ಮಂಗಳವಾರ, ಫೆಬ್ರವರಿ 25, 2020
19 °C

ದಲಿತರ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಘಟನೆ ಸಂಬಂಧಿಸಿ ಶಾಸಕ ಸಾ.ರಾ.ಮಹೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಪ್ರತಿಭಟನೆ ನಡೆಯಿತು.

ಇಲ್ಲಿನ ಐಜೂರು ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಸಾ.ರಾ.ಮಹೇಶ್ ವಿರುದ್ಧ ದಿಕ್ಕಾರ ಕೂಗಿ, ಹೆದ್ದಾರಿ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ದಲಿತರ ಕಾಲೊನಿಗೆ ನುಗ್ಗಿ ಶಾಸಕ ಸಾ.ರಾ.ಮಹೇಶ್ ಅವರ ಸಹೋದರ ಮತ್ತು ಸಹಚರರ ಗುಂಪು ದಲಿತರ ಮೇಲೆ ಗೂಂಡಾಗಿರಿ, ದುರ್ವರ್ತನೆ, ದಬ್ಬಾಳಿಕೆ ಹಾಗೂ ದೌರ್ಜನ್ಯ ನಡೆಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯವಾಗಿದೆ. ಸಾ.ರಾ. ರವೀಶ್ ಹಾಗೂ ಸಹಚರರಿಗೆ ಶಾಸಕ ಸಾ.ರಾ. ಮಹೇಶ್ ಕುಮ್ಮಕ್ಕು ನೀಡಿರುವ ಕಾರಣ ಈ ಘಟನೆ ಜರುಗಿದೆ. ಸರ್ಕಾರ ಇದರ ಬಗ್ಗೆ ಸಮಗ್ರ ಹಾಗೂ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ಗೋವಿಂದಯ್ಯ ಆಗ್ರಹಿಸಿದರು.

‘1989 ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಪ್ರಕಾರ ಯಾವುದೇ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೇರ ಹೊಣೆ. ಆದ್ದರಿಂದ ಕೂಡಲೇ ಸರ್ಕಾರ ಮೈಸೂರು ಎಸ್ಪಿ ಹಾಗೂ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು. 2019ರಲ್ಲಿ ಸುಪ್ರೀಂ ನ್ಯಾಯಾಲಯ ದಲಿತರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಗಳನ್ನು ದೂರು ದಾಖಲಾದ 24 ಗಂಟೆಯ ಒಳಗೆ ಕೋರ್ಟ್‌ಗೆ ಒಪ್ಪಿಸಬೇಕೆಂಬ ನಿರ್ದೇಶನ ನೀಡಿದೆ. ಆದರೂ ಕರ್ತವ್ಯಲೋಪ ಎಸಗಿದ್ದರೂ ಅಧಿಕಾರಿಗಳನ್ನು ಅಮಾನತುಗೊಳಿಸಿಲ್ಲ’ ಎಂದರು.

ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಚಲುವರಾಜು ಮಾತನಾಡಿ, ‘ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಇದು ನಿಲ್ಲಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಸಾಲಿಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಹಾಗೂ ದಲಿತರ ಮನೆಗಳ ಮೇಲೆ ಸಾಮೂಹಿಕವಾಗಿ ಕಲ್ಲು ತೂರಾಟ ಮಾಡಿರುವುದು ಬಹಳ ವಿಚಿತ್ರ ಸಂಗತಿ. ದಲಿತರೇನು ಮನುಷ್ಯರಲ್ಲವೇ’ ಎಂದು ಪ್ರಶ್ನಿಸಿದರು.

ಹಿರಿಯ ಹೋರಾಟಗಾರ ಶಿವಕುಮಾರಸ್ವಾಮಿ ಮಾತನಾಡಿ, ‘ಸಾ.ರಾ.ಮಹೇಶ್ ಅವರ ಸಹೋದರನೇ ಸಾಲಿಗ್ರಾಮದಲ್ಲಿ ನಡೆದ ಗಲಭೆಯ ನೇತೃತ್ವ ವಹಿಸಿದ್ದಾರೆ ಎಂಬ ಮಾಹಿತಿ ಇದೆ. ಇದು ನಿಜವಾದರೆ ಅವರನ್ನು ‍ಪೊಲೀಸರು ಬಂಧಿಸಬೇಕು. ದಲಿತರಿಗೆ ರಕ್ಷಣೆ ನೀಡಬೇಕು. ದೌರ್ಜನ್ಯ ಎಸಗಿದ ಎಲ್ಲರನ್ನೂ ಜೈಲಿಗೆ ಹಾಕಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ಬನಶಂಕರಿ ನಾಗು, ಹಾರೋಹಳ್ಳಿ ಚಂದ್ರು, ರುದ್ರೇಶ್, ಕೋಟೆ ಪ್ರಕಾಶ್, ಚಕ್ಕೆರೆ ಲೋಕೇಶ್, ಹೊಂಬಾಳಯ್ಯ, ಗುಂಡ ದೇವರಹಳ್ಳಿ, ನರೇಶ್, ಲಕ್ಷ್ಮಣ್, ಪುಟ್ಟಸ್ವಾಮಿ, ಮಹಾಲಿಂಗ, ವೆಂಕಟೇಶ್, ಗುರುಮೂರ್ತಿ, ಶಿವರಾಜ್ ಭರಣಿ, ಗೋವಿಂದರಾಜು, ಹೇಮಂತ್, ಜಗದೀಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು