ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೃದಯ ಗೆಲ್ಲಲು ಬಂದಿರುವೆ, ‘ಕೈ’ ಬಲಪಡಿಸಿ: ಜನಸ್ಪಂದನ ಸಭೆಯಲ್ಲಿ ಶಿವಕುಮಾರ್ ಮನವಿ

Published 26 ಜೂನ್ 2024, 11:59 IST
Last Updated 26 ಜೂನ್ 2024, 11:59 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ‘ಕ್ಷೇತ್ರದ ಹಿಂದಿನ ಶಾಸಕರು ಏನೋ ಲೆಕ್ಕಾಚಾರದ ಮೇಲೆ ನಿಮ್ಮ ಹೃದಯ ಗೆದ್ದಿದ್ದರು. ಈಗ ನಾನು ನಿಮ್ಮ ಹೃದಯ ಗೆಲ್ಲಲು ಬಂದಿದ್ದೇನೆ. ನಮ್ಮ ಕೈ ಬಲಪಡಿಸಿ. ಈ ಬಾರಿ ಚನ್ನಪಟ್ಟಣದಲ್ಲಿ ನಿಮಗೆ ಬೇಕಾದವರು ಶಾಸಕರಾಗಿ ಆಯ್ಕೆಯಾಗುತ್ತಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, ‘ಮಾಜಿ ಶಾಸಕರಿಗೆ ನಾವು ಮಾಡುತ್ತಿರುವಂತಹ ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಆಸಕ್ತಿ ಇರಲಿಲ್ಲ. ನಾವು ಕನಕಪುರದಲ್ಲೂ ಇದೇ ರೀತಿಯ ಕಾರ್ಯಕ್ರಮ ಮಾಡಿ ಜನರ ಸಮಸ್ಯೆ ಕೇಳಿ ಪರಿಹರಿಸಿದ್ದೆವು. ಅದನ್ನೇ ಇಲ್ಲಿ ಮಾಡುತ್ತಿದ್ದೇವೆ’ ಎಂದರು.

‘ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು ₹ 150 ಕೋಟಿಯಿಂದ ₹ 200 ಕೋಟಿ ವಿಶೇಷ ಅನುದಾನ ತರುವೆ. ನಿಮಗೆ ಅಭಿವೃದ್ಧಿಯ ಹಸಿವಿನ ಜೊತೆಗೆ ನೋವು ಸಹ ಇದೆ. ಅದನ್ನು ನೀಗಿಸುವ ಕೆಲಸವ ಮಾಡುತ್ತೇನೆ. ನನ್ನ ಮತ್ತು ನಿಮ್ಮ ಸಂಬಂಧ ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ. ನಿಮ್ಮನ್ನು ಬಿಟ್ಟು ಹೋಗುವ ವ್ಯಕ್ತಿ ನಾನಲ್ಲ. ಬದಲಿಗೆ, ಯಾವಾಗಲೂ ಜೊತೆಗಿರುತ್ತೇನೆ’ ಎಂದು ಭರವಸೆ ನೀಡಿದರು.

ಬಸ್ ವ್ಯವಸ್ಥೆಗೆ ಸೂಚನೆ: ಸಭೆಯಲ್ಲಿ ವಿದ್ಯಾರ್ಥಿಗಳ ಗುಂಪೊಂದು, ‘ಗ್ರಾಮಕ್ಕೆ ಬಸ್‌ ವ್ಯವಸ್ಥೆ ಸರಿಯಾಗಿಲ್ಲ’ ಎಂದು ಅಹವಾಲು ಸಲ್ಲಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಸೋಮವಾರದಿಂದ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸ್ಥಳದಲ್ಲಿದ್ದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಿದರು.

ಗುಲಾಮರಾಗೋದು ಬೇಡ: ‘ಕುಮಾರಸ್ವಾಮಿ ಅವರು ಅಧಿಕಾರಿಗಳನ್ನು ಗುಲಾಮರು ಎಂದಿದ್ದಾರೆ. ಅಧಿಕಾರಿಗಳು ಯಾರಿಗೂ ಗುಲಾಮರಾಗೋದು ಬೇಡ. ಸರ್ಕಾರದ ಕೆಲಸ ದೇವರ ಕೆಲಸ ಎಂದು ವಿಧಾನಸೌಧದಲ್ಲಿ ಬರೆದಿದೆ. ಅದರಂತೆ, ಅಧಿಕಾರಿಗಳು ಜನರ ಸೇವೆ ಮಾಡಬೇಕು ಎಂದು ಆ ಹುದ್ದೆಗೆ ಬಂದಿದ್ದಾರೆ. ಅವರು ಯಾರಿಗೂ ಗುಲಾಮರಾಗುವುದಿಲ್ಲ’ ಎಂದು ಸಭೆ ಬಳಿಕ ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಆದಾಯ ಹೆಚ್ಚಿಸಲು ಹಾಲಿನ ದರ ಏರಿಕೆ’

ರೈತರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಕೆಎಂಎಫ್‌ ಹಾಲಿನ ಪ್ಯಾಕೇಟ್‌ನ ಪ್ರಮಾಣ ಮತ್ತು ದರವನ್ನು ಏರಿಕೆ ಮಾಡಿದೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯವರು ರೈತರ ವಿರೋಧಿಗಳು. ವ್ಯಾಪಾರಿಗಳ ಪರವಾಗಿರುವ ಬಿಜೆಪಿಯವರು ರೈತರಿಗೆ ಸಿಗುವ ಆದಾಯ ತಪ್ಪಿಸಲು ಹೀಗೆ ಮಾಡುತ್ತಿದ್ದಾರೆ’ ಎಂದು ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT