ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ: ಬೆಳೆಹಾನಿ ಪರಿಹಾರ ಬಿಡುಗಡೆ

ಸಮೀಕ್ಷೆ ಆಧರಿಸಿ ಮೊದಲ ಹಂತದಲ್ಲಿ ರೈತರಿಗೆ ಗರಿಷ್ಠ ₹2 ಸಾವಿರ ಪರಿಹಾರ
Published 3 ಮೇ 2024, 5:53 IST
Last Updated 3 ಮೇ 2024, 5:53 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ತಲೆದೋರಿದ ಬರದ ಪರಿಹಾರದ ಮೊದಲನೇ ಕಂತಿನಲ್ಲಿ ಪ್ರತಿ ರೈತರಿಗೆ ಗರಿಷ್ಠ ₹2 ಸಾವಿರ ಪಾವತಿಸಲು ಸರ್ಕಾರ ಅನುಮತಿ ನೀಡಿದೆ.

ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) ಮತ್ತು ಕೇಂದ್ರ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌)ಮಾರ್ಗಸೂಚಿಯಂತೆ ಪರಿಹಾರ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬರದಿಂದಾಗಿ ಶೇ 33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿಗೆ ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹8,500, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹17 ಸಾವಿರ ಹಾಗೂ ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹22,500 ಪರಿಹಾರ ನಿಗದಿ ಮಾಡಲಾಗಿದೆ ಎಂದು ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ, ಹೆಚ್ಚುವರಿ ಮೊತ್ತವನ್ನು ಮೇ 2ರಂದು ಒಟ್ಟು 40,810 ರೈತರಿಗೆ ₹20.38 ಕೋಟಿ ಇನ್‌ ಪುಟ್‌ ಸಬ್ಸಿಡಿ ಜಮೆ ಮಾಡಲು ಅನುಮೊದನೆ ನೀಡಲಾಗಿದೆ. ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಪಾವತಿ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆಯಾದ ನಂತರ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲಾಗುವುದು ಎಂದಿದ್ದಾರೆ.

65,170 ರೈತರಿಗೆ ಜಮಾ: 2023ರ ಮುಂಗಾರು ಹಂಗಾಮಿನ ಬರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಸಿದ ಡಿಜಿಟಲ್ ಬೆಳೆ ಸಮೀಕ್ಷೆ ಮಾಹಿತಿ ಮತ್ತು ಎಫ್.ಐ.ಡಿ ಹೊಂದಿರುವ ರೈತರ ಮಾಹಿತಿ ಆಧರಿಸಿ ಮೊದಲನೇ ಹಂತದಲ್ಲಿ ಗರಿಷ್ಠ ₹2 ಸಾವಿರದಂತೆ ಒಟ್ಟು 65,170 ರೈತರಿಗೆ ₹11.62 ಕೋಟಿ ಇನ್‌ಪುಟ್‌ ಸಬ್ಸಿಡಿ ಮೊತ್ತವನ್ನು ಪಾವತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬರ ಪರಿಹಾರ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ಬೆಳೆ ಪರಿಹಾರ ಹಣ ಖಾತೆಗೆ ಪಾವತಿಯಾಗದಿರುವ ಬಗ್ಗೆ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿಗಳನ್ನು ತೆರೆಯಲಾಗಿದೆ. ರೈತರು ತಮ್ಮ ದೂರುಗಳನ್ನು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರೊಳಗೆ ಸಲ್ಲಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಪರಿಶೀಲನೆ ನಡೆಸಿದ್ದ ಸಚಿವ: ಜಿಲ್ಲೆಯನ್ನು ಕಳೆದ ವರ್ಷ ಬರಪೀಡಿತ ಎಂದು ಘೋಷಿಸಿದ ಬೆನ್ನಲ್ಲೇ ಜಿಲ್ಲೆಯ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಬರ ಪೀಡಿತ ತಾಲ್ಲೂಕುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದರು.

ಪ್ರತಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದ ಅವರು, ರೈತರ ಹೊಲವನ್ನು ಪರಿಶೀಲಿಸಿ ಬೆಳೆಯ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದರು.

ರಾಮನಗರ ತಾಲ್ಲೂಕಿನಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಬಿತ್ತಿದ್ದ ರಾಗಿ ಮಳೆ ಇಲ್ಲದೆ ಮೇಲಕ್ಕೆಳದ ದೃಶ್ಯ (ಸಂಗ್ರಹ ಚಿತ್ರ)
ರಾಮನಗರ ತಾಲ್ಲೂಕಿನಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಬಿತ್ತಿದ್ದ ರಾಗಿ ಮಳೆ ಇಲ್ಲದೆ ಮೇಲಕ್ಕೆಳದ ದೃಶ್ಯ (ಸಂಗ್ರಹ ಚಿತ್ರ)

ಐದೂ ತಾಲ್ಲೂಕುಗಳಲ್ಲಿ ತೀವ್ರ ಬರ

ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರ ಬರಪೀಡಿತ ತಾಲ್ಲುಕುಗಳ ಪಟ್ಟಿಯನ್ನು ಘೋಷಿಸಿತ್ತು. ಅದರಂತೆ ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಯನ್ನು ರಾಜ್ಯ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಬರಪೀಡಿತ ಎಂದು ಘೋಷಿಸಿತ್ತು. ಅದರಲ್ಲೂ ತಾಲ್ಲೂಕುವಾರು ವರ್ಗೀಕರಣ ಮಾಡಲಾಗಿತ್ತು. ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ 3 ತಾಲ್ಲೂಕುಗಳಲ್ಲಿ ತೀವ್ರ ಬರ ಪಟ್ಟಿಗೆ ಸೇರಿದ್ದರೆ ಉಳಿದೆರಡು ತಾಲ್ಲೂಕು ಸಾಧಾರಣ ಬರ ಪಟ್ಟಿಗೆ ಸೇರಿಸಲಾಗಿತ್ತು. ಅದರಂತೆ ರಾಮನಗರ ಕನಕಪುರ ಹಾಗೂ ಹಾರೋಹಳ್ಳಿಯನ್ನು ತೀವ್ರ ಬರ ತಾಲ್ಲೂಕುಗಳೆಂದು ಮಾಗಡಿ ಮತ್ತು ಚನ್ನಪಟ್ಟಣ ಸಾಧಾರಣ ಬರದ ತಾಲ್ಲೂಕುಗಳೆಂದು ವರ್ಗೀಕರಿಸಲಾಗಿತ್ತು. ಇದಕ್ಕೆ ಮಾಗಡಿ ಮತ್ತು ಚನ್ನಪಟ್ಟಣ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದಾದ ಬಳಿಕ ಉಳಿದೆರಡು ತಾಲ್ಲೂಕುಗಳನ್ನು ಸಹ ತೀವ್ರ ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT