ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಕಾಪಾಡಿ, ರೋಗ ತಡೆಗಟ್ಟಿ‘

ಗ್ರಾಮೀಣ ಕೂಟ ಸದಸ್ಯರಿಗೆ ನೀರು ಮತ್ತು ನೈರ್ಮಲ್ಯ ಜಾಗೃತಿ
Last Updated 14 ಜುಲೈ 2019, 13:43 IST
ಅಕ್ಷರ ಗಾತ್ರ

ಕೋಡಿಹಳ್ಳಿ (ಕನಕಪುರ): ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡಲು ಪ್ರತಿಯೊಂದು ಕುಟುಂಬಕ್ಕೂ ಕಡ್ಡಾಯವಾಗಿ ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದರೂ ಅವುಗಳನ್ನು ಬಳಸದೆ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದಾರೆ ಎಂದು ಕೋಡಿಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್‌.ಎಂ. ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಕೋಡಿಹಳ್ಳಿ ಎಂ.ಎಂ.ಎಸ್‌. ಕಲ್ಯಾಣ ಮಂಟಪದಲ್ಲಿ ನವ್ಯದಿಶ ಸಂಸ್ಥೆಯು ಗ್ರಾಮೀಣ ಕೂಟ ಸದಸ್ಯರಿಗೆ 'ಸಾಮಾಜಿಕ ಜೃಗೃತಿ ಅಭಿಯಾನ’ದಡಿ ಶನಿವಾರ ಏರ್ಪಡಿಸಿದ್ದ ನೀರು ಮತ್ತು ನೈರ್ಮಲ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರತಿ ಮನೆಯಲ್ಲಿ ಕಡ್ಡಾಯ ಶೌಚಾಲಯ ನಿರ್ಮಾಣ ಮಾಡಬೇಕೆಂದು ಸ್ವಚ್ಛ ಭಾರತ ಅಭಿಯಾನದಡಿ ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಾಣಕ್ಕೆ ಧನ ಸಹಾಯ ನೀಡಲಾಗುತ್ತಿದೆ.ಈಗಾಗಲೇ ಶೇಕಡ 99ರಷ್ಟು ಶೌಚಾಲಯ ನಿರ್ಮಾಣವಾಗಿವೆ. ಆದರೆ ನಮ್ಮ ಜನ ಶೌಚಾಲಯವನ್ನು ಕೋಳಿ ಸಾಕಾಣಿಕೆ ಮಾಡಲೋ ಅಥವಾ ಸೌದೆಯನ್ನು ಹಾಕಲು ಬಳಸುತ್ತಿದ್ದಾರೆ ಇದು ಸಲ್ಲದು’ ಎಂದರು.

ನವ್ಯ ದಿಶ ಸಂಸ್ಥೆಯ ಅಭಿವೃದ್ಧಿ ಅಧಿಕಾರಿಗಳಾದ ಕೆ.ರಾಜೇಶ್‌ ಮತ್ತು ಜಗದೀಶ್‌ ಮಾತನಾಡಿ, ‘ಶೌಚಾಲಯದ ಬಗ್ಗೆ ಮಾತನಾಡಲು ನಾವು ಹಿಂಜರಿಯುತ್ತೇವೆ. ಏನೋ ಒಂದು ರೀತಿಯ ಮುಜುಗರಕ್ಕೆ ಒಳಗಾಗುತ್ತೇವೆ. ಶೌಚ ನಮ್ಮ ಜೀವನ ಪ್ರಕ್ರಿಯೆಯಲ್ಲಿ ಅದು ಒಂದು ಮುಖ್ಯವಾದ ಘಟ್ಟ’ ಎಂದರು.

‘ಶೌಚಾಲಯ ಬಳಕೆಯಲ್ಲಿ ನಾವು ಸರಿಯಾದ ಕ್ರಮವನ್ನು ಅನುಸರಿಸದಿರುವುದು ಅಸ್ವಚ್ಛತೆಗೆ ಕಾರಣವಾಗಿದೆ. ಮಲ ಮೂತ್ರ ವಿಸರ್ಜನೆಯ ಮೊದಲು ಮತ್ತು ನಂತರದಲ್ಲಿ ಚೆನ್ನಾಗಿ ನೀರು ಹಾಕಬೇಕು. ಸೋಪಿನಿಂದ ಚೆನ್ನಾಗಿ ಕೈ ತೊಳೆದುಕೊಳ್ಳಬೇಕು’ ಎಂದು ತಿಳಿಸಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.

‘ಶೌಚಾಲಯಕ್ಕೆ ಎರಡು ಗುಂಡಿಗಳನ್ನು ಮಾಡಬೇಕು. ಒಂದು ಗುಂಡಿ ತುಂಬಿದ ಮೇಲೆ ಮತ್ತೊಂದು ಗುಂಡಿಗೆ ಮಲ ಮೂತ್ರ ಹೋಗುವಂತೆ ಮಾಡಬೇಕು, ಮೊದಲು ತುಂಬಿದ ಗುಂಡಿಯಲ್ಲಿ ಒಂದು ವರ್ಷದ ನಂತರ ತೆರೆದಾಗ ಅದರಲ್ಲಿ ನೀರು ಇಂಗಿ ಒಣಗಿದ ಮಲದ ತ್ಯಾಜ್ಯ ದೊರೆಯುತ್ತದೆ’ ಎಂದರು.

‘ಇದನ್ನು ಗೊಬ್ಬರವಾಗಿ ಬಳಸಬಹುದು. ಇದರಲ್ಲಿ ಯಾವುದೇ ರೋಗಾಣುಗಳಿರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಬೂದಿಯಿಂದ ಶೌಚಾಲಯವನ್ನು ಸ್ವಚ್ಛಗೊಳಿಸುವುದರಿಂದ ಗುಂಡಿಯಲ್ಲಿ ನೀರು ಬೇಗನೆ ಇಂಗುತ್ತದೆ ಮತ್ತು ಉಪಯುಕ್ತ ಗೊಬ್ಬರವಾಗುತ್ತದೆ’ ಎಂದು ಹೇಳಿದರು.

ಅರಣ್ಯ ಇಲಾಖೆಯ ನರಸಿಂಹ, ವೈದ್ಯಾಧಿಕಾರಿ ಡಾ.ಶರತ್‌, ಎಎಸ್‌ಐ ಗಣೇಶ್‌ ಮಾತನಾಡಿದರು.

ಕಾರ್ಯಕ್ರಮಕ್ಕೆ ಬಂದಿದ್ದ 350 ಮಹಿಳೆಯರಿಗೂ ಸಸಿ ವಿತರಿಸಿ ಅವುಗಳನ್ನು ಬೆಳಸುವಂತೆ ಮತ್ತು ಸ್ವಚ್ಛತೆ ಕಾಪಾಡುವಂತೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಗ್ರಾಮೀಣ ಕೂಟದ ವಿಭಾಗೀಯ ವ್ಯವಸ್ಥಾಪಕ ನಿಂಗೇಗೌಡ, ವಲಯ ವ್ಯವಸ್ಥಾಪಕ ಮಹದೇವ, ಶಾಖಾ ವ್ಯವಸ್ಥಾಪಕ ವಿಜಯಕುಮಾರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT