ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಸ್ತೆಯಲ್ಲಿ ಹುರುಳಿಕಾಳು ಒಕ್ಕಣೆ: ಸುಟ್ಟು ಕರಕಲಾದ ಕಾರು

Published 13 ಜನವರಿ 2024, 7:22 IST
Last Updated 13 ಜನವರಿ 2024, 7:22 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಕೃಷ್ಣಾಪುರ–ಅಂಕುಶನಹಳ್ಳಿ ನಡುವೆ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದ ಹುರುಳಿಕಾಳು ಬಳ್ಳಿ ಕಾರಿನ ಚಕ್ರಕ್ಕೆ ಸಿಲುಕಿ, ನಂತರ ಅದು ಕಾರಿನ ಸೈಲೆನ್ಸರ್‌ಗೆ ತಾಗಿ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಶುಕ್ರವಾರ ನಡೆದಿದೆ.

ಬೆಂಗಳೂರಿನ ಬನ್ನೆರಘಟ್ಟ ರಸ್ತೆ ಅರಕೆರೆ ಬಳಿ ವಿಜಯ ಬ್ಯಾಂಕ್ ಲೇಔಟ್ ನಿವಾಸಿ ಅವಿನಾಶ್ ಅವರು ಸ್ನೇಹಿತರ ಮನೆಗೆ ಕಾರ್ಯನಿಮಿತ್ತ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ರಸ್ತೆಯಲ್ಲಿ ಒಕ್ಕಣೆಗಾಗಿ ಹಾಕಿದ್ದ ಹುರುಳಿಕಾಳು ಬಳ್ಳಿ ಕಾರಿನ ಚಕ್ರಕ್ಕೆ ಸಿಲುಕಿದೆ. ನಂತರ ಸೈಲೆನ್ಸರ್‌ಗೆ ತಗುಲಿ ಬೆಂಕಿ ಹೊತ್ತುಕೊಂಡಿದೆ. ಕಾರಿನಲ್ಲಿ ಅವಿನಾಶ್ ಸೇರಿ ಮೂರು ಮಂದಿ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿದ್ದವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಚಕ್ರಕ್ಕೆ ಹುರುಳಿಕಾಳು ಬಳ್ಳಿ ಸುತ್ತಿಕೊಂಡು ಬೆಂಕಿ ಹೊತ್ತುಕೊಂಡ ನಂತರ ಅದನ್ನು ಕಾರಿನಲ್ಲಿದ್ದವರು ಗಮನಿಸಿಲ್ಲ. ಅದನ್ನು ಸ್ಥಳೀಯ ವ್ಯಕ್ತಿಯೊಬ್ಬರು ಗಮನಿಸಿ ಬೈಕ್‌ನಲ್ಲಿ ಕಾರನ್ನು ಹಿಂಬಾಲಿಸಿ ವಿಷಯ ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡು ಒಳಗಿದ್ದ ಮೂರು ಮಂದಿ ಕಾರಿನಿಂದ ಕೆಳಗೆ ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ.

ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಸಂಬಂಧ ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆಯಲ್ಲಿ ಬೆಳೆ ಒಕ್ಕಣೆ ಮಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಾರಿನ ಮಾಲೀಕ ಅವಿನಾಶ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT