ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯವಾಗಿ ನನ್ನನ್ನು ಮುಗಿಸಲು ಸಾಧ್ಯವಿಲ್ಲ: ಎ.ಮಂಜುನಾಥ್

Published 24 ಮೇ 2023, 7:19 IST
Last Updated 24 ಮೇ 2023, 7:19 IST
ಅಕ್ಷರ ಗಾತ್ರ

ಮಾಗಡಿ: ’ಚುನಾವಣೆಯಲ್ಲಿ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸಮಚಿತ್ತದಿಂದ ಬದುಕು ಸಾಗಿಸುವುದನ್ನು ರೂಢಿಸಿಕೊಂಡಿದ್ದೇನೆ’ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.

ಪಟ್ಟಣದ ಜೆಡಿಎಸ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣಾ ಸೋಲಿನ ಪರಾಮರ್ಶೆ ಸಭೆಯಲ್ಲಿ ಮಾತನಾಡಿದರು.

’ಸೋಲಿನಿಂದ ಧೃತಿಗೆಟ್ಟಿಲ್ಲ. ಜೆಡಿಎಸ್ ಕಾರ್ಯಕರ್ತರ ತಲೆ ಕಾಯುವ ಸೇವಕನಂತೆ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿ ಮಾಡಿಸಲು ಸಾವಿರಾರು ಕೋಟಿ ಅನುದಾನ ತಂದು ಕಾಮಗಾರಿ ಆರಂಭಿಸಿದ್ದೇನೆ. ಕಾರ್ಯಕರ್ತರನ್ನು ಸಬಲೀಕರಣಗೊಳಿಸುವಲ್ಲಿ ಎಡವಿದೆ. ಆದರೂ, ಗ್ರಾಮಾಂತರ ಮತದಾರರು ನನಗೆ ಅಧಿಕ ಮತ ನೀಡಿದ್ದಾರೆ. ಬಿಡದಿ, ಕೂಟಗಲ್, ಕುದೂರು ಹೋಬಳಿಯಲ್ಲಿ ನನಗೆ ಕಡಿಮೆ ಮತಗಳು ಬಂದಿವೆ’ ಎಂದರು.

’ಸಂಸದ ಡಿ.ಕೆ.ಸುರೇಶ್ 60 ಸಾವಿರ ಕೂಪನ್ ವಿತರಿಸಿ, ₹5 ಸಾವಿರ ವಸ್ತುಗಳನ್ನು ಕೊಡುವುದಾಗಿ ಮತದಾರರಲ್ಲಿ ನಂಬಿಸಿದ್ದು ಸೋಲಿಗೆ ಕಾರಣವಾಗಿದೆ. ಸ್ಮಾರ್ಟ್‌ ಕೂಪನ್‌ನಲ್ಲಿ ಕೊಟ್ಟಿರುವ ₹5 ಸಾವಿರ ಪದಾರ್ಥಗಳನ್ನು ಕೂಡಲೇ ವಿತರಿಸದಿದ್ದರೆ ಮತದಾರರೊಂದಿಗೆ ಪ್ರತಿಭಟನೆ ನಡೆಸಲಾಗುವುದು. ಸಂಸದ ಡಿ.ಕೆ.ಸುರೇಶ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ನಾನು ನನ್ನ ಪತ್ನಿ ಹಗಲಿರುಳು ಸ್ವಂತ ಹಣ ಖರ್ಚು ಮಾಡಿದ್ದೇವೆ. ಈಗ ನನ್ನನ್ನು ಸೋಲಿಸಲು ಸ್ಮಾರ್ಟ್‌ ಕೂಪನ್ ವಿತರಿಸಿರುವುದು ಎಷ್ಟು ಸರಿ? ಸೋತಿರಬಹುದು ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ’ ಎಂದರು.

ಪ್ರತಿಯೊಂದು ಬೂತ್‌ಗೆ ಹೋಗಿ ಸ್ಮಾರ್ಟ್‌ ಕೂಪನ್ ವಂಚನೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಜೆಡಿಎಸ್ ಕಾರ್ಯಕರ್ತರನ್ನು ಹಣ ನೀಡಿ ಖರೀದಿಸಿರುವ ಬಗ್ಗೆ ಮಾಹಿತಿ ಇದೆ ಎಂದು ಶಾಸಕ ಬಾಲಕೃಷ್ಣ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. 

 '25 ವರ್ಷ ಆಡಳಿತ ನಡೆಸಿದವರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪುಸ್ತಕ ರಚಿಸಿ ವಿತರಿಸಲಿಲ್ಲ. ನಾನು ಪುಸ್ತಕ ರೂಪದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಚಾರ ಮಾಡಿಸಿದ್ದೇನೆ’ ಎಂದು ಬಾಲಕೃಷ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

’ದಮಕಿ; ಸ್ಮಾರ್ಟ ಕೂಪನ್ ಬಗ್ಗೆ ಪ್ರಶ್ನಿಸಿದ ಜೆಡಿಎಸ್ ಕಾರ್ಯಕರ್ತರಿಗೆ, ಕಾಂಗ್ರೆಸ್ ಮುಖಂಡರು ದಮಕಿ ಹಾಕುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರ ರಕ್ಷಣೆಗೆ ಸದಾ ಸಿದ್ಧನಿದ್ದೇನೆ. ಜೆಡಿಎಸ್ ಕಾರ್ಯಕರ್ತರು ಒಂದು ಹೆಜ್ಜೆ ಹಿಂದೆ ಇಡಬೇಡಿ. ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದರೆ ಇನ್ನೊಂದು ಮುಖ ತೋರಿಸುತ್ತೇನೆ‘ ಎಂದರು.

ಜೆಡಿಎಸ್ ಮುಖಂಡ ಸುಹೇಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರ 29ತಿಂಗಳಲ್ಲಿ ಬಿದ್ದು ಹೋಗಲಿದೆ. ಜೆಡಿಎಸ್ ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ. ಸಂಘಟಿತರಾಗಿ ಹೋರಾಟ ಮಾಡೋಣ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮಿಮಂಜುನಾಥ್, ಜುಟ್ಟನಹಳ್ಳಿ ಜಯರಾಮ್, ಕೆ.ಕೃಷ್ಣಮೂರ್ತಿ, ದೊಡ್ಡಯ್ಯ, ವಕೀಲ ಸುಬ್ಬಾಶಾಸ್ತ್ರಿ, ಗಂಗರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT