ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜದ ದಿಕ್ಕು ತಪ್ಪಿಸಬೇಡಿ’

ಮಾಧ್ಯಮಗಳಿಗೆ ಶಾಸಕ ಎ. ಮಂಜುನಾಥ್‌ ಸಲಹೆ
Last Updated 13 ಸೆಪ್ಟೆಂಬರ್ 2021, 3:59 IST
ಅಕ್ಷರ ಗಾತ್ರ

ಮಾಗಡಿ: ‘ಪತ್ರಕರ್ತರು ಸಮಾಜ ದಿಕ್ಕು ತಪ್ಪಿದಾಗ ಸರಿದಾರಿಗೆ ತರವಂತಿರಬೇಕೇ ವಿನಾ ದಿಕ್ಕು ತಪ್ಪಿಸುವಂತಿರಬಾರದು. ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯವಾಗಿದೆ’ ಎಂದು ಶಾಸಕ ಎ. ಮಂಜುನಾಥ್ ಅಭಿಪ್ರಾಯಪಟ್ಟರು.

ಕುದೂರು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದ ರಂಗಣ್ಣ ಸಭಾಂಗಣದಲ್ಲಿ ಮಾಧ್ಯಮ ಬಳಗದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ವಿವಾದಿತ ಹೇಳಿಕೆ ಕೊಡುವ ವ್ಯಕ್ತಿಗಳನ್ನು ಕಂಡರೆ ಮಾಧ್ಯಮದವರಿಗೆ ಹೆಚ್ಚು ಪ್ರೀತಿ. ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಒಳ್ಳೆಯವರು, ಕೆಟ್ಟವರು ಎಂದಿರುವುದಿಲ್ಲ. ಹಾಗೆಯೇ ಮಾಧ್ಯಮ ಲೋಕದಲ್ಲೂ ಎಲ್ಲರೂ ಕೆಟ್ಟವರು ಎಂದು ಹೇಳಲು ಸಾಧ್ಯವಿಲ್ಲ. ರಾಜಕಾರಣಿಗಳ, ಅಧಿಕಾರಿಗಳ ಅಂಕುಡೊಂಕು ತಿದ್ದಿ ಎಚ್ಚರಿಸುವ ಶಕ್ತಿ ಪತ್ರಕರ್ತರಲ್ಲಿದೆ ಎಂದರು.

ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಸಮಾಜದ ನಾಲ್ಕೂ ಅಂಗಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ಜಗತ್ತಿನಲ್ಲೇ ಬಲಿಷ್ಠ ಭಾರತ ನಿರ್ಮಾಣವಾಗಲಿದೆ. ಉಳಿದ ಮೂರು ಅಂಗಗಳನ್ನು ಎಚ್ಚರಿಸಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ಮಾಡುವ ದೊಡ್ಡ ಹೊಣೆಗಾರಿಕೆ ಮಾಧ್ಯಮದ ಮೇಲಿದೆ ಎಂದು ಹೇಳಿದರು.

ಯಾವುದೇ ಪತ್ರಕರ್ತ ರಾಜಕಾರಣಿಗಳ ಬೆನ್ನಿಗೆ ಬೀಳಬಾರದು. ಇಂದು ಕೆಲವು ಪತ್ರಿಕೆಗಳು ಒಂದೊಂದು ಪಕ್ಷದ ವಕ್ತಾರರಂತೆ ಬಿಂಬಿಸಿಕೊಂಡಿರುವುದು ನಿಜಕ್ಕೂ ದುರಂತ ಎಂದರು.

ತುಮಕೂರು ಸಿದ್ಧಾರ್ಥ ಕಾಲೇಜಿನ ಮನೋವಿಜ್ಞಾನ ವಿಭಾಗದ ಡಾ.ಕೆ.ಎಲ್. ರಾಮಲಿಂಗು ಮಾತನಾಡಿ, ಸಮಾಜದ ಆರೋಗ್ಯ ಕೆಡಿಸುವಲ್ಲಿ ಮಾಧ್ಯಮದವರ ಪಾತ್ರ ದೊಡ್ಡದಾಗಿದೆ. ಮಾಧ್ಯಮದವರು ರಾಜಕೀಯ ಪಕ್ಷವೊಂದರ ಬಾಲಂಗೋಚಿಗಳಾಗಬಾರದು ಎಂದು ಹೇಳಿದರು.

ಸರ್ಕಾರ ಪುತ್ಥಳಿ ನಿರ್ಮಾಣ ಮತ್ತು ಮಠಗಳಿಗೆ ಸಾವಿರಾರು ಕೋಟಿ ಖರ್ಚು ಮಾಡುತ್ತಿದೆ. ಈ ಬಗ್ಗೆ ಮಾಧ್ಯಮಗಳು ಒಮ್ಮುಖವಾಗಿ ಖಂಡಿಸಲಿಲ್ಲ. ಕೆಲವೊಂದು ಮಾಧ್ಯಮಗಳು ಸರ್ಕಾರದ ಬಾಲಂಗೋಚಿಗಳಂತೆ ಕೆಲಸ ಮಾಡುತ್ತಿವೆ. ಎಲ್ಲಿ ಎಚ್ಚರವಾಗಿರಬೇಕಾಗಿತ್ತೋ ಅಲ್ಲಿ ಎಚ್ಚರವಿರದೆ ಮೈಮರೆತು ಸರ್ಕಾರಗಳು ಭ್ರಷ್ಟವಾಗುವಂತೆ ಮಾಡಿವೆ ಎಂದು ವಿಷಾದಿಸಿದರು.

ತುಮಕೂರು ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ. ಮುದ್ದೇಶ್ ಮಾತನಾಡಿ, ಪತ್ರಕರ್ತರು ಸಾರ್ವಜನಿಕ ಸಂಪರ್ಕಾಧಿಕಾರಿಗಳಂತೆ ಕಾರ್ಯ ನಿರ್ವಹಿಸಬೇಕು. ಪ್ರಜಾಪ್ರಭುತ್ವದ ರಕ್ಷಣೆಗೆ ಪಣ ತೊಡಬೇಕು ಎಂದು ಸಲಹೆ ನೀಡಿದರು.

ಕೆ.ಎಂ. ಮಂಜುನಾಥ್, ಗೋವಿಂದ್‌ ಕೆ. ಹುಲಿಕಲ್, ರಾಜಲಕ್ಷ್ಮೀ, ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು.

ಬಮೂಲ್ ನಿರ್ದೇಶಕ ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಕೆ.ಬಿ. ಬಾಲರಾಜ್, ಸದಸ್ಯ ಕೆ.ಟಿ. ವೆಂಕಟೇಶ್, ಮಾಜಿ ಸದಸ್ಯ ಕೆ.ಎಂ. ರಾಘವೇಂದ್ರ, ಹೊನ್ನರಾಜ್, ರಮೇಶ್, ಗೀತಾ, ಬಾಲಕೃಷ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್, ಸದಸ್ಯ ಹನುಮೇಗೌಡ, ಪ್ರಾಚಾರ್ಯ ವಿಜಯ್‌ ಕುಮಾರ್‌, ಉಪ ಪ್ರಾಚಾರ್ಯ ವೆಂಕಟೇಶ್‌ ಮೂರ್ತಿ, ಕುದೂರು ಮಾಧ್ಯಮ ಬಳಗದ ಅಧ್ಯಕ್ಷ ಗಂ. ದಯಾನಂದ್‌, ಕಾರ್ಯದರ್ಶಿ ಮಂಜುನಾಥ್‌, ಖಜಾಂಚಿ ಅಭಿಷೇಕ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT