ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಹೇಮಾವತಿ ಪೈಪ್‌ಲೈನ್‌ ಕೆಲಸಕ್ಕೆ ಅಡ್ಡಿ

ಮಾಜಿ ಶಾಸಕರ ಹಿಂಬಾಲಕರ ವರ್ತನೆಗೆ ಶಾಸಕ ಎ. ಮಂಜುನಾಥ್‌ ಟೀಕೆ
Last Updated 3 ಅಕ್ಟೋಬರ್ 2021, 5:12 IST
ಅಕ್ಷರ ಗಾತ್ರ

ಮಾಗಡಿ: ‘ನಾನು ಕೇರಾಫ್‌ ಫುಟ್‌ಪಾತ್‌. 1.19 ಲಕ್ಷ ಮತಗಳನ್ನು ನೀಡಿದ ಮತದಾರರು ನನಗೆ ಕಲ್ಯಾ ಗೇಟ್‌ ಅಡ್ರೆಸ್‌ ನೀಡಿದ್ದಾರೆ’ ಎಂದು ಶಾಸಕ ಎ. ಮಂಜುನಾಥ್‌ ತಿಳಿಸಿದರು.

ಶಾಸಕರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ನನ್ನ ಅಡ್ರೆಸ್ ಯಾವುದು ಎಂದು ಕೇಳಿದ್ದಾರೆ. ನಾನು ಜಹಗೀರುದಾರನಲ್ಲ, ರಾಜವಂಶಸ್ಥನೂ ಅಲ್ಲ. ನನಗೆ ಸಾವಿರಾರು ಎಕರೆ ಜಮೀನು ಇಲ್ಲ. ಕೂಲಿ ಕೆಲಸ ಮಾಡುತ್ತಿದ್ದವರ ಮಗನಾದ ನನ್ನನ್ನು ಗುರುತಿಸಿ ಅಡ್ರೆಸ್ ನೀಡಿ ಜನಸೇವೆ ಮಾಡುವ ಅವಕಾಶ ನೀಡಿದ್ದಾರೆ’ ಎಂದರು.

‘ಪಾಳೆಗಾರಿಕೆ ಮಾಡಲು, ಮನೆ ಒಡೆಯಲು, ಕೇಸ್ ಹಾಕಿಸಲು, ಹೊಡೆದಾಟ ಮಾಡಿ ದುರಾಡಳಿತ ಮಾಡಲು ಮತದಾರರು ನನಗೆ ಅಧಿಕಾರ ನೀಡಿಲ್ಲ. ಧ್ವನಿ ಇಲ್ಲದವರಿಗೆ ಧ್ವನಿಯಾಗಿರಬೇಕು. ಬಡವರ ಸೇವೆ ಮಾಡಬೇಕು. ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಲು ಅವಕಾಶ ನೀಡಿದ್ದಾರೆ’ ಎಂದರು.

‘ನಾನು ಯಾವ ದೊಡ್ಡ ಮನೆತನದವನಲ್ಲ. ಕೂಲಿ ಕೆಲಸ ಮಾಡುವ ವಂಶದವನಾದ ನನ್ನನ್ನು ತಾಲ್ಲೂಕಿನ ಮತದಾರರು ಗುರುತಿಸಿದ್ದಾರೆ. ತಾಲ್ಲೂ ಕಿನ ಜನರಿಗಾಗಿ ಯಾರು ಹೊಡೆದರೂ ಹೊಡೆಸಿಕೊಳ್ಳುತ್ತೇನೆ. ಯಾರು ಬೈದರೂ ಬೈಸಿಕೊಳ್ಳುತ್ತೇನೆ’ ಎಂದರು.

ಹೇಮಾವತಿ ನೀರಿನ ಪೈಪ್‌ಲೈನ್‌ ಅಳವಡಿಕೆ ಕೆಲಸಕ್ಕೆ ತೊಂದರೆ ನೀಡುತ್ತಿರುವವರು ಬಾಲಕೃಷ್ಣ ಅವರ ಹಿಂಬಾಲಕರಾಗಿದ್ದಾರೆ. ಕೆಲಸಕ್ಕೆ ತೊಂದರೆ ನೀಡುತ್ತಿರುವವರ ಪಟ್ಟಿ ಇಲಾಖೆಯ ಬಳಿಯಿದೆ. ಅದನ್ನು ಮಾಜಿ ಶಾಸಕರು ಪಡೆದುಕೊಂಡರೆ ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.

‘ಕೆಲಸಕ್ಕೆ ತೊಂದರೆ ನೀಡುತ್ತಿರುವವರು ಯಾರು ಎಂದು ಸಂಸದ ಡಿ.ಕೆ. ಸುರೇಶ್ ಮತ್ತು ಎಚ್.ಎಂ. ರೇವಣ್ಣ ಅವರಿಗೂ ಗೊತ್ತಿದೆ. ಮಾಜಿ ಶಾಸಕರೊಂದಿಗೆ ಚರ್ಚೆ ಮಾಡಲು ಮತದಾರರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿಲ್ಲ. ಅಭಿವೃದ್ಧಿ ಕೆಲಸದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಮತದಾರರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ’ ಎಂದು ತಿರುಗೇಟು ನೀಡಿದರು.

‘ರೈತರ ಒಪ್ಪಿಗೆ ಇಲ್ಲದೇ ಕೈಗಾರಿಕಾ ಯೋಜನೆ ಆರಂಭಿಸುವುದಿಲ್ಲ. ರೈತರು ಕೈಗಾರಿಕೆ ಆಗಬೇಕು ಎಂಬ ಉದ್ದೇಶಕ್ಕೆ ಬಂದರೆ ಮಾತ್ರ ಮಾಡುತ್ತೇವೆ. ಶೇ 60ರಷ್ಟು ರೈತರು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿದಾಗ ಜಮೀನಿಗೆ ಉತ್ತಮ ಬೆಲೆ ಮತ್ತು ಉದ್ಯೋಗ ನೀಡುವ ಬಗ್ಗೆ ಸರ್ಕಾರದೊಂದಿಗೆ ಮಾತನಾಡುತ್ತೇನೆ’ ಎಂದು ಸ್ಪಷ್ಟಪಡಿಸಿಸದರು.

‘ಹುಲಿಕಟ್ಟೆ ಬಳಿ ಗಾರ್ಮೆಂಟ್ಸ್‌ ಆರಂಭಿಸಲು 25 ಎಕರೆ ಜಮೀನು ನೀಡುತ್ತೇನೆ ಎಂದು ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ. ಜಮೀನನ್ನು ಉಪ ನೋಂದಣಿ ಕಚೇರಿಯಲ್ಲಿ ತಹಶೀಲ್ದಾರ್ ಹೆಸರಿಗೆ ನೋಂದಣಿ ಮಾಡಿಸಿದರೆ ಆ ಭಾಗದಲ್ಲಿ ಸಣ್ಣ ಕೈಗಾರಿಕೆ ಮಾಡಲು ಸೂಚಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT