ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಗೆ ಗ್ರಾಸವಾದ ಕಾವೇರಿ ಹರಿವು ಹೆಚ್ಚಳ

ಕೆಆರ್‌ಎಸ್‌ನಿಂದ ನೀರು ಹರಿದಿದ್ದು ತಮಿಳುನಾಡಿಗೊ, ಬೆಂಗಳೂರಿಗೊ?
Published 16 ಮಾರ್ಚ್ 2024, 0:03 IST
Last Updated 16 ಮಾರ್ಚ್ 2024, 0:03 IST
ಅಕ್ಷರ ಗಾತ್ರ

ರಾಮನಗರ: ಕನಕಪುರ ತಾಲ್ಲೂಕಿನ ಸಂಗಮದಲ್ಲಿ ನಾಲ್ಕು ದಿನಗಳ ಹಿಂದೆ ನೀರಿನ ಹರಿವು ಹೆಚ್ಚಾಗಿದ್ದು, ರಾಜ್ಯದಲ್ಲಿ ಬರ ಇರುವಾಗ ತಮಿಳುನಾಡಿಗೆ ನೀರು ಹರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಸರ್ಕಾರದ ವಿರುದ್ಧ ರೈತರು ಹಾಗೂ ವಿರೋಧ ಪಕ್ಷದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದರ ಬೆನ್ನಲ್ಲೇ, ಬೆಂಗಳೂರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಎರಡು ದಿನ ಕೆಆರ್‌ಎಸ್‌ ಮತ್ತು ಕಬಿನಿಯಿಂದ ನೀರು ಬಿಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸೃಷ್ಟೀಕರಣ ನೀಡಿದ್ದಾರೆ. ಈ ವಿಷಯ ಇದೀಗ ಚರ್ಚೆಗೆ ಗ್ರಾಸವಾಗಿದೆ.

ತೀವ್ರ ಮಳೆ ಕೊರತೆಯಿಂದಾಗಿ ಮೊಣಕಾಲುದ್ದವಿದ್ದ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದೆ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್ ಕುಮಾರ್, ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮಾರ್ಚ್‌ 12ರಂದು ವಿಡಿಯೊ ಹಾಕಿದ್ದರು. ಜತೆಗೆ, ‘ನೀರು ಹರಿಯುತ್ತಿರುವುದು ಬೆಂಗಳೂರಿನ ನಾಗರಿಕರ ಬಾಯಾರಿಕೆ ನೀಗಿಸುವುದಕ್ಕಲ್ಲ. ಬದಲಿಗೆ ಇಂಡಿಯಾ ಪಾಲುದಾರ ಪಕ್ಷವಾದ ತಮಿಳುನಾಡಿನ ಡಿಎಂಕೆ ಸರ್ಕಾರವನ್ನು ತೃಪ್ತಿಗೊಳಿಸಲು ಎಂಬುದು ಸ್ಥಳೀಯರು ನೀಡಿರುವ ಖಚಿತ ಮಾಹಿತಿ’ ಎಂದು ಪೋಸ್ಟ್ ಮಾಡಿದ್ದರು.

ಪೋಸ್ಟ್‌ಗೂ ಮುಂಚೆ ಮಾರ್ಚ್ 11ರಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದಾಗ, ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ಮಂಡ್ಯದಲ್ಲಿ ಕೆಲ ರೈತರು ಪ್ರತಿಭಟನೆ ನಡೆಸಿದ್ದರು. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದ ಶಿವಕುಮಾರ್, ‘ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಆರೋಪ ನಿರಾಕರಿಸಿದ್ದರು.

ನೀರು ಬಿಟ್ಟಿದ್ದು ಬೆಂಗಳೂರಿಗೆ: ತಮಿಳುನಾಡಿಗೆ ನೀರು ಹರಿಸಲಾಗಿದೆ ಎಂಬ ಆರೋಪ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಜಯಂತ್, ‘ಬೆಂಗಳೂರಿಗೆ ಕುಡಿಯುವುದಕ್ಕಾಗಿ ಕೆಆರ್‌ಎಸ್‌ನಿಂದ ಎರಡು ದಿನ ನೀರು ಬಿಡುಗಡೆ ಮಾಡಿದ್ದೇವೆಯೇ ಹೊರತು, ತಮಿಳುನಾಡಿಗಲ್ಲ.‌ ಬೆಂಗಳೂರಿಗೆ ಪೂರೈಸುವ ಮಳವಳ್ಳಿ ತಾಲ್ಲೂಕಿನ ಶಿವಾ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ತೀರಾ ತಗ್ಗಿತ್ತು. ನೀರಿನ ಪ್ರಮಾಣ ಹೆಚ್ಚಿಸುವುದಕ್ಕಾಗಿ ನಿತ್ಯ ಹರಿಸುವ 1,000 ಕ್ಯುಸೆಕ್‌ಗಿಂತ ಹೆಚ್ಚು ಹರಿಸುವಂತೆ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಮನವಿ ಮಾಡಿದ್ದರು’ ಎಂದರು.

ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಶುಕ್ರವಾರ ಇದ್ದ ನೀರಿನ ಮಟ್ಟ

ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಶುಕ್ರವಾರ ಇದ್ದ ನೀರಿನ ಮಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT