ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: 'ಸೈನಿಕ'ನ ಕುಟುಂಬದಲ್ಲಿ ಉತ್ತರಾಧಿಕಾರ ಸಂಘರ್ಷ

Published 27 ಮೇ 2024, 5:19 IST
Last Updated 27 ಮೇ 2024, 5:19 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ವರ್ಣರಂಜಿತ ರಾಜಕಾರಣಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ಕುಟುಂಬದಲ್ಲಿ ರಾಜಕೀಯ ಉತ್ತರಾಧಿಕಾರದ ಬಿರುಗಾಳಿ ಬೀಸಿದೆಯೇ? ‘ಸೈನಿಕ’ನ ಮೊದಲ ಪತ್ನಿಯ ಪುತ್ರಿ ನಿಶಾ, ತಂದೆಯ ವಿರುದ್ಧ ಬಹಿರಂಗವಾಗಿ ತೋಡಿಕೊಂಡಿರುವ ಅಸಮಾಧಾನ ಇಂತಹದ್ದೊಂದು ಚರ್ಚೆಗೆ ಗ್ರಾಸವಾಗಿದೆ.

ಚನ್ನಪಟ್ಟಣದ ಚಕ್ಕರೆಯ ಯೋಗೇಶ್ವರ್ ಸಿನಿಮಾ ನಟ, ನಿರ್ಮಾಪಕ, ಸಮಾಜ ಸೇವಕ, ಉದ್ಯಮಿ, ರಾಜಕಾರಣಿಯಾಗಿ ಛಾಪು ಮೂಡಿಸಿದವರು. 1999ರಲ್ಲಿ ಪಕ್ಷೇತರರಾಗಿ ಗೆದ್ದ ಅವರು ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಜೆಪಿಯಿಂದ ಐದು ಸಲ ಶಾಸಕರಾಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದರು.

ಯೋಗೇಶ್ವರ್ ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಮಂಜುಳಾ ಮತ್ತು ಎರಡನೇಯವರು ಶೀಲಾ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ಆದರೂ, ಮೊದಲ ಪತ್ನಿಯ ಪುತ್ರಿ ನಿಶಾಗೆ ತಂದೆ ಜೊತೆ ಉತ್ತಮ ಬಾಂಧವ್ಯವಿತ್ತು. ಇದೇ ಕಾರಣಕ್ಕೆ ತಂದೆಯ ಚುಣಾವಣೆಗಳಲ್ಲಿ ತಾರಾ ಪ್ರಚಾರಕರಂತೆ ಚನ್ನಪಟ್ಟಣದಲ್ಲಿ ಪ್ರಚಾರ ಮಾಡುತ್ತಿದ್ದರು. ತಂದೆಯ ರಾಜಕಾರಣದ ನೆರಳಲ್ಲಿ ತಾವು ರಾಜಕೀಯ ನೆಲೆ ಕಂಡುಕೊಳ್ಳಲು ಯತ್ನಿಸಿದ್ದರು.

ವಿಧಾನಸಭಾ ಚುನಾವಣೆಯಿಂದ ಶುರು: ‘2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯೋಗೇಶ್ವರ್ ಎರಡನೇ ಪತ್ನಿ ಶೀಲಾ ತಮ್ಮ  ಪುತ್ರನೊಂದಿಗೆ ‍ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆಗ, ಮೊದಲ ಸಲ ಪುತ್ರಿ ನಿಶಾ ಜತೆ ಅವರ ತಾಯಿ ಮಂಜುಳಾ ಸಹ ಪ್ರಚಾರಕ್ಕೆ ಧುಮುಕಿದ್ದರು. ಇಲ್ಲಿಂದ ಉತ್ತರಾಧಿಕಾರದ ಕಿಡಿ ಹೊತ್ತಿಕೊಂಡಿತು’ ಎನ್ನುತ್ತಾರೆ ಸ್ಥಳೀಯ ರಾಜಕಾರಣಿಯೊಬ್ಬರು.

‘ನಿಶಾ ಚನ್ನಪಟ್ಟಣದಲ್ಲಿ ಮನೆ ಮಾತಾಗಿದ್ದಾರೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಹರಿದಾಡಿತ್ತು. ಜನಪ್ರಿಯತೆ ಬೆನ್ನಲ್ಲೇ ಅವರ ಬೆಳವಣಿಗೆ ಕುರಿತು ಕುಟುಂಬದೊಳಗೆ ವಿರೋಧವೂ ಶುರುವಾಯಿತು. ವಿಧಾನಸಭಾ ಚುನಾವಣೆಯಲ್ಲಿ ಅದು ಕಟ್ಟಯೊಡೆಯಿತು. ತಂದೆ ಮತ್ತು ಮಲತಾಯಿ ವಿರುದ್ಧದ ಅಸಮಾಧಾನ ನಿಶಾ ಅವರನ್ನು ಭಿನ್ನ ಹಾದಿ ಹಿಡಿಯುವಂತೆ ಮಾಡಿತು’ ಎಂದರು.

ಕಾಂಗ್ರೆಸ್‌ನತ್ತ ನಿಶಾ ಚಿತ್ತ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಿಶಾ, ಕಾಂಗ್ರೆಸ್‌ ನಾಯಕರೊಂದಿಗೆ ಕಾಣಿಸಿಕೊಂಡರು. ಒಂದು ಹಂತದಲ್ಲಿ ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಸುದ್ದಿ ಸಂಚಲನ ಮೂಡಿಸಿತ್ತು. ಸಂಸದ ಡಿ.ಕೆ. ಸುರೇಶ್ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಹ ಭೇಟಿ ಮಾಡಿದ್ದರು. ಇದು ಸಿ.ಪಿ. ಯೋಗೇಶ್ವರ್‌ ರಾಜಕೀಯ ತಂತ್ರಗಾರಿಕೆ ಎಂದು ಸ್ಥಳೀಯ ರಾಜಕೀಯ ವಲಯಗಳಲ್ಲಿ ವಿಶ್ಲೇಷಣೆಗೂ ನಾಂದಿ ಹಾಡಿತು.

ಆದರೆ, ಹೊರಗಡೆ ತೋರಿದಂತೆ ಇದು ಯೋಗೇಶ್ವರ್‌ ರಾಜಕೀಯ ತಂತ್ರಗಾರಿಕೆ ಆಗಿರಲಿಲ್ಲ. ಕುಟುಂಬದೊಳಗಿನ ಅಸಮಾಧಾನ, ಉತ್ತರಾಧಿಕಾರದ ಸಂಘರ್ಷವಾಗಿತ್ತು. ಈ ಬೆಳವಣಿಗೆ ಯೋಗೇಶ್ವರ್ ಅವರಿಗೆ ನುಂಗಲಾರದ ತುತ್ತಾಯಿತು. ಅಲ್ಲದೇ ತಂದೆ–ಮಗಳ ಸಂಘರ್ಷ ತಾರಕಕ್ಕೇರುವಂತೆ ಮಾಡಿತು.

ನಿಶಾ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ತಂದೆ ಮತ್ತು ಮಲತಾಯಿ ವಿರುದ್ಧದ ಆರೋಪಗಳ ವಿಡಿಯೊ ಕುರಿತು ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದಾಗ ಚನ್ನಪಟ್ಟಣ ರಾಜಕೀಯ ಕುರಿತು ಮಾತನಾಡಿದ ಯೋಗೇಶ್ವರ್, ನಿಶಾ ಹೆಸರು ಪ್ರಸ್ತಾಪಿಸುತ್ತಲೇ ಏನನ್ನೂ ಪ್ರತಿಕ್ರಿಯಿಸದೆ ಸಿಟ್ಟಾಗಿ ಕರೆ ಸ್ಥಗಿತಗೊಳಿಸಿದರು.

ನನ್ನ ಬೆಳವಣಿಗೆಗೆ ತಂದೆಯೇ ಅಡ್ಡಗಾಲು: ನಿಶಾ

‘ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚನ್ನಪಟ್ಟಣಕ್ಕೆ ತಂದೆ ಪರ ಮೊದಲ ಸಲ ಪ್ರಚಾರಕ್ಕೆ ಬಂದಿದ್ದ ನನ್ನ ತಾಯಿಯನ್ನು ಅವರು ಸರಿಯಾಗಿ ನಡೆಸಿಕೊಳ್ಳಲಿಲ್ಲ. ನನ್ನನ್ನು ಎಲ್ಲಿಯೂ ಬೆಳೆಯದಂತೆ ವ್ಯವಸ್ಥಿತವಾಗಿ ತಡೆಯುತ್ತಾ ಬಂದಿರುವುದು ಅರಿವಿಗೆ ಬಂತು. ಸಿನಿಮಾ ಸೇರಿದಂತೆ ಬೇರೆ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಳ್ಳಲು ನನ್ನನ್ನು ಬಿಡಲಿಲ್ಲ. ತಂದೆ ಪರ ಪ್ರಚಾರದಲ್ಲಿ ನಾನು ಕಾಣಿಸಿಕೊಳ್ಳಲು ತೊಡಗಿದಾಗಿನಿಂದ ರಾಜಕೀಯದಲ್ಲಿ ನಿನಗೆ ಭವಿಷ್ಯವಿದೆ ಎಂದು ತಂದೆ ಹೇಳುತ್ತಿದ್ದರು. ಇದರಿಂದ ನನ್ನೊಳಗೂ ಎಲ್ಲೋ ಒಂದು ಕಡೆ ರಾಜಕೀಯ ಆಕಾಂಕ್ಷೆ ಬಲಗೊಳ್ಳಲು ಕಾರಣವಾಯಿತು. ಕಡೆಗೆ ರಾಜಕೀಯ ಹಾದಿಗೂ ಅಡ್ಡಗಾಲು ಹಾಕಿ ಒಂಟಿಯಾಗಿಸುವ ಪ್ರಯತ್ನ ದೊಡ್ಡಮಟ್ಟದಲ್ಲಿ ನಡೆಯಿತು‘ ಎಂದು ನಿಶಾ ಅಳಲು ತೋಡಿಕೊಂಡರು.

’ಸ್ಥಳೀಯರೊಂದಿಗಿನ ನನ್ನ ಸಂಪರ್ಕ ಕಡಿತಗೊಳಿಸಿ ನನ್ನನ್ನು ದೂರ ಮಾಡಿದರು. ಕಡೆಗೆ ನನ್ನ ಹೆಸರಿನ ಮುಂದೆ ತಮ್ಮ (ಯೋಗೇಶ್ವರ್‌) ಹೆಸರು ಬಳಸಬಾರದೆಂಬ ಮಟ್ಟಕ್ಕೆ ಅದು ಬಂದು ನಿಂತಿದೆ. ರಾಜಕೀಯವಾಗಿ ನಾನು ಅವರ ಉತ್ತರಾಧಿಕಾರಿ ಎಂದು ಎಲ್ಲೂ ಹೇಳಿಕೊಂಡಿಲ್ಲ. ಆದರೆ ಜನರಲ್ಲಿ ಅಂತಹದ್ದೊಂದು ಭಾವನೆ ಇತ್ತಷ್ಟೇ. ಸದ್ಯ ನನಗೆ ಎಲ್ಲಾ ಬಾಗಿಲು ಮುಚ್ಚಿದ್ದು ಬೇರೆ ದಾರಿ ಕಾಣುತ್ತಿಲ್ಲ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.  ನಿಶಾ ಕಾಂಗ್ರೆಸ್ ಸೇರಲಿದ್ದಾರೆಂಬ ಸುದ್ದಿ ಬೆನ್ನಲ್ಲೇ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದ ಶಿವಕುಮಾರ್ ‘ತಂದೆ–ಮಗಳನ್ನು ದೂರ ಮಾಡಿದ ಅಪಕೀರ್ತಿ ನನಗೆ ಬೇಡ ಎಂದು ಸುಮ್ಮನಿದ್ದೇನೆ’ ಎನ್ನುವ ಮೂಲಕ ಅವರ ಸೇರ್ಪಡೆಗೆ ನಯವಾಗಿಯೇ ಬ್ರೇಕ್ ಹಾಕಿದ್ದರು. ಇದೀಗ ನಿಶಾ ಅವರಿಗೆ ತಂದೆ ಹಾಗೂ ಅವರು ಪ್ರತಿನಿಧಿಸುವ ಬಿಜೆಪಿಯ ಬಾಗಿಲು ಮುಚ್ಚಿದಂತಾಗಿದೆ. ಮತ್ತೊಂದೆಡೆ ಕಾಂಗ್ರೆಸ್‌ ಸೇರ್ಪಡೆಯ ಕನಸೂ ಕಮರಿದೆ.

ಪ್ರೇಮದ ಕತೆ ಆಧರಿಸಿ ಸಿನಿಮಾ ಸಿನಿಮಾದಲ್ಲಿ ನಟನೆ ಶುರುವಾಗುವುದಕ್ಕೆ ಮುಂಚೆ ಯೋಗೇಶ್ವರ್ 1987ರ ಆಸುಪಾಸಿನಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ರಾಜಸ್ಥಾನ ಮೂಲದ ಮಂಜುಳಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ನಿಶಾ ಮತ್ತು ಶ್ರವಣ್ ಎಂಬ ಮಕ್ಕಳಿದ್ದಾರೆ. 2001ರಲ್ಲಿ ತೆರೆ ಕಂಡಿದ್ದ ಯೋಗೇಶ್ವರ್ ನಟನೆಯ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕು’ ಸಿನಿಮಾ ಸ್ವತಃ ಅವರ ಪ್ರೇಮದ ಎಳೆಯನ್ನು ಆಧರಿಸಿದ ಸಿನಿಮಾ. ಇದಾದ ಕೆಲ ವರ್ಷಗಳ ಬಳಿಕ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಇಬ್ಬರು ಪ್ರತ್ಯೇಕವಾಗಿದ್ದರು. 

ನಂತರ ಶೀಲಾ ಅವರನ್ನು ಯೋಗೇಶ್ವರ್ ಮದುವೆಯಾಗಿದ್ದು ಅವರಿಗೆ ಧ್ಯಾನ್ ಎಂಬ ಪುತ್ರನಿದ್ದಾನೆ. ಎರಡೂ ಕುಟಂಬಗಳೂ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ನೆಲೆಸಿವೆ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. ವಿಧಾನಸಭಾ ಚುನಾವಣೆಯಲ್ಲಿ ಮೊದಲ ಮತ್ತು ಎರಡನೇ ಪತ್ನಿಯರ ಜೊತೆಗೆ ಅವರ ಮಕ್ಕಳು ಸಹ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರು. ಅವರಲ್ಲಿ ಯೋಗೇಶ್ವರ್ ಉತ್ತರಾಧಿಕಾರಿ ಯಾರಾಗಬೇಕೆಂಬ ಸಂಘರ್ಷವೇ ಪುತ್ರಿ ನಿಶಾ ಅವರು ತಂದೆ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಲು ಕಾರಣವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT