ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರ ಅಂಗಡಿ ಧ್ವಂಸ ಪ್ರಕರಣ: ಹಿಂದೆಯೂ ಇಂಥ ಘಟನೆಗಳು ನಡೆದಿವೆ ಎಂದ ವಿಜಯೇಂದ್ರ

Last Updated 11 ಏಪ್ರಿಲ್ 2022, 2:01 IST
ಅಕ್ಷರ ಗಾತ್ರ

ರಾಮನಗರ: ‘ಬಿಜೆಪಿಯು ಕೇಂದ್ರ, ರಾಜ್ಯ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆ ಎದುರಿಸುತ್ತದೆ. ಬೇರೆ ವಿಚಾರಗಳ ಪ್ರಸ್ತಾಪಿಸುವ ಪ್ರಶ್ನೆಯೇ ಇಲ್ಲ’ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ವಿಜಯನಗರದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಯಲ್ಲಿ ಭಾನುವಾರ ರಾಮನವಮಿ ಅಂಗವಾಗಿ ಪೂಜೆ ಸಲ್ಲಿಸಿದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು.

ಧಾರವಾಡದ ಘಟನೆ ಸೇರಿದಂತೆ ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದಿರುವ ಘಟನೆಗಳ ಕುರಿತು ಪ್ರತಿಕ್ರಿಯೆ ನೀಡಿ ‘ರಾಜ್ಯದಲ್ಲಿ ಹಿಂದೆಯೂ ಇಂತಹ ಘಟನೆಗಳು ಆಗಾಗ್ಗೆ ನಡೆದಿದ್ದವು’ ಎಂದರು.

‘ಆದರೆ ಇದು ಚುನಾವಣಾ ಪೂರ್ವ ವರ್ಷವಾದ ಕಾರಣ ವಿರೋಧಪಕ್ಷಗಳು ಇವುಗಳನ್ನೇ ವೈಭವೀಕರಿಸಿ ಮಾತನಾಡುತ್ತಿವೆ. ಘಟನೆಗಳಿಗೆ ರಾಜಕೀಯದ ಬಣ್ಣ ಕಟ್ಟುತ್ತಿವೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈ ಬಗ್ಗೆ ಗಮನ ಹರಿಸಿದ್ದು, ಸರ್ಕಾರ ಕಣ್ಣು ಮುಚ್ಚಿಕೊಂಡು ಕೂರುವ ಪ್ರಶ್ನೆಯೇ ಇಲ್ಲ’ ಎಂದರು.

ಬೆಂಗಳೂರಿನಲ್ಲಿ ಚಂದ್ರು ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿ ‘ಈ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಇವೆ. ಕೊಲೆಗೆ ಸಂಬಂಧಿಸಿದ್ದಂತೆ ಈಗಾಗಲೇ ಕಮಿಷನರ್ ಕಮಲ್‍ಪಂತ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಅಲ್ಲೊಬ್ಬ ವ್ಯಕ್ತಿ ಬೇರೆ ಹೇಳಿಕೆ ಕೊಟ್ಟಿದಾನೆ. ಸರ್ಕಾರ ಈಗಾಗಲೇ ಸಿಐಡಿ ತನಿಖೆಗೆ ಆದೇಶ ಕೂಡ ನೀಡಿದೆ. ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ತಿಳಿಯಲಿದೆ’ ಎಂದರು.

ಅನ್ನ ಕಸಿಯುವ ಕೆಲಸದ ವಿರುದ್ಧ ದನಿ: ಎಚ್.ವಿಶ್ವನಾಥ್ ಕರೆ

ಮೈಸೂರು: ‘ರಾಜ್ಯದಲ್ಲಿ ಈಗ ಅನ್ನ ಕಸಿಯುವ ಕೆಲಸ ನಡೆಯುತ್ತಿದೆ. ಸಾಹಿತಿಗಳು ಇದರ ವಿರುದ್ಧ ದನಿ ಎತ್ತಬೇಕು’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕರೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟ ಹಾಗೂ ಸಂವಹನ ಪ್ರಕಾಶನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಂದೂಕಿಗಿಂತ ಲೇಖನಿ ಶಕ್ತಿಶಾಲಿ. ಸಾಹಿತಿಗಳು ಪ್ರಸಕ್ತ ವಿದ್ಯಮಾನಗಳನ್ನು ಕುರಿತು ಬಹಿರಂಗವಾಗಿಯೇ ಬರೆಯಬೇಕು. ಇಂದು ನಡೆಯುತ್ತಿರುವ ಅನ್ನ ಕಸಿಯುವಂತಹ ಕೃತ್ಯಗಳಿಂದ ಬಹಳ ನೊಂದಿದ್ದೇನೆ’ ಎಂದರು.

‘ಹತ್ಯೆ ಮೂಲ ಹುಡುಕಬೇಕು’

ಚಿಕ್ಕಮಗಳೂರು: ‘ಚಂದ್ರು ಹತ್ಯೆ ಮೂಲವನ್ನು ಹುಡುಕುವ ಕೆಲಸ ಆಗಬೇಕಿದೆ. ಹತ್ಯೆ ಮಾಡುವ ಮನಸ್ಥಿತಿ ಏಕೆ ಬಂತು ಎಂಬುದನ್ನು ಪತ್ತೆ ಮಾಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಚಂದ್ರು ತಾಯಿಯೇ ಹೇಳಿಕೆ ನೀಡಿದ್ದಾರೆ. ಹತ್ಯೆಯ ಮೂಲ ಬಿಟ್ಟು ಬೇರೆಯದರ ಬಗ್ಗೆ ಯೋಚಿಸುವುದು ಸರಿಯಲ್ಲ. ಅಖಂಡ ಶ್ರೀನಿವಾಸ ಅವರ ಮನೆ, ಕೆ.ಜಿ ಹಳ್ಳಿ, ಡಿ.ಜಿ. ಹಳ್ಳಿಯಲ್ಲಿ ಹಲವುಮನೆಗಳಿಗೆ ಬೆಂಕಿ ಯಾಕೆ ಹಾಕಿದರು? ಎಂಬ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿದರೆ ಸತ್ಯ ಗೊತ್ತಾಗುತ್ತದೆ’ ಎಂದರು.

‘ಸಿದ್ದರಾಮಯ್ಯ ಮತ್ತು ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗಳನ್ನು ಗಮನಿಸಿದ್ದೇನೆ. ಧಾರವಾಡದ ನುಗ್ಗಿಕೇರಿಯಲ್ಲಿ ಕಲ್ಲಂಗಡಿ ಹಣ್ಣು ಬೀದಿಗೆ ಚೆಲ್ಲಿರುವುದಕ್ಕೆ ಸಂಕಟವನ್ನು ತೋರಿಸುವುದನ್ನು ತಲೆ ಹೊಡೆದಾಗಲೂ ಅವರು ತೋರಿಸಬೇಕು’ ಎಂದು ಉತ್ತರಿಸಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಪ್ರತಿಕ್ರಿಯಿಸಿ, ‘ಸಾಮರಸ್ಯ ಕದಡುವ ಕೆಲಸವನ್ನು ಯಾರೂ ಮಾಡ
ಬಾರದು. ಧಾರವಾಡದಲ್ಲಿ ಅಂಗಡಿಗಳಿಗೆ ನುಗ್ಗಿ ಕಲ್ಲಂಗಡಿ ಹಣ್ಣು ಬೀದಿಗೆ ಚೆಲ್ಲಿರುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT