ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಾಲ ಕಾರ್ಮಿಕ ಪದ್ದತಿ ಅಮಾನವೀಯ’

ನ್ಯಾಯಾಧೀಶೆ ಅನಿತಾ ಅಭಿಪ್ರಾಯ; ಬಾಲ‌ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಜಾಥಾ
Published 14 ಜೂನ್ 2023, 13:15 IST
Last Updated 14 ಜೂನ್ 2023, 13:15 IST
ಅಕ್ಷರ ಗಾತ್ರ

ರಾಮನಗರ: ‘ಬಾಲ ಕಾರ್ಮಿಕ ಪದ್ಧತಿ ಅಮಾನವೀಯವಾಗಿದ್ದು, ಅದನ್ನು‌ ಹೋಗಲಾಡಿಸಲು ಜಾಗೃತಿ ಅಗತ್ಯ’ ಎಂದು ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅನಿತಾ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ಜಿ.ಪಂ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಬಾಲ‌ ಕಾರ್ಮಿಕ ಯೋಜನಾ ಸೊಸೈಟಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಬಾಲ‌ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂತರಾಷ್ಟ್ರೀಯ ಮಟ್ಟದಿಂದಿಡಿದು ರಾಜ್ಯ ಮಟ್ಟದವರೆಗೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಕಾನೂನು ಮತ್ತು ನಿಯಮಗಳಿದ್ದರೂ, ಈ‌ ಕಾಲದಲ್ಲೂ ಬಾಲ ಕಾರ್ಮಿಕ ವಿರೋಧಿ ದಿನವನ್ನು ನಾವು ಆಚರಿಸಬೇಕೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕಿದೆ’ ಎಂದರು.

‘ಕಾನೂನು ಅರಿವಿನ ಕೊರತೆ ಮತ್ತು ದುರಾಸೆಯಿಂದ ಮಕ್ಕಳನ್ನು ದುಡಿಸಿಕೊಳ್ಳುವುದು ಸರಿಯಲ್ಲ. ದೇಶದಲ್ಲಿ ಮಕ್ಕಳಿಗೆ ಉಚಿತವಾಗಿ ಕಡ್ಡಾಯ ಶಿಕ್ಷಣದ ಹಕ್ಕು ಇದ್ದರೂ, ಮಕ್ಕಳನ್ನು ಕೆಲಸಕ್ಕೆ ದೂಡುವುದು ಕಾನೂನಡಿ ಶಿಕ್ಷಾರ್ಹ ಅಪರಾಧವಾಗಿದೆ‌’ ಎಂದು ತಿಳಿಸಿದರು.‌

ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಚಿಕ್ಕ ಸುಬ್ಬಯ್ಯ, ಶಿಕ್ಷಣವೊಂದೇ ನಮ್ಮನ್ನು ಮುಂದಕ್ಕೆ ತರಲು ಇರುವ ಪ್ರಮುಖ ಅಸ್ತ್ರ. ಶಿಕ್ಷಣ ವಂಚಿತರು ಮಾತ್ರ ಬಾಲ‌ ಕಾರ್ಮಿಕ ಪದ್ದತಿಗೆ ಸಿಲುಕುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯ ಇರುಳಿಗ ಬುಡಕಟ್ಟು ಸಮುದಾಯ ಸೇರಿದಂತೆ ಅತ್ಯಂತ ಹಿಂದುಳಿದ ಸಮುದಾಯದಲ್ಲಿ ಮಕ್ಕಳ ದುಡಿಮೆ‌ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನಾನು ಶಾಲೆ ಬಿಡುವುದಿಲ್ಲ ಎಂದು ಶಪಥ ಮಾಡಬೇಕು. ನಾಗರಿಕರು ಸಹ ಈ ವಿಷಯದಲ್ಲಿ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದರು.

ಸನ್ಮಾನ: ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಅತಿ ಹೆಚ್ಚು ತಪಾಸಣೆ ನಡೆಸಿ, ಹೆಚ್ಚಿನ ಬಾಲಕರನ್ನು ರಕ್ಷಿಸಿದ ಚನ್ನಪಟ್ಟಣ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕ ಮುನಿಲಿಂಗೇಗೌಡ ಅವರನ್ನು ಸನ್ಮಾನಿಸಲಾಯಿತು.

ಮಕ್ಕಳ ಹಕ್ಕುಗಳ ಕುರಿತು ಆಯೋಜಿಸಿದ್ದ ಪ್ರಬಂಧ, ಆಶುಭಾಷಣ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಮೊದಲಎರಡು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.  ಸರ್ಕಲ್ ಇನ್ಸ್‌ಪೆಕ್ಟರ್ ನರಸಿಂಹಮೂರ್ತಿ ಅವರು, ಬಾಲ ಕಾರ್ಮಿಕ ಪದ್ದತಿ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು.

ವಾರ್ತಾ ಮತ್ತು ಪ್ರಚಾರ ಇಲಾಖೆಯ ಉಪ ನಿರ್ದೇಶಕ ರಮೇಶ್‌ ಬಾಬು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ದಿನೇಶ್, ಡಾನ್ ಬಾಸ್ಕೊ ಸಂಸ್ಥೆಯ ಪಾಧರ್ ಜಾರ್ಜ್ ಕಾರ್ಮಿಕ ನಿರೀಕ್ಷಕರು ಇದ್ದರು.

ಮಕ್ಕಳ ಕಾನೂನುಗಳ ಅರಿವಿನ ಕೊರತೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಕಾರ್ಮಿಕ ನಿರೀಕ್ಷಕ ಮುನಿಲಿಂಗೇಗೌಡಗೆ ಸನ್ಮಾನ

‘ಮುಖ್ಯವಾಹಿನಿಗೆ ತರಬೇಕು’

‘ಬಾಲ‌ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡು ಅವರನ್ನು ದೈಹಿಕ ಮತ್ತು ಮಾನಸಿಕವಾಗಿ ಶೋಷಣೆ ಮಾಡಲಾಗುತ್ತಿದೆ. ಈ ಅನಿಷ್ಟ ಪದ್ಧತಿಯಿಂದ‌ ಮಕ್ಕಳನ್ನು ಮುಕ್ತಗೊಳಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಆಲದಕಟ್ಟಿ ಹೇಳಿದರು. ‘ಬಾಲ‌ ಮತ್ತು ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಕಾರ್ಮಿಕ ಇಲಾಖೆ ಶಿಕ್ಷಣ ಪೊಲೀಸ್ ಮಹಿಳಾ ಮತ್ತು ಮಕ್ಕಳ ಇಲಾಖೆಯನ್ನು ಒಳಗೊಂಡ ತಂಡ ರಚಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಈ ತಂಡ ನಿರಂತರವಾಗಿ ತಪಾಸಣೆ ನಡೆಸಿ ಮಕ್ಕಳನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದೆ’ ಎಂದು ಹೇಳಿದರು. ‘ಕಳೆದ ಸಾಲಿನಲ್ಲಿ 13 ಕಡೆ ತಪಾಸಣೆ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಈ ಪದ್ದತಿ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. 1098 ಸಹಾಯವಾಣಿ ಸಹ ಆರಂಭಿಸಲಾಗಿದೆ. ಬಾಲ ಕಾರ್ಮಿಕರು ಕಂಡುಬಂದರೆ ಸಾರ್ವಜನಿಕರು ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT