ಭಾನುವಾರ, ಸೆಪ್ಟೆಂಬರ್ 19, 2021
24 °C
ಇಂದು ರಣಹದ್ದು ಸಂರಕ್ಷಣೆ ಜಾಗೃತಿ ದಿನ: ವನ್ಯಜೀವಿ ಉಳಿವಿಗೆ ಬೇಕಿದೆ ಪಣ

ರಣಹದ್ದು ಸಂರಕ್ಷಣೆ ಯೋಜನೆಗೆ ಗ್ರಹಣ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ರಣಹದ್ದು ಸಂರಕ್ಷಣಾ ಧಾಮವಾದ ರಾಮದೇವರ ಬೆಟ್ಟದಲ್ಲಿ ದಿನೇ ದಿನೇ ರಣಹದ್ದುಗಳ ಸಂತತಿ ಕ್ಷೀಣಿಸುತ್ತಿದೆ. ಇವುಗಳ ಸಂರಕ್ಷಣೆಗೆಂದು ರೂಪಿಸಲಾದ ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ರಾಮದೇವರ ಬೆಟ್ಟವು ಉದ್ದಕೊಕ್ಕಿನ ರಣಹದ್ದುಗಳ ಆವಾಸ ಸ್ಥಾನ. ಹಿಂದೆ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಈ ಜಾತಿಯ ರಣಹದ್ದುಗಳು ಇಂದು ಬೆರಳೆಣಿಕೆಯಷ್ಟು ಮಾತ್ರ ಉಳಿದುಕೊಂಡಿವೆ. ಈ ಹಿನ್ನೆಲೆಯಲ್ಲಿ ಹದ್ದುಗಳ ತಳಿ ಸಂವರ್ಧನಾ ಕೇಂದ್ರ ತೆರೆಯುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು.

ರಾಮದೇವರ ಬೆಟ್ಟದಲ್ಲಿಯೇ ಈ ಕೇಂದ್ರ ಆರಂಭಿಸಲಾಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ, ವೈದ್ಯರ ಲಭ್ಯತೆ, ಮೂಲಸೌಕರ್ಯದ ಕಾರಣಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಈ ಕೇಂದ್ರ ಆರಂಭ ಮಾಡುವುದಾಗಿ ಸರ್ಕಾರ ಘೋಷಿಸಿತ್ತು. ಇದಕ್ಕೆ ಬಜೆಟ್‌ನಲ್ಲಿ ₹ 2 ಕೋಟಿ ಅನುದಾನವನ್ನೂ ತೆಗೆದಿರಿಸಲಾಗಿತ್ತು. ಇಲ್ಲಿ ರಣಹದ್ದುಗಳನ್ನು ಪೋಷಿಸಿ ಅವುಗಳನ್ನು ರಾಮದೇವರ ಬೆಟ್ಟದ ಪರಿಸರದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ವರ್ಷಗಳು ಕಳೆದರೂ ಬನ್ನೇರುಘಟ್ಟದಲ್ಲಿ ಸಂತಾನೋತ್ಪತ್ತಿ ಕೇಂದ್ರ ಕಾಮಗಾರಿ ಆರಂಭಗೊಂಡಿಲ್ಲ.

ಫೀಡರ್‌ ಕೇಂದ್ರಕ್ಕೂ ಗ್ರಹಣ: ರಾಮದೇವರ ಬೆಟ್ಟದ ಸಮೀಪ ರಣಹದ್ದುಗಳಿಗಾಗಿ ಆಹಾರ ಪೂರೈಕೆ ಕೇಂದ್ರ ಅರ್ಥಾತ್‌ ಫೀಡಿಂಗ್ ಸೆಂಟರ್‌ ತೆರೆಯಲು ಸರ್ಕಾರ ಉತ್ಸುಕವಾಗಿತ್ತು. ಇದಕ್ಕಾಗಿ ₹ 2 ಕೋಟಿ ಅನುದಾನ ನೀಡುವುದಾಗಿ ಹಿಂದಿನ ಅರಣ್ಯ ಸಚಿವ ಆನಂದ ಸಿಂಗ್‌ ಘೋಷಣೆ ಮಾಡಿದ್ದರು. ಬನ್ನೇರುಘಟ್ಟದಲ್ಲಿ ತಲೆ ಎತ್ತಲಿರುವ ತಳಿ ಸಂವರ್ಧನಾ ಕೇಂದ್ರಕ್ಕೆ ಪೂರಕವಾಗಿ ಈ ಕೇಂದ್ರ ಆರಂಭವಾಗಬೇಕಿತ್ತು. ಆದರೆ, ಈ ಯೋಜನೆಗೂ ಗ್ರಹಣ ಹಿಡಿದಿದ್ದು, ಇನ್ನೂ ಕಾಗದದ ರೂಪದಲ್ಲಿಯೇ ಉಳಿದುಕೊಂಡಿದೆ.

ರಣಹದ್ದುಗಳು ಸತ್ತ ಪ್ರಾಣಿಯ ಮಾಂಸ ತಿಂದು ಬದುಕುತ್ತವೆ. ಆದರೆ, ಈಚಿನ ದಿನಗಳಲ್ಲಿ ಪ್ರಾಣಿಗಳನ್ನು ಹೂಳುವ ಇಲ್ಲವೇ ಸುಡುವ ಪ್ರಕ್ರಿಯೆ ಹೆಚ್ಚಾದ ಕಾರಣ ಅವುಗಳಿಗೆ ಆಹಾರದ ಕೊರತೆ ಉಂಟಾಗಿದೆ. ಇದರಿಂದಾಗಿ ಅವುಗಳ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಹೀಗಾಗಿ ಹದ್ದುಗಳಿಗೆ ಅವು ಇರುವಲ್ಲಿಯೇ ಆಹಾರ ಪೂರೈಸುವ ಮೂಲಕ ಅವುಗಳು ವಲಸೆ ಹೋಗುವುದನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

‘ಕೋವಿಡ್ ಕಾರಣಕ್ಕೆ ಸರ್ಕಾರ ಘೋಷಿಸಿದ ಈ ಎರಡೂ ಯೋಜನೆಗಳಿಗೆ ಇನ್ನೂ ಚಾಲನೆ ದೊರೆತಿಲ್ಲ. ಸದ್ಯದಲ್ಲೇ ಅನುದಾನ ಬಿಡುಗಡೆ ಆಗುವ ನಿರೀಕ್ಷೆ ಇದ್ದು, ನಂತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಮೊದಲು ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಹಾಗೂ ನಂತರದಲ್ಲಿ ಫೀಡರ್‌ ಕೇಂದ್ರಗಳು ತಲೆ ಎತ್ತಲಿವೆ. ಹದ್ದುಗಳಿಗೆ ತೊಂದರೆ ಆಗುವುದನ್ನು ತಪ್ಪಿಸಲು ಬೆಟ್ಟಕ್ಕೆ ತೆರಳುವ ಮಾರ್ಗ ಬದಲಾವಣೆಗೂ ಚಿಂತನೆ ನಡೆದಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.