ಶನಿವಾರ, ಸೆಪ್ಟೆಂಬರ್ 25, 2021
29 °C
ಐ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ

ಕನಕಪುರ: ನಕಲಿ ಜಾಬ್‌ಕಾರ್ಡ್ ಇಬ್ಬರು ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯೇ ನಕಲಿ ಜಾಬ್‌ ಕಾರ್ಡ್‌ ಸೃಷ್ಟಿಸಿ ನರೇಗಾ ಯೋಜನೆಯಡಿ ಹಣ ದುರ್ಬಳಕೆ ಮಾಡಿಕೊಡಿರುವ ಹಿನ್ನೆಲೆಯಲ್ಲಿ ಇಬ್ಬರನ್ನು ವಜಾ ಮಾಡಲಾಗಿದೆ.

ತಾಲ್ಲೂಕಿನಲ್ಲಿ ಉಯ್ಯಂಬಳ್ಳಿ ಹೋಬಳಿ ಐ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಮತ್ತು ಕಾಯಕಬಂಧುವಾಗಿ ಕೆಲಸ ನಿರ್ವಹಿಸುತ್ತಿದ್ದ ಎಸ್‌.ಬಿ.ಪತಿ ಹಾಗೂ ಕಡತ ನಿರ್ವಹಣೆಗಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಕಿರಣ್‌ಕುಮಾರ್‌ ಸೇವೆಯಿಂದ ವಜಾಗೊಂಡಿದ್ದಾರೆ.

‘ಆರು ವರ್ಷಗಳಿಂದ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ತಮ್ಮ ಹೆಸರಿನಲ್ಲಿ ನಕಲಿ ಜಾಬ್‌ ಕಾರ್ಡ್ ಮಾಡಿಸಿ ಅದಕ್ಕೆ ಪ್ರತಿವರ್ಷ ನರೇಗಾ ಕೂಲಿ ಹಣವನ್ನು ಬಿಡುಗಡೆ ಮಾಡಿಸಿ ಅಕ್ರಮ ಎಸೆಗುತ್ತಿದ್ದಾರೆ’ ಎಂದು ಶಿವನೇಗೌಡನದೊಡ್ಡಿ ಗ್ರಾಮದ ಶಿವಕುಮಾರ್‌ ಎಂಬುವರು ಪಿಡಿಒ, ಇಒ ಮತ್ತು ಸಿಇಒಗೆ ಜೂನ್‌ 25 ರಂದು ದೂರು ನೀಡಿದ್ದರು.

ದೂರಿನನ್ವಯ ತಾಲ್ಲೂಕು ಪಂಚಾಯಿತಿ ಇಒ ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಿಶೀಲನೆ ನಡೆಸಿದಾಗ ಅಕ್ರಮ ನಡೆಸಿರುವುದು ಸಾಬೀತಾಗಿದ್ದು, ಜುಲೈ 19 ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ನಕಲಿ ಜಾಬ್‌ ಕಾರ್ಡ್‌ ಬಳಸಿ ಅಕ್ರಮವೆಸಗಿರುವ ವಿಷಯವನ್ನು ಚರ್ಚೆಗೆ ತಂದರು.

ಅಕ್ರಮವೆಸಗಿರುವುದು ಸಾಬೀತಾಗಿರುವುದರಿಂದ ಇಬ್ಬರನ್ನು ಸೇವೆಯಿಂದ ತೆರವುಗೊಳಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸರ್ವ ಸದಸ್ಯರು ನಿರ್ಣಯಿಸಿ ಒಪ್ಪಿಗೆ ನೀಡಿದರು.

ತನಿಖೆಗೆ ಆಗ್ರಹ: ‘ಐ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಜಾಗೊಂಡಿರುವವರ ಜತೆ ಕಾರ್ಯದರ್ಶಿ, ನರೇಗಾ ಎಂಜಿನಿಯರ್‌, ಪಿಡಿಒ ಸೇರಿ ಈ ಅಕ್ರಮ ನಡೆಸಿದ್ದಾರೆ. ಪಂಚಾಯಿತಿಯಲ್ಲಿ 400ರಷ್ಟು ನಕಲಿ ಜಾಬ್‌ ಕಾರ್ಡ್‌ಗಳಿದ್ದು ಇಲಾಖೆ ಅಧಿಕಾರಿಗಳು ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಎಲ್ಲಾ ಅಕ್ರಮಗಳನ್ನು ಬಯಲಿಗೆಳೆಯಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಾನೂನಿನಡಿ ಶಿಕ್ಷೆ ಕೊಡಬೇಕು’ ಎಂದು ಶಿವನೇಗೌಡನದೊಡ್ಡಿ ಶಿವಕುಮಾರ್‌ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.