರಿಗೆ ದೂರು ನೀಡಿದ್ದರು. 

ಏನಿದು ಪ್ರಕರಣ?: ಸಮಸ್ಯೆಯಲ್ಲಿದ್ದ ಮುತ್ತುರಾಜು ಅವರಿಗೆ ಫೇಸ್‌ಬುಕ್ ಮೂಲಕ ಆರೋಪಿ ಪರಿಚಯವಾಗಿದ್ದ. ತನ್ನನ್ನು ಜ್ಯೋತಿಷಿ ಎಂದು ಬಿಂಬಿಸಿಕೊಂಡಿದ್ದ ಆರೋಪಿ ವಿಷ್ಣು, ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ. 

ಮಾರ್ಚ್‌ 5ರಂದು ಮುತ್ತುರಾಜು ಅವರು ವಿಷ್ಣು ಅವರಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರ ಕೋರಿದ್ದರು. ‘ನಿನ್ನ ಮತ್ತು ನಿನ್ನ ಅತ್ತೆಯ ಫೋಟೊ ಕೊಡು’ ಎಂದು ವಿಷ್ಣು ಹೇಳಿದ್ದ. ಅಂತೆಯೇ ಮುತ್ತುರಾಜು ಫೋಟೊ ಕೊಟ್ಟಿದ್ದರು. ಸಮಸ್ಯೆ ಪರಿಹಾರಕ್ಕಾಗಿ ವಿಷ್ಣುವಿಗೆ ಹಣವನ್ನೂ ನೀಡಿದ್ದರು. 

ಕೆಲ ದಿನಗಳ ಬಳಿಕ ವಿಷ್ಣು ಮತ್ತೆ ಮುತ್ತುರಾಜು ಅವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ವೇಳೆ ಮೊದಲು ಸಮಸ್ಯೆ ಪರಿಹರಿಸಿ, ನಂತರ ಹಣ ಕೊಡುವೆ ಎಂದು ಮುತ್ತುರಾಜು ಹೇಳಿದ್ದರು. ಆಗ ಮುತ್ತುರಾಜು ಮತ್ತು ಅವರ ಅತ್ತೆಯ ಫೋಟೊಗಳನ್ನು ಡೀಪ್‌ಫೇಕ್ ಮಾಡಿ ಇಬ್ಬರಿಗೂ ಅಕ್ರಮ ಸಂಬಂಧವಿದೆ ಎಂದು ಟ್ಯಾಗ್‌ಲೈನ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ವಿಷ್ಣು ಬೆದರಿಕೆ ಒಡ್ಡಿದ್ದ. 

ಇದಕ್ಕೆ ಹೆದರಿದ್ದ ಮುತ್ತುರಾಜು ಮಾನ ಹೋಗುವ ಭಯದಿಂದ ವಿಷ್ಣುವಿನ ಫೋನ್ ರಿಸೀವ್ ಮಾಡುವುದನ್ನು ನಿಲ್ಲಿಸಿದ್ದರು. ಆದರೆ, ಮಾರ್ಚ್ 9ರಂದು ಮುತ್ತುರಾಜುಗೆ ಫೋನ್ ಮಾಡಿದ್ದ ವಿಷ್ಣು, ಹಣ ಕೊಡದೇ ಹೋದರೆ ವಿಡಿಯೊ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಹೆದರಿದ್ದ ಮುತ್ತುರಾಜು ತನ್ನ ಬಾಮೈದನ ಜತೆಯಲ್ಲಿ ಜೀಪಿನಲ್ಲಿ ಟಿ. ಬೇಕುಪ್ಪೆ ಅರ್ಕಾವತಿ ಸೇತುವೆ ಕಡೆಗೆ ಹೋಗಿ ವಿಷ್ಣು ಮೊಬೈಲ್‌ಗೆ ಕಾಲ್‌ ಮಾಡಿದ್ದರು. 

‘ನೀನು ಇದೇ ರೀತಿ ಬ್ಲ್ಯಾಕ್ ಮೇಲ್ ಮಾಡಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ವಿಷ್ಣು, ‘ನೀನು ಸತ್ತರೆ ನನಗೇನು ನಷ್ಟವಿಲ್ಲ. ಆತ್ಮಹತ್ಯೆ ಮಾಡಿಕೊಂಡು ಸಾಯಿ’ ಎಂದು ಹೇಳಿದ್ದ. ಆಗ ಅರ್ಕಾವತಿ ನದಿಗೆ ಹಾರಿ ಮುತ್ತುರಾಜು ಆತ್ಮಹತ್ಯೆ ಮಾಡಿಕೊಂಡಿದ್ದರು. 

ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ವಿಷ್ಣುವಿನ ಕೈವಾಡ ಪತ್ತೆಯಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT