‘ಕೆರೆ ತುಂಬಿಸುವಲ್ಲಿ ರಾಜಕೀಯ ಮಾಡಿಲ್ಲ’

ಗುರುವಾರ , ಜೂಲೈ 18, 2019
22 °C
ಬೇವೂರು ಗ್ರಾಮದಲ್ಲಿ ಮುಖ್ಯಮಂತ್ರಿಗಳಿಂದ ಜನತಾ ದರ್ಶನ ಕಾರ್ಯಕ್ರಮ

‘ಕೆರೆ ತುಂಬಿಸುವಲ್ಲಿ ರಾಜಕೀಯ ಮಾಡಿಲ್ಲ’

Published:
Updated:
Prajavani

ಚನ್ನಪಟ್ಟಣ (ರಾಮನಗರ): ‘ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ವಿಚಾರದಲ್ಲಿ ನಾನು ಯಾವುದೇ ರಾಜಕೀಯ ಮಾಡಿಲ್ಲ. ಮಾಡುವುದೂ ಇಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಬೇವೂರು ಗ್ರಾಮದಲ್ಲಿ ಮಂಗಳವಾರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆಲವು ವರ್ಷ ತಾಲ್ಲೂಕಿನ 25 ಕೆರೆಗೆ ಮಾತ್ರ ನೀರು ತುಂಬಿಸಿದ್ದರೆ, ಮತ್ತೊಂದು ವರ್ಷ 80 ಕೆರೆ ತುಂಬಿಸಿದ್ದಾರೆ. ಈ ವರ್ಷ ಈಗಾಗಲೇ 120 ಕೆರೆಗೆ ನೀರು ಹರಿಸಲಾಗಿದೆ. ಇದು ನಿಮ್ಮ ಕಣ್ಣಿಗೆ ಕಾಣದೆ’ ಎಂದು ಅವರು ಜನರನ್ನು ಪ್ರಶ್ನಿಸಿದರು.

‘ಹಿಂದಿನವರು ಕೆರೆ ಕಾಮಗಾರಿ ಹೆಸರಿನಲ್ಲಿ ಕಳಪೆ ಗುಣಮಟ್ಟದ ಪೈಪ್‌ಲೈನ್‌ ಹಾಕಿ ಅವ್ಯವಹಾರ ನಡೆಸಿದ್ದಾರೆ. ಶಿಂಷಾ ನದಿ ಸೋರಿಕೆ ನೀರಿನಿಂದ ಹೆಚ್ಚಿನ ಪ್ರಯೋಜನ ಇಲ್ಲ. ಹೀಗಾಗಿ ಕಾವೇರಿ ನೀರು ತರಲು ₨540 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿದೆ’ ಎಂದರು.

‘ಹಿಂದಿನ ಶಾಸಕರು ಇಲ್ಲಿಗೆ ಕೆಲವು ಅಧಿಕಾರಿಗಳನ್ನು ಹಾಕಿಸಿಕೊಂಡಿದ್ದು, ಅವರನ್ನೇ ಮುಂದುವರಿಸಿದ್ದೇನೆ. ಅವರಿಗೆ ಒಂದು ವರ್ಷ ಕಾಲಾವಾಕಾಶ ನೀಡಿದ್ದೇನೆ. ಈಗಾಲಾದರೂ ಹುಡುಗಾಟಿಕೆ ಬಿಡಿ. ಜನರಿಗೆ ನೀರು, ವಿದ್ಯುತ್‌ ಕೊಡಿ’ ಎಂದು ತಾಕೀತು ಮಾಡಿದರು.

‘ಬೇವೂರು ಜಿ.ಪಂ, ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 1198 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳನ್ನು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಖುದ್ದು ಪರಿಶೀಲನೆ ಮಾಡಿ 15 ದಿನಗಳ ಒಳಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಸತತವಾಗಿ ವಿದ್ಯುತ್‌ ಪೂರೈಸಿದರೆ ಕೊಳವೆಬಾವಿಗಳ ನೀರು ಖಾಲಿಯಾಗಿ ಅಂತರ್ಜಲ ಬತ್ತುವ ಅಪಾಯವೂ ಇದೆ. ಈ ಸಂಬಂಧ ಬುಧವಾರ ಬೆಸ್ಕಾಂ ಅಧಿಕಾರಿಗಳ ಜೊತೆ ಸಭೆ ಕರೆದಿದ್ದೇನೆ’ ಎಂದರು.

‘ತಾಲ್ಲೂಕಿನಲ್ಲಿ ಸಾಕಷ್ಟು ಆಸ್‍ಪತ್ರೆಗಳ ಕಟ್ಟಡ ಸರಿಯಿಲ್ಲ. ಸಿಬ್ಬಂದಿ ಕೊರತೆ ಇದೆ. ಈ ಆಸ್ಪತ್ರೆಗಳನ್ನು ಹಂತಹಂತವಾಗಿ ಮೇಲ್ದರ್ಜೆಗೆ ಏರಿಸಲಾಗುವುದು’ ಎಂದರು.

ಕೃಷಿ ಪದ್ಧತಿ ಬದಲಾಗಲಿ: ‘ಸಾಲ ಮನ್ನಾ ಪ್ರಕ್ರಿಯೆಯು ಇನ್ನು 3–4 ತಿಂಗಳಲ್ಲಿ ಮುಗಿಯಲಿದೆ. ರೈತರು ಕೃಷಿ ಪದ್ಧತಿಯನ್ನು ಬದಲಿಸಿಕೊಳ್ಳಬೇಕು. ತೆಂಗು ಮೊದಲಾದ ಬೆಳೆಗಳಿಗೂ ಹನಿ ನೀರಾವರಿ ಅಳಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸಾಲಮನ್ನಾ ಋಣಪತ್ರ, ಭಾಗ್ಯಲಕ್ಷ್ಮಿ ಬಾಂಡ್ ಸೇರಿದಂತೆ ಸರ್ಕಾರದ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎನ್‌. ನಾಗರಾಜು, ಉಪಾಧ್ಯಕ್ಷೆ ಜಿ.ಡಿ. ವೀಣಾಕುಮಾರಿ, ಸದಸ್ಯೆ ಸುಗುಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅರೂರು ರಾಜಣ್ಣ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಜಿ.ಪಂ. ಸಿಇಒ ಮುಲ್ಲೈ ಮುಹಿಲನ್‌, ಜೆಡಿಎಸ್ ಮುಖಂಡ ಜಯಮುತ್ತು ಇದ್ದರು.

**
ಜನತಾ ದರ್ಶನಕ್ಕೆ ಜನಸಾಗರ
ಜನತಾ ದರ್ಶನದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಜನರು ಮುಗಿಬಿದ್ದರು. ನಾಗವಾರದಲ್ಲಿ ಶಾಲೆ, ಸಮುದಾಯ ಭವನ ಕಟ್ಟಡ, ಮೈಲನಾಯ್ಕನಹಳ್ಳಿಯಲ್ಲಿ ವಸತಿ ಶಾಲೆಗೆ ಗ್ರಾಮಸ್ಥರು ಮನವಿ ಮಾಡಿದರು. ಬೇವೂರನ್ನು ಹೋಬಳಿ ಕೇಂದ್ರವಾಗಿ ಘೋಷಿಸಬೇಕು. ಇಲ್ಲಿ ನಾಡಕಚೇರಿ ತೆರೆಯಬೇಕು ಎಂದು ಕೋರಿದರು.

ವಿದ್ಯುತ್‌ ಪೂರೈಕೆ ಬಗ್ಗೆ ಜನರು ಮುಖ್ಯಮಂತ್ರಿಗೆ ಬಹಿರಂಗವಾಗಿಯೇ ಕೂಗಿ ಹೇಳಿದರು. ಮತ್ತೆ ಕೆಲವರು ತಮ್ಮೂರಿನ ಅಧಿಕಾರಿಗಳ ವಿರುದ್ಧ ದೂರಿದರು. ಎಲ್ಲವನ್ನೂ ಸಮಾಧಾನದಿಂದ ಕೇಳಿಸಿಕೊಂಡ ಮುಖ್ಯಮಂತ್ರಿ ಸಂಬಂಧಿಸಿದವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನೂ ಮಾಡಿದರು.

ಜನತಾ ದರ್ಶನದ ಎರಡನೇ ದಿನವೂ ಹಳ್ಳಿಯುದ್ದಕ್ಕೂ ಜನರು ಸಾಲಾಗಿ ನಿಂತು ಮುಖ್ಯಮಂತ್ರಿಯನ್ನು ಸ್ವಾಗತಿಸಿದರು. ಕೆಲವರು ಆರತಿ ಬೆಳಗಿ, ಅಲ್ಲಿಯೇ ಅಹವಾಲು ಸಲ್ಲಿಸಿದರು. ಹೀಗಾಗಿ ಕಾರ್ಯಕ್ರಮಗಳು ನಿಗದಿತ ಅವಧಿಗಿಂತ ಮೂರ್ನಾಲ್ಕು ಗಂಟೆ ತಡವಾಗಿ ನಡೆದವು.ಚನ್ನಪಟ್ಟಣದಲ್ಲಿ ಕಡೆಯ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ರಾತ್ರಿ ಎಂಟರ ಮೇಲಾಗಿತ್ತು. ಮಹಿಳೆಯರು, ವೃದ್ಧರು ಹಾಗೂ ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿ ಜನತಾ ದರ್ಶನದಲ್ಲಿ ಪಾಲ್ಗೊಂಡರು.

**
ಮಾವು ಸಂಸ್ಕರಣಾ ಘಟಕಕ್ಕೆ ಕಣ್ವ ಬಳಿ 15 ಎಕರೆ ಜಾಗ ಗುರುತಿಸಲಾಗಿದೆ. ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !