ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ರೈತರಿಗೆ ಬೇಸಾಯದ ಪಾಠ: ಲಗ್ನ‍ಪತ್ರಿಕೆಯಲ್ಲಿ ಕೃಷಿ ಜಾಗೃತಿ!

ಸಮಗ್ರ ಬೇಸಾಯ ಪದ್ಧತಿ ಮಾಹಿತಿ
Last Updated 28 ಫೆಬ್ರುವರಿ 2021, 3:26 IST
ಅಕ್ಷರ ಗಾತ್ರ

ರಾಮನಗರ: ಕನಕಪುರದ ಯುವ ಕೃಷಿಕರೊಬ್ಬರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸಮಗ್ರ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ಪ್ರಕಟಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕನಕಪುರ ತಾಲ್ಲೂಕಿನ ಐ ಗೊಲ್ಲಹಳ್ಳಿ ಸಮೀಪದ ತೆರಿಗೆದೊಡ್ಡಿಯವರಾದ ಮಹದೇವಿಬಾಯಿ ಹಾಗೂ ಗೋವಿಂದನಾಯಕ್‌ ಅವರ ಪುತ್ರ ಅರ್ಜುನ್‌ ನಾಯಕ್‌ ಅವರ ವಿವಾಹವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್‌ ತಾಲ್ಲೂಕಿನ ಶಿವನಹಳ್ಳಿ ಗ್ರಾಮದ ಮುದ್ದಿಬಾಯಿ ಮತ್ತು ತುಳಸಿನಾಯಕ್ ಅವರ ಪುತ್ರಿ ಗಂಗಾಬಾಯಿ ಅವರೊಂದಿಗೆ ಮಾರ್ಚ್‌ 7ರಂದು ವರನ ಮನೆಯಲ್ಲಿ ನಡೆಯಲಿದೆ.

ಒಂದಿಡಿ ಪುಟ ಕೃಷಿ ಪಾಠ!: ಈ ವಿವಾಹದ ಆಮಂತ್ರಣ ಪತ್ರಿಕೆಯ ಒಂದು ಪೂರ್ಣ ಪುಟವನ್ನು ಕೃಷಿ ಪದ್ಧತಿಗಳು ಮತ್ತು ಅದರ ಪ್ರಯೋಜನಗಳ ಕುರಿತು ಮೀಸಲಿಡಲಾಗಿದೆ. ಸಮಗ್ರ ಕೃಷಿ ಪದ್ಧತಿ, ಅದರ ವಿಧಾನಗಳು ಮತ್ತು ಪ್ರಯೋಜನಗಳ ಮಾಹಿತಿ ನೀಡಲಾಗಿದೆ. ಈ ಮೂಲಕ ರೈತರನ್ನು ಕೃಷಿಯತ್ತ ಪ್ರೇರೇಪಿಸುವ ಕೆಲಸ ಮಾಡಿದ್ದಾರೆ. ಲಗ್ನಪತ್ರಿಕೆಯ ಮೇಲ್ಭಾಗದಲ್ಲಿ ರೈತ ಉಳುಮೆ ಮಾಡುತ್ತಿರುವ ಚಿತ್ರ ಹಾಕಿಸಿದ್ದಾರೆ.

ಕೃಷಿಯತ್ತ ಒಲವು: ಅರ್ಜುನ್‌ ಅವರದ್ದು ಕೃಷಿ ಪ್ರಧಾನ ಕುಟುಂಬ. ಆರಂಭದಲ್ಲಿ ಅವರೂ ಇತರರಂತೆ ಕೃಷಿಯಿಂದ ವಿಮುಖರಾಗಿ ಬೆಂಗಳೂರಿನಲ್ಲಿ ನೌಕರಿ ಹಿಡಿಯಲು ಹೊರಟಿದ್ದರು. ಒಂದೆರಡು ವರ್ಷ ಕೃಷಿ ಉತ್ಪನ್ನಗಳ ಕಂಪನಿಯಲ್ಲಿ ಕೆಲಸ ಮಾಡಿದರು. ನಂತರದಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ನಡೆದ ಹತ್ತು ತಿಂಗಳ ಸಮಗ್ರ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಅಲ್ಲಿಂದ ಅವರ ಆಸಕ್ತಿಯೂ ಬದಲಾಯಿತು.

‘ಲಾಲ್‌ಬಾಗ್‌ನ ತರಬೇತಿಯಲ್ಲಿನ ಆ ಹತ್ತು ತಿಂಗಳು ಕೃಷಿ ಬಗ್ಗೆ ನನ್ನ ಆಲೋಚನೆಗಳನ್ನು ಬದಲಿಸಿತು. ಸಮಗ್ರ ಕೃಷಿ, ಉಪಕಸುಬುಗಳ ಮೂಲಕ ರೈತರು ಲಾಭದಾಯಕವಾಗಿ ಮುನ್ನಡೆಯಬಹುದು ಎನ್ನುವ ಭರವಸೆ ಬಂದಿತು. ನಂತರದಲ್ಲಿ ಈ ಕ್ಷೇತ್ರದಲ್ಲೇ ತೊಡಗಿಸಿಕೊಳ್ಳುವ ಮನಸ್ಸು ಮಾಡಿದೆ’ ಎನ್ನುತ್ತಾರೆ ಅವರು.

ಸಮಗ್ರ ಕೃಷಿಗೆ ನಾಂದಿ

‘ಗ್ರಾಮದಲ್ಲಿ ನಮ್ಮ ಕುಟುಂಬಕ್ಕೆ ಸೇರಿದ ಮೂರು ಎಕರೆ ಜಮೀನು ಇದೆ. ಸಾಂಪ್ರದಾಯಿಕ ರೇಷ್ಮೆ ಕೃಷಿ ಜೊತೆಗೆ ಈಚೆಗೆ ಜಮೀನಿನಲ್ಲಿ ತೆಂಗು ಹಾಗೂ ಅರಣ್ಯ ಕೃಷಿ ಮಾಡಿದ್ದೇವೆ. ಮೇಕೆ ಫಾರಂ ಮಾಡುವ ಸಲುವಾಗಿ 10 ಮೇಕೆಗಳನ್ನು ಸಾಕುತ್ತಿದ್ದೇವೆ. ಮುಂದೆ ಅಣಬೆ ಬೆಳೆಯುವ ಯೋಜನೆ ಹೊಂದಿದ್ದೇವೆ. ಜಮೀನಿನಲ್ಲೇ ಕೃಷಿ ಹೊಂಡ ಮಾಡಬೇಕು ಎನ್ನುವ ಉದ್ದೇಶವೂ ಇದೆ’ ಎಂದು ಅವರು ವಿವರಿಸುತ್ತಾರೆ.

ಅರ್ಜುನ್ ಸದ್ಯ ಖಾಸಗಿ ಕಂಪನಿಯೊಂದರಲ್ಲಿ ಉದ್ಯಾನ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ತಮ್ಮ ಜಮೀನಿನ ಕೆಲಸವನ್ನೂ ಮಾಡುತ್ತಿದ್ದಾರೆ. ಮುಂದೆ ಆದಾಯ ಹೆಚ್ಚಾದಾಗ ಪೂರ್ಣ ಪ್ರಮಾಣದಲ್ಲಿ ಊರಿನಲ್ಲಿಯೇ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಆಶಯ ಅವರದ್ದು. ‘ನಾನು ಊರಿಗೆ ಬಂದು ಕೃಷಿ ಮಾಡಬೇಕು ಎಂಬುದು ನಮ್ಮ ಕುಟುಂಬದ ಆಶಯವೂ ಹೌದು. ಕೃಷಿ ವಿಚಾರಗಳ ಬಗ್ಗೆ ಲಗ್ನಪತ್ರಿಕೆಯಲ್ಲಿ ಹಾಕಿಸುತ್ತೇವೆ ಎಂದಾಗ ಮನೆಯವರೂ ಖುಷಿಯಿಂದ ಒಪ್ಪಿದ್ದಾರೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT