ರಾಮನಗರ: ತಿಮ್ಮೇಗೌಡ ಅವರು 2000–2004ರ ಅವಧಿಯಲ್ಲಿ ಹಾಸನ ಜಿಲ್ಲೆಯ ದುದ್ದ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ ಮಹಿಳೆಯೊಬ್ಬರ ಜೊತೆ ಸಂಬಂಧ ಹೊಂದಿದ್ದರು. ಗರ್ಭಿಣಿಯಾಗಿದ್ದ ಆಕೆಯನ್ನು ಮದುವೆಯಾಗಲು ನಿರಾಕರಿಸಿದಾಗ ಮಹಿಳೆ 2004ರಲ್ಲಿ ಹಾಸನ ನಗರ ಪೊಲೀಸ್ ಠಾಣೆಗೆ ದೂರ ಕೊಟ್ಟಿದ್ದರು. ತಿಮ್ಮೇಗೌಡ ವಿರುದ್ಧ ನಂಬಿಸಿ ವಂಚನೆ ಹಾಗೂ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಕಡೆಗೆ ಡಿಎನ್‌ಎ ಪರೀಕ್ಷೆ ಕೂಡ ನಡೆದು ವರದಿ ತಿಮ್ಮೇಗೌಡರಿಗೆ ವ್ಯತಿರಿಕ್ತವಾಗಿ ಬಂದಿತ್ತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿ ಮತ್ತೆ ಕೆಳಹಂತದ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಾಗಿತ್ತು. ಇವರ ವಿರುದ್ಧ ಅತ್ಯಾಚಾರ ಆರೋಪವನ್ನು ಸೇರಿಸುವಂತೆ ಕೋರ್ಟ್ ಸೂಚಿಸಿತ್ತು. ಹಾಸನದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಜುಲೈನಲ್ಲಿ ನಡೆದಿದ್ದ ಪ್ರಕರಣದ ವಿಚಾರಣೆಗೆ ತಿಮ್ಮೇಗೌಡ ಹಾಜರಾಗಿದ್ದರು. ಆಗಸ್ಟ್ 31ಕ್ಕೆ ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. ಇದರಿಂದ ಕುಗ್ಗಿದ್ದ ತಿಮ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನಗಳಿವೆ ಎಂದು ಮೂಲಗಳು ತಿಳಿಸಿವೆ.
ಒತ್ತಡವಿತ್ತೇ?: ಸಿಸಿಬಿಯಲ್ಲಿದ್ದ ತಿಮ್ಮೇಗೌಡ ಇತ್ತೀಚೆಗೆ ಅತ್ಯಂತ ಮಹತ್ವದ ಪ್ರಕರಣವೊಂದರಲ್ಲಿ ವಕೀಲ ಸೇರಿದಂತೆ ಇಬ್ಬರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಅವರ ಮೇಲೆ ಪ್ರಭಾವಿಗಳಿಂದ ಏನಾದರೂ ಒತ್ತಡ ಇತ್ತೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.