ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಪ್ರವಾಸೋದ್ಯಮ ಚಟುವಟಿಕೆಗೆ ಧಕ್ಕೆ; ಚೇತರಿಕೆ ಕಾಣದ ರೆಸಾರ್ಟ್‌ ಉದ್ಯಮ

ಕಾರ್ಮಿಕರ ಹೊಟ್ಟೆಗೂ ತಣ್ಣೀರು
Last Updated 23 ಸೆಪ್ಟೆಂಬರ್ 2020, 1:50 IST
ಅಕ್ಷರ ಗಾತ್ರ

ರಾಮನಗರ: ಕೋವಿಡ್‌ ವೈರಸ್ ಭೀತಿಯಿಂದಾಗಿ ಜಿಲ್ಲೆಯಲ್ಲಿನ ಪ್ರವಾಸೋದ್ಯಮ ಚಟುವಟಿಕೆಗಳು ನೆಲ ಕಚ್ಚಿವೆ. ಅದರಲ್ಲೂ ಪ್ರವಾಸಿಗರನ್ನೇ ನಂಬಿಕೊಂಡಿದ್ದ ರೆಸಾರ್ಟ್‌, ಹೋಮ್‌ ಸ್ಟೇ ಹಾಗೂ ಸಾಹಸ ಕ್ರೀಡೆಗಳ ಕ್ಯಾಂಪ್‌ಗಳಲ್ಲಿ ಗ್ರಾಹಕರ ಸಂಖ್ಯೆ ವಿರಳವಾಗಿದೆ.

ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿ ಇರುವ ರಾಮನಗರ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರೆಸಾರ್ಟ್‌ಗಳು ತಲೆ ಎತ್ತಿವೆ. ರಾಜಕೀಯದಿಂದ ಹಿಡಿದು ಕಾರ್ಪೊರೇಟ್‌ ಚಟುವಟಿಕೆ, ಸಾಂಸ್ಕೃತಿಕ-ಕ್ರೀಡೆ ಮತ್ತು ಮನೋರಂಜನಾ ಚಟುವಟಿಕೆಗಳಿಗೆ ಇವು ನೆಲೆ ಒದಗಿಸಿವೆ. ಕೋವಿಡ್‌ ಕಾಲದ ಆರಂಭಕ್ಕೂ ಮುನ್ನ ಉತ್ತಮ ಗಳಿಕೆ ಕಾಣುತ್ತಿದ್ದ ರೆಸಾರ್ಟ್‌ಗಳು ಲಾಕ್‌ಡೌನ್‌ ಸಂದರ್ಭ ಬಂದ್ ಆಗಿದ್ದು, ಇನ್ನೂ ಆ ಸಂಕಷ್ಟದಿಂದ ಹೊರಬರಲು ಆಗಿಲ್ಲ.

ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ರೆಸಾರ್ಟ್‌ ಹಾಗೂ ಹೋಮ್‌ ಸ್ಟೇಗಳಿವೆ. ಈಗಲ್‌ಟನ್‌, ವಂಡರ್‌ಲಾದಂತಹ ಐಷಾರಾಮಿ ರೆಸಾರ್ಟುಗಳ ಜೊತೆಗೆ ಮಧ್ಯಮ ವರ್ಗದ ಜನರ ಬಜೆಟ್‌ಗೂ ಹೊಂದಿಕೆಯಾಗುವ ಸಾಕಷ್ಟು ರೆಸಾರ್ಟ್‌ಗಳು ಇಲ್ಲಿವೆ. ಉತ್ತಮ ಗಳಿಕೆಯ ಕನಸು ಹೊತ್ತು ಬಂಡವಾಳ ಹೂಡಿಕೆ ಮಾಡಿದ್ದ ಮಾಲೀಕರು ಪ್ರವಾಸಿಗರ ಸುಳಿವೇ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಲಾಕ್‌ಡೌನ್‌ಗೆ ಮುನ್ನ ದಿನಗಳಿಗೆ ಹೋಲಿಸಿದರೆ ಶೇ 10-20ರಷ್ಟೂ ವ್ಯವಹಾರವೂ ನಡೆಯುತ್ತಿಲ್ಲ. ರೆಸಾರ್ಟ್ ಬಾಗಿಲು ತೆರೆದಿದೆಯಾದರೂ ಗ್ರಾಹಕರು ಬರುತ್ತಿಲ್ಲ. ಈ ಹಿಂದೆ ನಡೆಯುತ್ತಿದ್ದ ಕಾನ್ಫರೆನ್ಸ್‌, ಸಭೆ-ಸಮಾರಂಭಗಳು ಬಂದ್‌ ಆಗಿವೆ. ದಿನಕ್ಕೆ 20-30 ಮಂದಿ ಬಂದರೇ ಹೆಚ್ಚಾಗಿದೆ’ ಎನ್ನುತ್ತಾರೆ ಬಿಡದಿಯ ಈಗಲ್‌ಟನ್‌ ರೆಸಾರ್ಟಿನ ಪ್ರಧಾನ ವ್ಯವಸ್ಥಾಪಕ ಮ್ಯಾಥ್ಯು.

‘ನಮ್ಮಂಥ ರೆಸಾರ್ಟ್‌‌ಗಳಿಗೆ ಶೇ 80ರಷ್ಟು ವ್ಯವಹಾರ ಕಾರ್ಪೊರೇಟ್‌ ಸಭೆ-ಸಮಾರಂಭಗಳಿಂದಲೇ ಬರುತ್ತಿದೆ. ಆದರೆ, ಸದ್ಯ ಅಂತಹ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಬೆರಳೆಣಿಕೆಯಷ್ಟು ಶುಭ ಸಮಾರಂಭಗಳು ಮಾತ್ರ ನಡೆಯುತ್ತಿವೆ. ಈ ಎಲ್ಲದರಿಂದ ಬರುವ ಆದಾಯ ನಿರ್ವಹಣೆಗೆ ಸಾಕಾದರೆ ಹೆಚ್ಚು. ಜೊತೆಗೆ ನಿಯಮಿತ ತೆರಿಗೆಗಳ ಭಾರವೂ ಇದೆ’ ಎನ್ನುತ್ತಾರೆ ಅವರು.

ವರ್ಕ್‌ ಫ್ರಮ್‌ ಹೋಮ್ ಪರಿಣಾಮ: ‘ಶೇ 75-80ರಷ್ಟು ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳು ಕೋವಿಡ್‌ ಕಾರಣಕ್ಕೆ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಯಾವುದೇ ಕಾರ್ಪೋರೇಟ್‌ ಮಂದಿ ರೆಸಾರ್ಟುಗಳತ್ತ ಬರುತ್ತಿಲ್ಲ. ಟೀಮ್‌ ಔಟಿಂಗ್‌ ಚಟುವಟಿಕೆಗಳು ಇಲ್ಲವಾಗಿವೆ. ವಾರಾಂತ್ಯಗಳಲ್ಲಿ ಮನೋರಂಜನೆಗೆ ಬರುವವರ ಸಂಖ್ಯೆಯೂ ತೀರ ವಿರಳವಾಗಿದೆ. ಪರಿಣಾಮವಾಗಿ ಶೇ 90ರಷ್ಟು ವ್ಯವಹಾರ ಕುಸಿದಿದೆ’ ಎನ್ನುತ್ತಾರೆ ಕನಕಪುರದಲ್ಲಿ ರೆಸಾರ್ಟ್‌ ನಡೆಸುತ್ತಿರುವ ಜಿಲ್ಲಾ ಪ್ರವಾಸೋದ್ಯಮ ಸಂಘದ ಪ್ರಧಾನ ಕಾರ್ಯದರ್ಶಿ ಅರುಣೇಶ್‌.

‘ಜನಸಾಮಾನ್ಯರೂ ಕೋವಿಡ್ ಕಾರಣಕ್ಕೆ ರೆಸಾರ್ಟುಗಳತ್ತ ಮುಖ ಮಾಡುತ್ತಿಲ್ಲ. ಬಂದವರೂ ಚೌಕಾಸಿ ವ್ಯವಹಾರ ನಡೆಸುತ್ತಾರೆ. ಬರುವ ಗಳಿಕೆ ನಿರ್ವಹಣೆಗೆ ಸಾಲದು. ಅದರಲ್ಲೂ ಸಾಲ ಮಾಡಿ ಹೂಡಿಕೆ ಮಾಡಿರುವವರು ಕಂತು ಕಟ್ಟಲು ಹೆಣಗುವಂತೆ ಆಗಿದೆ’ ಎನ್ನುತ್ತಾರೆ ಅವರು.

ಕಾರ್ಮಿಕರಿಗೆ ಸಂಕಷ್ಟ:ನಷ್ಟದ ಕಾರಣಕ್ಕೆ ಬಹುತೇಕ ರೆಸಾರ್ಟ್‌ ಹಾಗೂ ಹೋಮ್‌ ಸ್ಟೇಗಳು ತಮ್ಮಲ್ಲಿನ ಕಾರ್ಮಿಕರ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಿವೆ. ಪರಿಣಾಮವಾಗಿ ಹಲವು ಮಂದಿ ಉದ್ಯೋಗ ಕಳೆದುಕೊಂಡಿದ್ದು, ತಮ್ಮೂರುಗಳಿಗೆ ಮರಳಿದ್ದಾರೆ. ರೆಸಾರ್ಟ್‌ ನಿರ್ವಹಣೆ ಮಾಡುವವರು, ಬಾಣಸಿಗರು, ಸಪ್ಲೈಯರ್‌ಗಳು, ಸಾಹಸ ಮತ್ತು ಮನೋರಂಜನಾ ಕ್ರೀಡೆಗಳ ತರಬೇತುದಾರರಿಗೆ ಉದ್ಯೋಗ ಇಲ್ಲದಂತೆ ಆಗಿದೆ. ಪೂರ್ಣ ಪ್ರಮಾಣದಲ್ಲಿ ಚಟುವಟಿಕೆಗಳು ನಡೆದರಷ್ಟೇ ಇವರಿಗೆ ಮತ್ತೆ ಉದ್ಯೋಗ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT