ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಎರಡು ಕಡೆ ಅರ್ಧಕ್ಕೆ ಹಾರಾಡಿದ ರಾಷ್ಟ್ರಧ್ವಜ!

Last Updated 15 ಆಗಸ್ಟ್ 2021, 21:17 IST
ಅಕ್ಷರ ಗಾತ್ರ

ಚನ್ನಪಟ್ಟಣ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ನಡೆದ ಧ್ವಜಾರೋಹಣ ಸಂದರ್ಭದಲ್ಲಿ ಭಾನುವಾರ ಪಟ್ಟಣದ ಎರಡು ಕಡೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿದ ಪ್ರಸಂಗ ಜರುಗಿದೆ.

ಪಟ್ಟಣದ ತಾಲ್ಲೂಕು ಕಚೇರಿ ಕಟ್ಟಡ ಹಾಗೂ ತಾಲ್ಲೂಕು ಪಂಚಾಯಿತಿ ಕಟ್ಟಡಗಳ ಮೇಲೆ ಬೆಳಿಗ್ಗೆ ಹಾರಿಸಿದ ರಾಷ್ಟ್ರಧ್ವಜ ಸ್ವಲ್ಪ ಸಮಯದಲ್ಲೇ ಕಂಬದಿಂದ ಅರ್ಧಕ್ಕೆ ಜಾರಿದ್ದು, ಮಧ್ಯಾಹ್ನದವರೆಗೂ ಹಾಗೆಯೆ ಅರ್ಧದಲ್ಲೆ ಹಾರಾಡಿದೆ.

ಎರಡೂ ಸರ್ಕಾರಿ ಕಟ್ಟಡಗಳಲ್ಲಿ ಇಂದು ಬೆಳಿಗ್ಗೆ ರಾಷ್ಟ್ರ ಧ್ವಜಾರೋಹಣ ಮಾಡಿ ನಂತರ ಅಧಿಕಾರಿಗಳು ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 75ನೇ ಸ್ವಾತಂತ್ರೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಒಂದು ಗಂಟೆಗೂ ಹೆಚ್ಚು ಸಮಯ ಸರಿಯಾಗಿ ಹಾರಾಡಿದ ರಾಷ್ಟ್ರಧ್ವಜ ನಂತರ ಅರ್ಧಕ್ಕೆ ಜಾರಿದೆ. ಇದು ಯಾರ ಗಮನಕ್ಕೂ ಬಂದಿಲ್ಲ. ಭಾನುವಾರವಾದ ಕಾರಣ ರಜಾದಿನವಾದ್ದರಿಂದ ಇಲ್ಲಿ ಸಾರ್ವಜನಿಕರ ಓಡಾಟ ಕಡಿಮೆ ಇದ್ದ ಕಾರಣ ಈ ಪ್ರಮಾದ ಯಾರ ಅರಿವಿಗೂ ಬಂದಿಲ್ಲ.

ನಂತರ ಅಲ್ಲಿಗೆ ತೆರಳಿದ ಸಾರ್ವಜನಿಕರೊಬ್ಬರು ಇದನ್ನು ಗಮನಿಸಿ, ಇದು ಪ್ರಮಾದ ಎಂದು ಅರಿತು, ತಮಗೆ ಗೊತ್ತಿದ್ದ ತಾಲ್ಲೂಕು ಕಚೇರಿ ಸಿಬ್ಬಂದಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ಅವರ ಗಮನಕ್ಕೆ ತಂದಿದ್ದಾರೆ. ಆನಂತರ ಸ್ಥಳಕ್ಕೆ ಬಂದ ಕಚೇರಿ ಸಿಬ್ಬಂದಿಗಳು ಧ್ವಜವನ್ನು ಸರಿಯಾದ ಕ್ರಮದಲ್ಲಿ ಹಾರುವಂತೆ ಕಟ್ಟಿದ್ದಾರೆ.

‘75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇಂತಹ ಪ್ರಮಾದವೊಂದು ನಡೆದಿರುವುದು ರಾಷ್ಟ್ರಕ್ಕೆ ಮಾಡಿದ ಅಪಮಾನ. ಅಧಿಕಾರಿಗಳು ಧ್ವಜವನ್ನು ದಾರದಿಂದ ಬಿಗಿಯಾಗಿ ಕಟ್ಟದೆ ನಿರ್ಲಕ್ಷ್ಯ ತೋರಿದ್ದಾರೆ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಹಾಗೂ ಕಾರ್ಯದರ್ಶಿಯಾದ ತಾ.ಪಂ. ಇಒ ಅವರು ಕಚೇರಿಯಲ್ಲೆಯೆ ಇಂತಹ ಪ್ರಮಾದ ನಡೆದಿರುವುದು ಅವರ ನಿರ್ಲಕ್ಷ್ಯತನಕ್ಕೆ ಹಿಡಿದ ಕನ್ನಡಿ’ ಎಂದು ಸಾರ್ವಜನಿಕರು ದೂರಿದ್ದಾರೆ.

‘ಇಂದು ಗಾಳಿ ಬಿರುಸಿನಿಂದ ಬೀಸುತ್ತಿದ್ದ ಕಾರಣ ಎರಡೂ ಕಟ್ಟಡಗಳಲ್ಲಿಯೂ ಇಂತಹ ಒಂದು ಪ್ರಮಾದ ನಡೆದುಹೋಗಿದೆ. ಇದು ಆಕಸ್ಮಿಕವಾಗಿ ನಡೆದ ಘಟನೆ. ಇದರ ಹಿಂದೆ ಯಾವುದೇ ಉದ್ದೇಶ ಇಲ್ಲ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇವೆ’ ಎಂದು ತಹಶೀಲ್ದಾರ್ ನಾಗೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT