ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಆನೆ ಸೆರೆಗೆ ಕಾರ್ಯಾಚರಣೆ ಆರಂಭ

ಕಾಡಾನೆ ಹಾವಳಿಯಿಂದ ಬೇಸತ್ತ ರೈತರು: ಐದು ಸಾಕಾನೆಗಳಿಂದ ಕೂಂಬಿಂಗ್
Last Updated 14 ಆಗಸ್ಟ್ 2022, 3:00 IST
ಅಕ್ಷರ ಗಾತ್ರ

ಚನ್ನಪಟ್ಟಣ:ತಾಲ್ಲೂಕಿನಲ್ಲಿ ಹಾವಳಿ ನೀಡುತ್ತಿರುವ ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಐದು ಸಾಕಾನೆಗಳ ಮೂಲಕ ಶನಿವಾರ ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದರು.

ತಾಲ್ಲೂಕಿನ ಬಿ.ವಿ.ಹಳ್ಳಿ ಗ್ರಾಮದ ಹೊಸಕೆರೆ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆಗೆ ಚಾಲನೆ ದೊರೆಯಿತು.

ತಾಲ್ಲೂಕಿನಲ್ಲಿ ರೈತರ ಬೆಳೆಗಳ ಮೇಲೆ ಸತತ ದಾಳಿ ನಡೆಸುತ್ತಿರುವ ಕಾಡಾನೆಗಳಲ್ಲಿ ಎರಡು ಪುಂಡಾನೆಗಳನ್ನು ಸೆರೆಹಿಡಿಯಲು ದುಬಾರೆ ಮತ್ತು ಮತ್ತೀಗೋಡು ಆನೆ ಶಿಬಿರದಿಂದ ಐದು ಸಲಗಗಳನ್ನು ಕರೆಸಲಾಗಿದ್ದು, ಸಲಗ ಹರ್ಷ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದು ಕಾರ್ಯಾಚರಣೆ ಆರಂಭಿಸಿದರು.

ತಾಲ್ಲೂಕಿನ ಬಿ.ವಿ.ಹಳ್ಳಿ ಬಳಿಯ ತೆಂಗಿನಕಲ್ಲು, ಮುತ್ತಪ್ಪನ ಗುಡ್ಡ ಅರಣ್ಯ ಪ್ರದೇಶದ ವ್ಯಾಪ್ತಿಯ ಗ್ರಾಮಗಳಿಗೆ ಆಗಾಗ್ಗೆ ಲಗ್ಗೆ ಇಡುತ್ತಿದ್ದ ಕಾಡಾನೆಗಳು ರೈತರ ಬೆಳೆಗಳನ್ನು ಧ್ವಂಸ ಮಾಡುತ್ತಿದ್ದವು. ಇದರ ಜೊತೆಗೆ ಇದೇ ವ್ಯಾಪ್ತಿಯ ಚನ್ನಿಗನ ಹೊಸಹಳ್ಳಿ ಗ್ರಾಮದಲ್ಲಿ ಆ.9 ರ ಬೆಳಿಗ್ಗೆ ರೈತ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಅವರನ್ನು ಕೊಂದು ಹಾಕಿತ್ತು. ಆನೆಗಳ ಉಪಟಳದ ಬಗ್ಗೆ ರೈತರು ಹಾಗೂ ಜನಪ್ರತಿನಿಧಿಗಳಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಎರಡು ಪುಂಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಅನುಮತಿ ನೀಡಿದ್ದು, ಶುಕ್ರವಾರ ತಾಲ್ಲೂಕಿನ ಬಿ.ವಿ.ಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ 5 ಆನೆಗಳ ತಂಡ ಶನಿವಾರದಿಂದ ಕಾರ್ಯಾಚರಣೆ ಆರಂಭಿಸಿದವು.

ತೆಂಗಿನಕಲ್ಲು ಅರಣ್ಯದಲ್ಲಿ ಸೆರೆ ಹಿಡಿಯಲು ಗುರುತಿಸಿರುವ ಪುಂಡಾನೆಯು ಸಾಕಾನೆಗಳ ತಾತ್ಕಾಲಿಕ ಶಿಬಿರದ ಬಳಿಯಿಂದ ಸುಮಾರು ಐದಾರು ಕಿ.ಮೀ. ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಬಗ್ಗೆ ಇಲಾಖೆ ಮಾಹಿತಿ ಕಲೆಹಾಕಿದೆ. ಈ ಮಾಹಿತಿಯ ಮೇರೆಗೆ ಸಾಕಾನೆಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತಂಡ ಅರಣ್ಯ ಪ್ರದೇಶವನ್ನು ಪ್ರವೇಶಿಸಿದೆ. ಅರಣ್ಯ ಪ್ರವೇಶಿಸಿರುವ ಕಾರ್ಯಾಚರಣೆಯ ತಂಡ ಪುಂಡಾನೆಗಾಗಿ ಕೂಂಬಿಂಗ್ ಆರಂಭಿಸಿರುವುದಾಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಮೊದಲ ದಿನ ಕಾರ್ಯಾಚರಣೆ ವೇಳೆ ಸಾಕಾನೆಗಳು ಹಾಗೂ ಸಿಬ್ಬಂದಿ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಸುತ್ತಾಡಿದರೂ ಆಪರೇಷನ್ ಮಾಡಲು ಗುರುತಿಸಿರುವ ಪುಂಡಾನೆ ಪತ್ತೆಯಾಗಿಲ್ಲ. ಪುಂಡಾನೆಯು ಸ್ಥಳ ಬದಲಾಯಿಸುತ್ತಿರುವುದು ಸಿಬ್ಬಂದಿಗೆ ಹಿನ್ನಡೆ ಉಂಟು ಮಾಡಿದೆ. ಸಂಜೆಯವರೆಗೂ ಸುತ್ತಾಡಿದ ತಂಡ ಶಿಬಿರಕ್ಕೆ ಹಿಂದಿರುಗಿದೆ. ರಾತ್ರಿವೇಳೆ ಕಾರ್ಯಾಚರಣೆ ಸಾಧ್ಯವಾಗದ ಕಾರಣ ನಾಳೆ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ಸಿಪಿಐ ಭೇಟಿ

ಚನ್ನಪಟ್ಟಣ: ಕಾಡಾನೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿರುವ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಶನಿವಾರ ಭೇಟಿ ನೀಡಿ ಆನೆ ಕಾರ್ಯಾಚರಣೆಗೆ ಚಾಲನೆ ನೀಡಿ ಆನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪುಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಕರೆ ತಂದಿರುವ ಆನೆಗಳ ಬಗ್ಗೆ ಮಾಹಿತಿ ಪಡೆದ ಅವರು, ಇಲಾಖೆಯಿಂದ ತಂದಿರುವ ಆನೆಗಳ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡರು.

ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಕೇವಲ ಎರಡು ಪುಂಡಾನೆಗಳನ್ನು ಸೆರೆ ಹಿಡಿದರೆ ಪ್ರಯೋಜನವಾಗುವುದಿಲ್ಲ. ಕನಿಷ್ಠ 6 ಆನೆಗಳನ್ನು ಸೆರೆ ಹಿಡಿಯಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಕಾನೂನಿನ ಪ್ರಕಾರ ಅತಿಯಾಗಿ ಉಪಟಳ ನೀಡುತ್ತಿರುವ ಆನೆಗಳನ್ನು ಮಾತ್ರ ಸೆರೆ ಹಿಡಿಯಲು ಅವಕಾಶ ಇದೆ. ಸದ್ಯ ಎರಡು ಆನೆಗಳನ್ನು ಮಾತ್ರ ಸೆರೆ ಹಿಡಿಯಲು ಸರ್ಕಾರದಿಂದ ಅನುಮತಿ ದೊರೆತಿದೆ ಎಂದರು.

ಜಿಲ್ಲಾ ಅರಣ್ಯಾಧಿಕಾರಿ ದೇವರಾಜು, ತಾಲ್ಲೂಕು ಅರಣ್ಯ ಅಧಿಕಾರಿಗಳು, ಮುಖಂಡ ಲಿಂಗೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT