ಚನ್ನಪಟ್ಟಣ: ನಗರದ ಗುರುವಪ್ಪ ಸರ್ಕಲ್‌ನಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಗೆ ನಿರ್ಮಾಣ ಮಾಡಿರುವ ರಸ್ತೆ ವಿಭಜಕವನ್ನು ತೆರವುಗೊಳಿಸವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಗುರುವಾರ ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಹೆದ್ದಾರಿಯಲ್ಲಿನ ಡಾ. ಗುರುವಪ್ಪ ವೃತ್ತವು ಚರ್ಚ್ ರಸ್ತೆ ಹಾಗೂ ಅಂಚೆ ಕಚೇರಿ ರಸ್ತೆಗೆ ಸಂಪರ್ಕ ಕಲ್ಪಸಿವ ವೃತ್ತವಾಗಿದ್ದು, ಇಲ್ಲಿ ರಸ್ತೆ ವಿಭಜಕ ನಿರ್ಮಾಣ ಮಾಡಿರುವುದರಿಂದ ಎರಡೂ ರಸ್ತೆಗೆ ಸಂಚರಿಸುವ ವಾಹನ ಸವಾರರು, ವೃದ್ಧರು, ಶಾಲಾಮಕ್ಕಳಿಗೆ ಬಹಳ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ರಸ್ತೆ ವಿಭಜಕ ತೆರವು ಮಾಡಿ ನೇರ ಸಂಪರ್ಕಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಈ ಹಿಂದೆ ವಾಹನಗಳ ದಟ್ಟನೆ ಇದ್ದ ಕಾರಣ ಇಲ್ಲಿದ್ದ ತಿರುವನ್ನುಮುಚ್ಚಲಾಗಿತ್ತು. ಆದರೆ ಇದೀಗ ನಗರದ ಹೊರವಲಯದಲ್ಲಿ ಬೆಂಗಳೂರು ಮೈಸೂರು ಬೈಪಾಸ್ ರಸ್ತೆ ನಿರ್ಮಾಣವಾಗಿರುವ ಕಾರಣ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಿದೆ. ವಾಹನಗಳ ಓಡಾಟವು ಕಡಿಮೆಯಾಗಿರುವ ಕಾರಣ ರಸ್ತೆ ವಿಭಜಕವನ್ನು ತೆರವು ಮಾಡಬೇಕು. ಇದರಿಂದ ನೂರಾರು ಮಂದಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ನಗರಸಭಾ ಆಯುಕ್ತ ಕೆ. ಮಹೇಂದ್ರ ಅವರು ಹೆದ್ದಾರಿ ಪ್ರಾಧಿಕಾರದ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆನಂತರ ಪೊಲೀಸರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ರಸ್ತೆ ವಿಭಜಕ ತೆರವಿನ ಬಗ್ಗೆ ಮಾತುಕತೆ ನಡೆಸಿದರು. ಅಧಿಕಾರಿಗಳ ಭರವಸೆಯ ನಂತರ ಪ್ರತಿಭಟನೆ ಕೈಬಿಡಲಾಯಿತು.
ನಿವೃತ್ತ ಪ್ರಾಂಶುಪಾಲ ನಿಂಗೇಗೌಡ, ಡಾ. ಲೋಕಾನಂದ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗೋವಿಂಧಹಲ್ಳಿ ನಾಗರಾಜು, ನಗರಸಭಾ ಮಾಜಿ ಸದಸ್ಯ ಜೆಸಿಬಿ ಲೋಕೇಶ್, ಸಮಾಜ ಸೇವಕ ರಾಂಪುರ ರಾಜಣ್ಣ, ಕಸಬಾ ಪಿಎಸಿಎಸ್ ನಿರ್ದೇಶಕ ಚೇತನ್ ಕೀಕರ್, ನಗರಸಭಾ ಸದಸ್ಯ ಮಂಗಳವಾರಪೇಟೆ ತಿಮ್ಮರಾಜು, ಡಿಎಸ್ಎಸ್ ಸಂಚಾಲಕ ವೆಂಕಟೇಶ್, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್ ಗೌಡ, ಮುಖಂಡರಾದ ಎಚ್.ವಿ.ಚಂದ್ರು, ಹೊಂಗನೂರು ಪುಟ್ಟರಾಜು, ನಿವೃತ್ತ ಶಿಕ್ಷಕ ಪುಟ್ಟಪ್ಪಾಜಿ, ಜಯರಾಮು, ಚಿಕ್ಕಣ್ಣಪ್ಪ, ಬೈರಾಪಟ್ಟಣ ಸುರೇಶ್, ಪುನೀತ್, ಕೆ.ಕುಮಾರ್, ಜಗದಾಪುರ ಕೃಷ್ಣೇಗೌಡ, ಬಾಳೆಮಂಡಿ ಕುಮಾರ್, ನಾಗವಾರ ರಂಗಸ್ವಾಮಿ, ತಸ್ಮಿಯಾಬಾನು, ಮೈಲನಾಯಕನಹಳ್ಳಿ ಅಜಯ್, ಚಿಕ್ಕೇನಹಳ್ಳಿ ಸೂರಿ, ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.