ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಒಣಭೂಮಿಯಲ್ಲಿ ರಾಗಿ ಬೆಳೆ ಸ್ಪರ್ಧೆ

ಅರ್ಜಿ ಸಲ್ಲಿಕೆಗೆ ಆ. 31 ಅಂತಿಮ ದಿನ: ಭಾಗವಹಿಸಲು ರೈತರಿಗೆ ಮನವಿ
Last Updated 25 ಜುಲೈ 2021, 3:49 IST
ಅಕ್ಷರ ಗಾತ್ರ

ಕನಕಪುರ: ಮಳೆ ಆಶ್ರಯದಲ್ಲಿ ರಾಗಿ ಬೆಳೆಯುವ ರೈತರನ್ನು ಉತ್ತೇಜಿಸಲು ಕೃಷಿ ಇಲಾಖೆಯಿಂದ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಉತ್ತಮ ರಾಗಿ ಇಳುವರಿ ತೆಗೆಯುವ ರೈತರ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕೃಷಿ ಅಧಿಕಾರಿ ಮಂಜುಳಾ ತಿಳಿಸಿದರು.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ನಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ರೈತರಿಗೆ ಇಲಾಖೆ ಕಾರ್ಯಕ್ರಮ ತಿಳಿಸಿಕೊಡುವ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ರೈತರು ಒಣಭೂಮಿಯಲ್ಲಿ ಮಳೆಯಾಧಾರಿತ ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಒಂದು ಎಕರೆ ಪ್ರದೇಶದಲ್ಲಿ ಮಳೆ ಆಶ್ರಯಿಸಿ ಉತ್ತಮ ಫಸಲು ತೆಗೆಯುವ ರೈತರು ಈ ಸ್ಪರ್ಧೆಗೆ ಅರ್ಹರಾಗಿರುತ್ತಾರೆ. ಅಂತಹ ರೈತರು ಕೃಷಿ ಇಲಾಖೆಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಆಗಸ್ಟ್‌ 31 ಕೊನೆಯ ದಿನವಾಗಿದೆ ಎಂದರು.

ಎಸ್‌.ಸಿ ಮತ್ತು ಎಸ್‌.ಟಿಗೆ ₹ 25 ಅರ್ಜಿ ಶುಲ್ಕ, ಸಾಮಾನ್ಯರಿಗೆ ₹ 100 ಅರ್ಜಿ ಶುಲ್ಕವನ್ನು ಕೃಷಿ ರೈತ ಸಂಪರ್ಕ ಕೇಂದ್ರಗಳಲ್ಲಿ ಕಟ್ಟಬೇಕಿದೆ. ಬೆಳೆ ಕಟಾವು ಮಾಡುವ ವೇಳೆಗೆ ಇಲಾಖೆಯಿಂದ ಆಧಿಕಾರಿಗಳ ತಂಡ ರೈತರ ಜಮೀನಿಗೆ ಬಂದು ಪರಿಶೀಲನೆ ನಡೆಸಿ ದಾಖಲೀಕರಿಸುತ್ತದೆ. ನಂತರ ಆಯ್ಕೆಯಾದ ರೈತರನ್ನು ತಾಲ್ಲೂಕು ಮಟ್ಟದಲ್ಲಿ ನಗದು ಬಹುಮಾನ ನೀಡಿ ಪುರಸ್ಕರಿಸಿ ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಕಳಿಸಲಾಗುತ್ತದೆ ಎಂದು ವಿವರಿಸಿದರು.

ರೈತರು ಪ್ರತಿವರ್ಷ ಬಿತ್ತನೆಗೂ ಮುಂಚೆ ಭೂಮಿ ಸಿದ್ಧತೆ ಸಮಯದಲ್ಲಿ ಕಡ್ಡಾಯವಾಗಿ ಒಂದು ಎಕರೆಗೆ 3 ಟನ್‌ ಕೊಟ್ಟಿಗೆ ಗೊಬ್ಬರ, ಗೋಡು ಅಥವಾ ಹಸಿರೆಲೆಯನ್ನು ಭೂಮಿಗೆ ಕೊಡುವ ಮೂಲಕ ಫಲವತ್ತತೆ ಕಾಪಾಡಬೇಕಿದೆ. ನಂತರದಲ್ಲಿ ರಸಗೊಬ್ಬರವನ್ನು ಕೃಷಿ ಅಧಿಕಾರಿಗಳ ಶಿಫಾರಸ್ಸಿನ ಮೇಲೆ ಕೊಡಬೇಕು. ಇದರಿಂದ ಉತ್ತಮ ಇಳುವರಿಯ ಜತೆಗೆ ಭೂಮಿಯ ಫಲವತ್ತತೆ ಕೂಡ ಉಳಿಯುತ್ತದೆ ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಕಂದಕ ಬದು ನಿರ್ಮಾಣಕ್ಕೆ ಅವಕಾಶವಿದೆ. ಪ್ರತಿಯೊಬ್ಬ ರೈತರು ಈ ಯೋಜನೆಯಡಿ ತಮ್ಮ ಜಮೀನುಗಳಲ್ಲಿ ಕಂದಕ ಬದು ನಿರ್ಮಾಣ ಮಾಡಿಕೊಳ್ಳುವ ಮೂಲಕ ನರೇಗಾ ಹಣವನ್ನು ಪಡಯಬಹುದಾಗಿದೆ ಎಂದು ಹೇಳಿದರು.

ಒಂದು ಎಕರೆ ಭೂಮಿಯಲ್ಲಿ 17 ಕಂದಕ ಬದು ನಿರ್ಮಾಣ ಮಾಡಬಹುದಾಗಿದೆ. ಒಂದು ಕಂದಕ ಬದುವಿನಲ್ಲಿ 3 ಸಾವಿರ ಲೀಟರ್‌ ನೀರು ಶೇಖರಣೆಯಾಗಲಿದೆ. ಒಂದು ಎಕರೆಯಲ್ಲಿ 51 ಸಾವಿರ ಲೀಟರ್‌ ನೀರು ಸಂಗ್ರಹಣೆಯಾಗಿ ಭೂಮಿಯಲ್ಲಿ ಇಂಗಲಿದೆ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ್‌ ಮಾತನಾಡಿ, ಕೃಷಿಗೆ ಸಂಬಂಧಪಟ್ಟ ಇಲಾಖೆಗಳಿಂದ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿ ನೀಡುವ ಕಾರ್ಯಕ್ರಮ ಇದಾಗಿದೆ. ಜನಪ್ರತಿನಿಧಿಗಳು ಇಲಾಖೆಯ ಕಾರ್ಯಕ್ರಮ ಮತ್ತು ಕೃಷಿಯಲ್ಲಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ತಿಳಿದುಕೊಂಡು ರೈತರಿಗೆ ಮಾಹಿತಿ ನೀಡಬೇಕು ಎಂದರು.

ಪಂಚಾಯಿತಿ ಅಧ್ಯಕ್ಷೆ ಸವಿತಾ ಭೈರದಾಸ್‌, ಉಪಾಧ್ಯಕ್ಷೆ ಜ್ಞಾನಸುಂದರಿ, ‘ಇಲಾಖೆ ಅಧಿಕಾರಿಗಳು ಹಲವು ಯೋಜನೆಗಳ ಬಗ್ಗೆ ತಿಳಿಸಿಕೊಟ್ಟಿದ್ದೀರಿ. ಆದರೆ ಅವುಗಳನ್ನು ಪಡೆಯಲು ರೈತರು ಕಚೇರಿಗಳಿಗೆ ಬಂದಾಗ ಸರಿಯಾದ ಮಾಹಿತಿ ನೀಡದೆ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಶಿವಣ್ಣನಾಯ್ಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT