ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಕಾಂಗ್ರೆಸ್‌ನಲ್ಲಿ ದಲಿತರ ಅಸಮಾಧಾನ ಸ್ಫೋಟ

ಸ್ಥಾನಮಾನ ಹಂಚಿಕೆಯಲ್ಲಿ ಪರಿಶಿಷ್ಟರ ಕಡೆಗಣನೆ: ಶಾಸಕ–ಸಂಸದರ ವಿರುದ್ಧ ಆಕ್ರೋಶ
Published 22 ಮಾರ್ಚ್ 2024, 4:49 IST
Last Updated 22 ಮಾರ್ಚ್ 2024, 4:49 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಪ್ರಾಧಿಕಾರಗಳ ಅಧ್ಯಕ್ಷರ ನೇಮಕದಲ್ಲಿ ಕೇವಲ ಒಂದು ಸಮುದಾಯಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ ಎಂಬ ಕಾಂಗ್ರೆಸ್‌ನೊಳಗಿನ ಅಸಮಾಧಾನ ಸ್ಫೋಟಗೊಂಡಿದೆ. ಪರಿಶಿಷ್ಟ ಸಮುದಾಯದ ಕಾಂಗ್ರೆಸ್ ಮುಖಂಡರು ಬುಧವಾರ ರಾತ್ರಿ ಸಭೆ ನಡೆಸಿ, ತಾರತಮ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಶಾಸಕರಾದ ಎಚ್‌.ಎ. ಇಕ್ಬಾಲ್ ಹುಸೇನ್ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಸಭೆಯಲ್ಲಿ ಮುಖಂಡರು ಮಾತನಾಡಿರುವ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ.

‘ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಬೆನ್ನೆಲುಬು. ಈ ವರ್ಗಗಳು ಹಿಂದಿನಿಂದಲೂ ಕಾಂಗ್ರೆಸ್‌ಗೆ ಜೊತೆ ಗಟ್ಟಿಯಾಗಿ ನಿಂತಿದೆ. ರಾಮನಗರದಲ್ಲಿ ಚರಿತ್ರೆ ಸೃಷ್ಟಿಸಿದ ಅಲ್ಪಸಂಖ್ಯಾತ ಸಮುದಾಯದ ಎಚ್‌.ಎ. ಇಕ್ಬಾಲ್ ಹುಸೇನ್ ಅವರ ಗೆಲುವಿಗೆ ಈ ಸಮುದಾಯಗಳ ಕೊಡುಗೆ ದೊಡ್ಡದು. ಆದರೆ, ಸ್ಥಾನಮಾನ ಹಾಗೂ ಅಧಿಕಾರ ಹಂಚಿಕೆ ಮಾಡುವಾಗ ನಮ್ಮನ್ನು ಕಡೆಗಣಿಸಲಾಗಿದೆ’ ಎಂದು ಪಕ್ಷದ ಮುಖಂಡರೊಬ್ಬರು ದೂರಿದರು.

‘ಸಾಮಾಜಿಕ ನ್ಯಾಯದ ಕುರಿತು ಭಾಷಣ ಮಾಡುವ ನಾಯಕರು, ಜಿಲ್ಲೆಯಲ್ಲಿ ಇದುವರೆಗೆ ಪರಿಶಿಷ್ಟ ಸಮುದಾಯದವರ ಕುಂದುಕೊರತೆಯನ್ನು ಆಲಿಸಿಲ್ಲ. ಶಾಸಕರು ಗೆದ್ದು 11 ತಿಂಗಳಾಗುತ್ತಾ ಬಂದರೂ ಸಮುದಾಯದವರ ಜೊತೆ ಸೌಜನ್ಯಕ್ಕಾದರೂ ಒಂದು ಸಭೆ ಮಾಡಿಲ್ಲ. ಚುನಾವಣೆಗೂ ಮುಂಚೆ ಯಾರು ತಮ್ಮನ್ನು ಬೈಯ್ದುಕೊಂಡು ತಿರುಗುತ್ತಿದ್ದರೋ, ಅಂತಹವರನ್ನೇ ಇಂದು ಜೊತೆಗಿಟ್ಟುಕೊಂಡು ಓಡಾಡುತ್ತಿದ್ದಾರೆ’ ಎಂದರು.

‘ಮೂರು ಸಲ ಸಂಸದರಾದರೂ ಡಿ.ಕೆ. ಸುರೇಶ್ ಅವರು ಪರಿಶಿಷ್ಟರ ಕಷ್ಟ–ಸುಖ ಆಲಿಸಿಲ್ಲ. ಚುನಾವಣೆ ಬಂದಾಗ ದಲಿತರಿಗೆ ಹಣ ಬಿಸಾಕಿದರೆ ಕೆಲಸ ಮಾಡುತ್ತಾರೆ ಎಂಬ ಗುಲಾಮಿ ಮನಸ್ಥಿತಿಯಿಂದ ನಮ್ಮನ್ನು ನೋಡುತ್ತಾರೆ. ಪ್ರತಿ ಚುನಾವಣೆಯಲ್ಲೂ ಇವರ ಪರ ಕೆಲ ಮಾಡಿ ಗೆಲ್ಲಿಸಿದ್ದೇವೆ. ಆದರೆ, ಸೌಜನ್ಯಕ್ಕಾದರೂ ಪರಿಶಿಷ್ಟರಿಗೆ ಒಂದು ಸ್ಥಾನಮಾನ ಕೊಡಬೇಕಲ್ಲವೇ’ ಎಂದು ಮತ್ತೊಬ್ಬ ಮುಖಂಡ ಪ್ರಶ್ನಿಸಿದರು.

‘ಪಕ್ಷದಲ್ಲಿರುವ ದಲಿತ ಮುಖಂಡರನ್ನು ಕಡೆಗಣಿಸಲಾಗಿದೆ. ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸುವುದಿಲ್ಲ. ಶಾಸಕರು, ಸಂಸದರ ಕಾರ್ಯಕ್ರಮಗಳು ಸೇರಿದಂತೆ ಚುನಾವಣಾ ಪ್ರಚಾರ ಸಭೆ ಕುರಿತು ಮಾಹಿತಿ ನೀಡುವುದಿಲ್ಲ. ವೇದಿಕೆಗೆ ಕರೆಯುವುದಿಲ್ಲ. ಪರಿಶಿಷ್ಟ ಸಮುದಾಯಗಳನ್ನು ಕಡೆಗಣಿಸುತ್ತಿರುವ ಕುರಿತು ಜಿಲ್ಲಾ ಅಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ತೋಡಿಕೊಂಡರು.

‘ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ ನಾವು ಸಾಮಾಜಿಕ ನ್ಯಾಯ ನಿರೀಕ್ಷಿಸಬಹುದು. ಅದೇ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಕೇಳಲು ಸಾಧ್ಯವೇ? ತಮ್ಮನ್ನು ಅಧಿಕಾರಕ್ಕೆ ತಂದು ಕೂರಿಸಿದ ಸಮುದಾಯಗಳನ್ನು ಕಡೆಗಣಿಸಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇದಕ್ಕೆ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕು ಎಂದು ಒಕ್ಕೊರಲಿನಿಂದ ತೀರ್ಮಾನಿಸಿದ್ದೇವೆ’ ಎಂದು ತಿಳಿಸಿದರು.

ಶಿವಕುಮಾರಸ್ವಾಮಿ ಅಧ್ಯಕ್ಷ ದಲಿತ ಸಂಘಟನೆಗಳ ಒಕ್ಕೂಟ
ಶಿವಕುಮಾರಸ್ವಾಮಿ ಅಧ್ಯಕ್ಷ ದಲಿತ ಸಂಘಟನೆಗಳ ಒಕ್ಕೂಟ

ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನಾಯಕರು ಅಧಿಕಾರ ಮತ್ತು ಸ್ಥಾನಮಾನದ ವಿಷಯದಲ್ಲಿ ದಲಿತರನ್ನು ಕಡೆಗಣಿಸಿರುವುದನ್ನು ಸಹಿಸಲು ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ತಕ್ಕ ಪಾಠ ಕಲಿಸಲಾಗುವುದು

– ಶಿವಶಂಕರ್ ಕಾಂಗ್ರೆಸ್ ಮುಖಂಡ

ಜಿಲ್ಲೆಯ 4 ಕ್ಷೇತ್ರಗಳ 3 ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಪರಿಶಿಷ್ಟರ ಕೊಡುಗೆ ದೊಡ್ಡದಿದೆ. ಆದರೆ ಪ್ರಾಧಿಕಾರ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕದಲ್ಲಿ ಸಮುದಾಯವನ್ನು ಕಡೆಗಣಿಸಿದ್ದಾರೆ

– ಶಿವಕುಮಾರ ಸ್ವಾಮಿ ಅಧ್ಯಕ್ಷ ದಲಿತ ಸಂಘಟನೆಗಳ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT