ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಸುರೇಶ್– ಅಶ್ವತ್ಥನಾರಾಯಣ – ಹೊರಗೆ ಕುಸ್ತಿ: ವೇದಿಕೆಯಲ್ಲಿ ದೋಸ್ತಿ!

ರಾಮನಗರ ನೂತನ ಜಿಲ್ಲಾ ಆಸ್ಪತ್ರೆ ಲೋಕಾರ್ಪಣೆ
Last Updated 2 ಮಾರ್ಚ್ 2023, 21:11 IST
ಅಕ್ಷರ ಗಾತ್ರ

ರಾಮನಗರ: ನಗರದಲ್ಲಿ ಗುರುವಾರ ನಡೆದ ಜಿಲ್ಲಾ ಆಸ್ಪತ್ರೆ ಹೊಸ ಕಟ್ಟಡದ ಉದ್ಘಾಟನೆ ಸಮಾರಂಭದ ಆರಂಭದಲ್ಲಿ ಮೂರು ಪಕ್ಷಗಳ ಕಾರ್ಯಕರ್ತರು ಮತ್ತು ನಾಯಕರ ನಡುವೆ ಏರುಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು.

ಆದರೆ, ವೇದಿಕೆಯಲ್ಲಿ ಸೌಹಾರ್ದ ವಾತಾವರಣ ನೆಲೆಸಿತ್ತು. ವೇದಿಕೆಯಲ್ಲಿ ಅಕ್ಕಪಕ್ಕ ಕೂತಿದ್ದ ಎಲ್ಲ ನಾಯಕರೂ ಮುನಿಸು ಮರೆತು ಪರಸ್ಪರ ನಸುನಗುತ್ತ ಮಾತುಕತೆಯಲ್ಲಿ ತೊಡಗಿದ್ದರು.

ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸದೇ ಅಪಚಾರ ಮಾಡಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್‌ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಆಸ್ಪತ್ರೆ ಒಳ ಆವರಣದಲ್ಲಿ ನೇರವಾಗಿ ತರಾಟೆಗೆ ತೆಗೆದುಕೊಂಡರು.

‘ಯಾರ್‍ರೀ ಅವನು ಜಿಲ್ಲಾಧಿಕಾರಿ, ಕರೀರಿ ಅವನನ್ನು ಇಲ್ಲಿ. ನಾನು ಒಬ್ಬ ಜನಪ್ರತಿನಿಧಿ ಇದ್ದೀನಿ. ನನಗೂ ಪ್ರೋಟೊಕಾಲ್‌ ಇದೆ’ ಎಂದು ಗದರಿದರು. ತಮ್ಮ ಮುಂದೆ ಹೊರಟಿದ್ದ ಸಚಿವ ಅಶ್ವತ್ಥನಾರಾಯಣ ಅವರನ್ನು ಉದ್ದೇಶಿಸಿ ‘ರೀ ಮಿನಿಷ್ಟ್ರೇ ಒಂದು ನಿಮಿಷ ನಿಂತ್ಕೊಳ್ಳಿ’ ಎಂದು ತಾಕೀತು ಮಾಡಿದರು.

ಹೊರಳಿ ನಿಂತ ಅಶ್ವತ್ಥನಾರಾಯಣ, ‘ಇದಕ್ಕೆ ಜಗಳವಾಡುವುದು ಏನೂ ಬೇಕಿಲ್ಲ. ಮಾತನಾಡೋಣ ಬನ್ನಿ’ ಎಂದು ಕರೆದರು. ‘ನೀವೊಬ್ಬ ಜಿಲ್ಲಾ ಉಸ್ತುವಾರಿ ಸಚಿವರಾಗಿ, ಮಾಜಿ ಉಪಮುಖ್ಯಮಂತ್ರಿಯಾಗಿ ಯಾರನ್ನು ಯಾವಾಗ ಕರೆಯಬೇಕು ಎಂದು ಗೊತ್ತಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ನಿಮ್ಮನ್ನು ಕಾರ್ಯಕ್ರಮಕ್ಕೆ ಬರಬೇಡ ಎಂದಿದ್ದು ಯಾರು’ ಎಂಬ ಸಚಿವರ ಮರು ಪ್ರಶ್ನೆಗೆ ಕುಪಿತಗೊಂಡ ಸಂಸದ, ‘ರಾತ್ರಿ ಆಹ್ವಾನ ಪತ್ರಿಕೆ ನೀಡಿ ಮರುದಿನ ಬೆಳಿಗ್ಗೆ ಬನ್ನಿ ಎಂದಿದ್ದೀರಿ. ಯಾವತ್ತು ಕಾರ್ಯಕ್ರಮ ನಿಗದಿ ಮಾಡಿದ್ದೀರೋ ಗೊತ್ತಿಲ್ಲ. ಮುಂಚೆಯೇ ಕರೆಯಬೇಕಿತ್ತು’ ಎಂದರು. ‘ಆಯಿತು ಬನ್ನಿ’ ಎಂದು ಸಚಿವರು ಅವರನ್ನು ಕರೆದೊಯ್ದರು. ಆರೋಗ್ಯ ಸಚಿವ ಸುಧಾಕರ್ ಈ ಘಟನೆಗೆ ಮೂಕ ಪ್ರೇಕ್ಷಕರಾದರು.

ಹೊರಗೆ ಗದ್ದಲ:

ಆಸ್ಪತ್ರೆಯ ಉದ್ಘಾಟನೆ ಸಂದರ್ಭ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದ, ತಳ್ಳಾಟ ನಡೆದಿದ್ದು ಆರಂಭದಲ್ಲೇ ಆತಂಕ ಮನೆ ಮಾಡಿತ್ತು.

ಬೆಳಿಗ್ಗೆ 11.15ರ ಸುಮಾರಿಗೆ ಸಚಿವರಾದ ಸುಧಾಕರ್ ಹಾಗೂ ಅಶ್ವತ್ಥನಾರಾಯಣ ಆಸ್ಪತ್ರೆ ಉದ್ಘಾಟನೆಗೆ ಮುಂದಾದರು. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ವಿರೋಧಿಸಿದರು. ಶಾಸಕರಾದ ಎಚ್‌.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಬರುವವರೆಗೆ ಕಾಯುವಂತೆ ಆಗ್ರಹಿಸಿದರು. ಇದಕ್ಕೆ ಕಿವಿಗೊಡದ ಸಚಿವರು ಆಸ್ಪತ್ರೆ ಉದ್ಘಾಟಿಸಿದರು. ಆಗ ಜೆಡಿಎಸ್‌ ಕಾರ್ಯಕರ್ತರು ಆಸ್ಪತ್ರೆ ಒಳನುಗ್ಗಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT