ಬುಧವಾರ, ಫೆಬ್ರವರಿ 19, 2020
16 °C

ಅತ್ಯಾಚಾರ, ತ್ರಿವಳಿ ಕೊಲೆ ಆರೋಪಿಗೆ ಮರಣ ದಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಒಂದೇ ಕುಟುಂಬದ ಮೂವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಶುಕ್ರವಾರ ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶ ನೀಡಿತು.

ಕನಕಪುರ ತಾಲ್ಲೂಕು ಮರಳವಾಡಿ ಹೋಬಳಿಯ ಚಿಕ್ಕ ಬೆಜ್ಜಲಹಟ್ಟಿ ನಿವಾಸಿ ಬಸವರಾಜ ಬೋವಿ (41) ಶಿಕ್ಷೆಗೆ ಗುರಿಯಾದ ಆರೋಪಿ. ಈತ ಭೀಮೇಗೌಡನ ದೊಡ್ಡಿ ಹೊರವಲಯದಲ್ಲಿ ಇರುವ ತೋಟದ ಮನೆಯಲ್ಲಿ ವಾಸವಿದ್ದ ಮಾರೇಗೌಡ (70), ಅವರ ಮಗಳು ಗೌರಮ್ಮ (50) ಮತ್ತು ಮೊಮ್ಮೊಗಳು ಸುಕನ್ಯಾ (15)ರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದ. 2016ರ ಜನವರಿ 5ರಂದು ಈ ಘಟನೆ ನಡೆದಿತ್ತು.

ಆರೋಪಿ ಬಸವರಾಜ ಗೌರಮ್ಮರನ್ನು ದೈಹಿಕ ಸಂಬಂಧಕ್ಕೆ ಒತ್ತಾಯಿಸುತ್ತಲೇ ಬಂದಿದ್ದ. ಆದರೆ ಅವರು ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಕುಪಿತನಾದ ಆತ ಪೈಶಾಚಿಕ ಕೃತ್ಯಕ್ಕೆ ಸಂಚು ರೂಪಿಸಿದ್ದ. ತೋಟದ ಮನೆಯಲ್ಲಿ ಮೊಲವನ್ನು ಸೆರೆ ಹಿಡಿದಿರುವುದಾಗಿ ಹೇಳಿ ಮಾರೇಗೌಡರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದ. ಬಳಿಕ ಅವರ ಮನೆಗೆ ಬಂದು ಸುಕನ್ಯಾಳನ್ನು ಹತ್ಯೆ ಮಾಡಿ, ನಂತರ ಗೌರಮ್ಮರ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ.

ಹಾರೋಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ್ದರು. ರಾಮನಗರ ಉಪವಿಭಾಗದ ಅಂದಿನ ಡಿವೈಎಸ್ಪಿ ಲಕ್ಷ್ಮಿ ಗಣೇಶ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮರುಳ ಸಿದ್ಧಾರಾದ್ಯ ಅವರು ಆರೋಪಿಗೆ ಗಲ್ಲು ಶಿಕ್ಷೆ ಹಾಗೂ ₨5ಸಾವಿರ ದಂಡ ವಿಧಿಸಿ ಆದೇಶ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು