ಗುರುವಾರ , ಜುಲೈ 16, 2020
24 °C
ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೇವರಾಜು ಒತ್ತಾಯ

ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ರೈತರ ಪರ ಎಂದು ಹೇಳಿ ಅಧಿಕಾರಕ್ಕೆ ಬರುವ ಪಕ್ಷಗಳು ಸರ್ಕಾರ ರಚಿಸಿದ ನಂತರ ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೇವರಾಜು ಆರೋಪಿಸಿದರು.

ಇಲ್ಲಿನ ಮಿನಿ ವಿಧಾನ ಸೌಧದ ಎದುರು ಕೆಪಿಟಿಎಸ್‌ಎಲ್‌ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರ್ಕಾರಿ ಸ್ವಾಮ್ಯದ ವಿದ್ಯುತ್‌ ಇಲಾಖೆ ರೈತರ ಪರವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇಂತಹ ಇಲಾಖೆಯನ್ನು ಖಾಸಗಿ ಒಡೆತನಕ್ಕೆ ನೀಡಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ದೂರಿದರು.

ಖಾಸಗೀಕರಣದಿಂದ ಮೊದಲು ರೈತರಿಗೆ ಅನ್ಯಾಯವಾಗುತ್ತದೆ. ಈಗ ಉಚಿತವಾಗಿ ಪಡೆಯುತ್ತಿರುವ ಕೃಷಿ ಪಂಪಸೆಟ್‌ ಮತ್ತು ಭಾಗ್ಯ ಜ್ಯೋತಿ ಸಂಪರ್ಕಗಳಿಗೆ ಮುಂದೆ ವಿದ್ಯುತ್‌ ಬಿಲ್‌ನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದರು. 

ಬಡವರಿಗೆ ಸಿಗುತ್ತಿರುವ ಉಚಿತ ವಿದ್ಯುತ್, ಗೃಹ ಬಳಕೆಗೆ ಸಿಗುತ್ತಿರುವ ಸಬ್ಸಿಡಿ ವಿದ್ಯುತ್‌ ಇನ್ನು ಮುಂದೆ ಸಿಗುವುದಿಲ್ಲ. ಖಾಸಗಿ ಕಂಪನಿಗಳು ತಮಗೆ ಇಷ್ಟ ಬಂದ ರೀತಿಯಲ್ಲಿ ವಿದ್ಯುತ್‌ ದರ ಏರಿಕೆ ಮಾಡಲಿವೆ. ಇಲಾಖೆಯಲ್ಲಿನ ನೌಕರರು ಮತ್ತು ಕಾರ್ಮಿಕರ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ ಎಂದು ಆತಂಕ ವ್ಯಕ್ತ‍ಪಡಿಸಿದರು. 

ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಕೂಡಲೇ ರೈತ ವಿರೋಧಿಯಾಗಿರುವ ಹೊಸ ತಿದ್ದುಪಡಿ ಕಾಯ್ದೆಯನ್ನು ಮತ್ತು ಖಾಸಗಿಕರಣಗೊಳಿಸುವ ಪ್ರಯತ್ನವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ವಿರೋಧಿ ನೀತಿಯನ್ನು ಖಂಡಿಸಿ ಎಲ್ಲೆಡೆ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದೇವೆ. ಮನವಿಗೆ ಸ್ಪಂದಿಸದಿದ್ದರೆ ಮುಂದೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. 

ತಾಲ್ಲೂಕು ಕಚೇರಿ ಶಿರಸ್ತೇದಾರ್‌ ರಘು ಮೂಲಕ ಒತ್ತಾಯದ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.