ಮಂಗಳವಾರ, ಜನವರಿ 25, 2022
28 °C
ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳ l ರಾಜ್ಯ ಸರ್ಕಾರದ ತೀರ್ಮಾನಕ್ಕೆ ಜನರ ಸಹಕಾರ

ಚನ್ನಪಟ್ಟಣ | ವಾರಾಂತ್ಯ ಕರ್ಫ್ಯೂ: ಜನಜೀವನ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಸರ್ಕಾರ ವಿಧಿಸಿರುವ ವಾರಾಂತ್ಯದ ಕರ್ಫ್ಯೂವಿನ ಮೊದಲ ದಿನವಾದ ಶನಿವಾರ ನಗರವೂ ಸೇರಿದಂತೆ ತಾಲ್ಲೂಕಿನಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕರ್ಫ್ಯೂವಿನಿಂದಾಗಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶನಿವಾರ ವಾಹನ ಸಂಚಾರ ವಿರಳವಾಗಿತ್ತು. ಹೆದ್ದಾರಿ ಮತ್ತು ಪ್ರಮುಖ ರಸ್ತೆಗಳಲ್ಲಿ ಬೈಕ್, ಕಾರುಗಳನ್ನು ಹೊರತುಪಡಿಸಿದರೆ ಬಸ್, ಲಾರಿ ಸೇರಿದಂತೆ ಭಾರೀ ವಾಹನಗಳು ರಸ್ತೆಗೆ ಇಳಿಯಲಿಲ್ಲ. ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.

ಸರ್ಕಾರಿ ಬಸ್‌ನಿಲ್ದಾಣದಲ್ಲಿ ಒಂದೆರಡು ಬಸ್‌ಗಳು ನಿಂತಿದ್ದನ್ನು ಹೊರತುಪಡಿಸಿದರೆ ನಿಲ್ದಾಣ ಬಿಕೋ ಎನ್ನುತ್ತಿತ್ತು. ಕೆಲವು ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂದಿತು.

ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಪ್ರಮುಖ ವ್ಯಾಪಾರ ಸ್ಥಳಗಳಾದ ಎಂ.ಜಿ. ರಸ್ತೆ, ಪೇಟೆ ಬೀದಿ, ಬಿ.ಎಂ. ರಸ್ತೆ, ಜೆ.ಸಿ. ರಸ್ತೆ, ಅಂಚೆ ಕಚೇರಿ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಸಾತನೂರು ವೃತ್ತ, ಶೇರೂ ಹೋಟೆಲ್ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬಹುತೇಕ ಅಂಗಡಿಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. 

ಅಗತ್ಯ ವಸ್ತುಗಳಾದ ದಿನಸಿ ಹಾಗೂ ತರಕಾರಿ ಅಂಗಡಿಗಳು ತೆರೆದಿದ್ದವು. ಮೆಡಿಕಲ್ ಸ್ಟೋರ್, ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಹೋಟೆಲ್‌ಗಳು, ಪೆಟ್ರೋಲ್ ಬಂಕ್‌ಗಳು ತೆರೆದಿದ್ದರೂ ಗ್ರಾಹಕರಿಲ್ಲದೇ ಭಣಗುಡುತ್ತಿದ್ದವು.

ಚಲನಚಿತ್ರ ಮಂದಿರಗಳು, ಮದ್ಯದಂಗಡಿಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಸೇರಿದಂತೆ ಹಲವು ಅಂಗಡಿಗಳು ಮುಚ್ಚಿದ್ದವು. ಬಟ್ಟೆ, ಚಿನ್ನಾಭರಣ ಅಂಗಡಿ ಮಳಿಗೆಗಳು, ಎಟಿಎಂ ಸೇರಿದಂತೆ ಹಲವು ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರ ಮನೆಯಿಂದ ಹೊರಬಂದ ದೃಶ್ಯ ಕಾಣುತ್ತಿತ್ತು. ಯುವಕರು ಸಹ ಅನಗತ್ಯವಾಗಿ ಅಲ್ಲಲ್ಲಿ ಓಡಾಡದೇ ಮನೆ ಸೇರಿರುವುದು ಕಂಡು ಬಂದಿತು.

ಹಾಗೆಯೇ, ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಕೋಡಂಬಹಳ್ಳಿ, ಹೊಂಗನೂರು, ಅಕ್ಕೂರು, ಇಗ್ಗಲೂರು, ಬೇವೂರು, ನಾಗವಾರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೆಲವರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರೆ ಕೆಲವರು ಯಾವುದೇ ಭಯವಿಲ್ಲದೆ ಅಂಗಡಿಗಳನ್ನು ತೆರೆದು ಕಾರ್ಯ ನಿರ್ವಹಿಸಿದರು. ಆದರೆ, ಜನಸಂಚಾರ ಮಾತ್ರ ಎಂದಿನಂತೆ ಇರಲಿಲ್ಲ. ಪೊಲೀಸರು ಎಲ್ಲೆಡೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.