ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಪೋಡಿ ಪ್ರಕರಣ ತ್ವರಿತ ವಿಲೇವಾರಿಗೆ ಆಂದೋಲನ

ತಂತ್ರಜ್ಞಾನ ಆಧಾರಿತ ಪೋಡಿ ಕಾರ್ಯ; ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಚಾಲನೆ
Published 1 ಡಿಸೆಂಬರ್ 2023, 4:06 IST
Last Updated 1 ಡಿಸೆಂಬರ್ 2023, 4:06 IST
ಅಕ್ಷರ ಗಾತ್ರ

ರಾಮನಗರ: ಅನೇಕ ವರ್ಷಗಳ ಹಿಂದೆ ಸರ್ಕಾರದಿಂದ ಆಗಿರುವ ಭೂ ಮಂಜೂರಾತಿಯ ಪೋಡಿ ಪ್ರಕರಣಗಳ ಬಾಕಿ ವಿಲೇವಾರಿಗಾಗಿ  ಜಿಲ್ಲೆಯಲ್ಲಿ ದರಖಾಸ್ತು ಪೋಡಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ.

ಕಂದಾಯ ಇಲಾಖೆಯ ಭೂ ಮಾಪನ ಮತ್ತು ದಾಖಲೆಗಳ ಇಲಾಖೆಯ ಈ ವಿಶೇಷ ಕ್ರಮದಿಂದಾಗಿ ಭೂ ಮಂಜೂರಿದಾರರು ಪೋಡಿಗಾಗಿ ಅಲೆಯುವುದು ತಪ್ಪಲಿದೆ.

ರೋವರ್, ಟ್ಯಾಬ್ ಹಾಗೂ ಆರ್ಥೋರೆಕ್ಟಿಫೈಡ್ ರೆಡಾರ್ ಇಮೇಜ್ (ಒಆರ್‌ಐ) ಆಧಾರಿತ ಸರ್ವೇ ಕಾರ್ಯದಿಂದಾಗಿ ವರ್ಷಗಳಿಂದ ಬಾಕಿ ಇರುವ ಪೋಡಿ ಪ್ರಕರಣಗಳಿಗೆ ಶೀಘ್ರ ಮುಕ್ತಿ ಸಿಗಲಿದೆ. 

ರಾಜ್ಯದಲ್ಲಿ ಮೊದಲ ಬಾರಿಗೆ ರಾಮನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಆಂದೋಲನ ನಡೆಯುತ್ತಿದ್ದು, ಯಶಸ್ವಿಯಾದರೆ ಮುಂದೆ ರಾಜ್ಯದಾದ್ಯಂತ ವಿಸ್ತರಿಸುವ ಆಲೋಚನೆ ಇಲಾಖೆಗಿದೆ. 

‘ಪೋಡಿ ಅರ್ಜಿಗಳ ವಿಲೇವಾರಿ ರಾಜ್ಯದಾದ್ಯಂತ ಬಾಕಿ ಇದೆ. ಇವುಗಳನ್ನು ಶೀಘ್ರ ವಿಲೇವಾರಿ ಮಾಡಿ ಜನರಿಗಾಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಸಂಸದ ಡಿ.ಕೆ. ಸುರೇಶ್ ಸಭೆಯಲ್ಲಿ ಸೂಚಿಸಿದ್ದರು. ಆ ಮೇರೆಗೆ, ಇಲಾಖೆಯು ಜಿಲ್ಲೆಯಲ್ಲಿ ದರಖಾಸ್ತು ಪೋಡಿ ಆಂದೋಲನವನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಾರದ ಹಿಂದೆ ಕೈಗೆತ್ತಿಕೊಂಡಿದೆ’ ಎಂದು ಜಿಲ್ಲಾ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಬಿ.ಆರ್. ಹನುಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಅರ್ಜಿ ಕೊಡದಿದ್ದರೂ ಕೆಲಸವಾಗಲಿದೆ: ‘ಮುಂಚೆ ದರಖಾಸ್ತು ಪೋಡಿಗೆ ಕೋರಿ ಭೂ ಮಂಜೂರಿದಾರರು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ಗ್ರೇಡ್– 2 ತಹಶೀಲ್ದಾರ್, ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಕಚೇರಿಗಳಿಗೆ ಅಲೆಯಬೇಕಿತ್ತು. ದಾಖಲೆಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮತ್ತೆ ಎಲ್ಲಾ ಕಡೆಗೂ ಓಡಾಡಬೇಕಾಗಿತ್ತು. ಆಂದೋಲನದ ಮೂಲಕ ಜನ ಅರ್ಜಿ ಕೊಡದಿದ್ದರೂ ಪೋಡಿ ಕೆಲಸ ಸುಲಭವಾಗಿ ಆಗಲಿದೆ’ ಎಂದು ಅವರು ತಿಳಿಸಿದರು.

‘ಹಳೆಯ ಪೋಡಿ ಪದ್ಧತಿಯಲ್ಲಿ ಒಬ್ಬ ಭೂ ಮಾಪಕ ದಿನಕ್ಕೆ ಗರಿಷ್ಠ 4 ಹಿಡುವಳಿ ಮಾತ್ರ ಸರ್ವೇ ಮಾಡುತ್ತಿದ್ದರು. ಹೊಸ ತಂತ್ರಜ್ಞಾನದ ಪದ್ಧತಿಯಲ್ಲಿ ದಿನಕ್ಕೆ ಗರಿಷ್ಠ 15 ಹಿಡುವಳಿ ಸರ್ವೇ ಮಾಡಬಹುದು. ಮೊದಲ ಹಂತದಲ್ಲಿ ನಗರಸಭೆಯ 3 ಕಿ.ಮೀ. ವ್ಯಾಪ್ತಿ ಮತ್ತು ಪುರಸಭೆಯ 5 ಕಿ.ಮೀ. ವ್ಯಾಪ್ತಿಯ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, //ನಮೂನೆ–1ರಿಂದ ಮತ್ತು 6ರಿಂದ 10ರವರೆಗೆ// ಪೂರ್ಣಗೊಳಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

5 ತಂಡ ರಚನೆ: ‘ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಆಂದೋಲನಕ್ಕಾಗಿ ಸಹಾಯಕ ಭೂ ಮಾಪಕರನ್ನೊಳಗೊಂಡ ಐದು ತಂಡಗಳನ್ನು ರಚಿಸಲಾಗಿದೆ. ಸ್ಥಳೀಯ ಗ್ರಾಮ ಸಹಾಯಕರು ಈ ತಂಡಕ್ಕೆ ನೆರವಾಗಲಿದ್ದಾರೆ. ಒಬ್ಬೊಬ್ಬ ಭೂ ಮಾಪಕರು ಒಂದೊಂದು ಗ್ರಾಮದಲ್ಲಿರುವ ಸರ್ಕಾರಿ ಸರ್ವೇ ನಂಬರ್‌ನ ಅಳತೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಹತ್ತು ಗ್ರಾಮಗಳಲ್ಲಿ ಕೆಲಸ ನಡೆಯುತ್ತಿದೆ’ ಎಂದರು.

‘ಆಂದೋಲನದ ಹಿನ್ನೆಲೆಯಲ್ಲಿ ಸರ್ಕಾರಿ ಭೂ ಮಂಜೂರಿದಾರರು ಮತ್ತು ಫಾರಂ–53 ಮತ್ತು 57ನಲ್ಲಿ ಮಂಜೂರಾತಿಗಾಗಿ ಅರ್ಜಿ ದಾಖಲಿಸಿಕೊಂಡಿರುವ ಅನುಭವದಾರರು, ಸರ್ವೇಗಾಗಿ ಭೂ ಮಾಪಕರು ನೋಟಿಸ್ ನೀಡಿದಾಗ ಸ್ಥಳದಲ್ಲಿದ್ದು ತಮ್ಮ ದಾಖಲೆಗಳನ್ನು ತೋರಿಸಿದರೆ ಅಳತೆ ಕಾರ್ಯ ಚುರುಕಾಗಿ ನಡೆಯುತ್ತದೆ’ ಎನ್ನುತ್ತಾರೆ ಅಧಿಕಾರಿ.

ಗ್ರಾಮವೊಂದರ ಆರ್ಥೋರೆಕ್ಟಿಫೈಡ್ ರೆಡಾರ್ ಇಮೇಜ್ (ಒಆರ್‌ಐ)
ಗ್ರಾಮವೊಂದರ ಆರ್ಥೋರೆಕ್ಟಿಫೈಡ್ ರೆಡಾರ್ ಇಮೇಜ್ (ಒಆರ್‌ಐ)
ಬಿ.ಆರ್. ಹನುಮೇಗೌಡ ಉಪ ನಿರ್ದೇಶಕ ಜಿಲ್ಲಾ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ
ಬಿ.ಆರ್. ಹನುಮೇಗೌಡ ಉಪ ನಿರ್ದೇಶಕ ಜಿಲ್ಲಾ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ

ಆಂದೋಲನದ ಭಾಗವಾಗಿ ಭೂ ಮಾಪಕರು ಸರ್ವೇಗಾಗಿ ಭೂ ಮಂಜೂರಿದಾರರಿಗೆ ನೋಟಿಸ್ ನೀಡುತ್ತಾರೆ. ಸಂಬಂಧಪಟ್ಟವರು ಸ್ಥಳದಲ್ಲಿದ್ದು ತಮ್ಮ ದಾಖಲೆಗಳನ್ನು ತೋರಿಸಿ ಅಳತೆ ಕಾರ್ಯಕ್ಕೆ ಸಹಕರಿಸಬೇಕು

-ಬಿ.ಆರ್. ಹನುಮೇಗೌಡ ಉಪ ನಿರ್ದೇಶಕ ಜಿಲ್ಲಾ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ

ಪೋಡಿ ಅನುಕೂಲ ಏನು? 

  • ಸರ್ವೇ ನಂಬರ್ ಪ್ರಕಾರವಾಗಿ ಪೋಡಿ ಆಂದೋಲನ ನಡೆಯುವುದರಿಂದ ಅಲ್ಲಿನ ಎಲ್ಲಾ ಅರ್ಹ ಭೂ ಮಂಜೂರಿದಾರರ ಸಂಪೂರ್ಣ ಮಾಹಿತಿ ಒಂದೇ ಕಡೆ ಸಿಗುತ್ತದೆ.

  • ಉಳಿಕೆ ಸರ್ಕಾರಿ ಸರ್ವೇ ನಂಬರ್‌ನ ವಿಸ್ತೀರ್ಣ ಹಾಗೂ ಒತ್ತುವರಿ ಸಹ ಗೊತ್ತಾಗಲಿದೆ. * ಸ್ಥಳದಲ್ಲೇ ವಿಸ್ತೀರ್ಣ ಪರಿಶೀಲನೆ ಮಾಡಿಕೊಳ್ಳಬಹುದು.

  • ರೋವರ್ ಟ್ಯಾಬ್ ಹಾಗೂ ಒಆರ್‌ಐ ಆಧಾರಿತವಾಗಿರುವುದರಿಂದ ಪಾರದರ್ಶಕತೆಗೆ ಒತ್ತು. ವಿಸ್ತೀರ್ಣದಲ್ಲಿ ಸಹ ವ್ಯತ್ಯಾಸವಾಗುವುದಿಲ್ಲ. ಬದಲಾವಣೆಗೂ ಅವಕಾಶವಿರುವುದಿಲ್ಲ. ಹಿಡುವಳಿದಾರರ ಭೂಮಿ ಓವರ್ ಲ್ಯಾಪ್ ಆಗುವುದಿಲ್ಲ.

  • ಹಿಂದೆ ಭೂ ಮಾಪಕರು ಮಾಡುತ್ತಿದ್ದ ಚೈನ್ ಸರ್ವೇಯಲ್ಲಿ ಕಣ್ತಪ್ಪಿನಿಂದಾಗಿ ಆಗುತ್ತಿದ್ದ ದೋಷಗಳಿಗೆ ಮುಕ್ತಿ ಸಿಗುತ್ತದೆ. ಹೊಸ ಪದ್ಧತಿಯಲ್ಲಿ ಹಿಂದಿನ ಪದ್ಧತಿಯಂತೆ ಹೆಚ್ಚಿನ ಮಾನವ ಸಂಪನ್ಮೂಲದ ಅಗತ್ಯವಿಲ್ಲ.

  • ಕಚೇರಿಯಲ್ಲಿ ಪೋಡಿ ದಾಖಲೆ ತಯಾರಿಸುವುದು ಸರಾಗವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT