ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ವಿರೋಧ

ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತರಿಂದ ಹೆದ್ದಾರಿ ತಡೆದು ಪ್ರತಿಭಟನೆ
Last Updated 10 ಜೂನ್ 2019, 12:34 IST
ಅಕ್ಷರ ಗಾತ್ರ

ರಾಮನಗರ: ಕೇಂದ್ರ ಸರ್ಕಾರದ 2013ರ ಭೂ ಸ್ವಾಧೀನ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ಮಸೂದೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಸೋಮವಾರ ಬೆಂಗಳೂರು–-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ದೇಶಾದ್ಯಂತ ರೈತರು ಮತ್ತು ಜನಪರ ಸಂಘಟನೆಗಳು ಹೋರಾಟ ಮಾಡಿದ ಹಿನ್ನೆಲೆಯಲ್ಲಿ 1894ರ ಭೂ ಸ್ವಾಧೀನ ಕಾಯ್ದೆಯನ್ನು ರದ್ದುಪಡಿಸಿ 2013ರಲ್ಲಿ ಹೊಸ ಕಾಯ್ದೆ ರೂಪಿಸಲಾಯಿತು. ಇದರಲ್ಲಿ ಒಂದಷ್ಟು ಸಮಾಧಾನಕರವಾದ ಅಂಶ ಒಳಗೊಂಡಿತ್ತು. ಆದರೆ, ಈ ಅಧಿನಿಯಮದ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಕೆಲ ತಿದ್ದುಪಡಿ ತರಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾದಾಗ ಅದರ ವಿರುದ್ಧವೂ ವಿರೋಧ ವ್ಯಕ್ತವಾಗಿತ್ತು’ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷೆ ಅನಸೂಯಮ್ಮ ತಿಳಿಸಿದರು.

‘ಎರಡು ಬಾರಿ ಮೇಲ್ಮನೆಯಲ್ಲಿ ಮಸೂದೆಗೆ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ತಿದ್ದುಪಡಿ ಸಾಧ್ಯವಾಗಲಿಲ್ಲ. ಆದರೆ, ಆಯಾ ರಾಜ್ಯ ಸರ್ಕಾರ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಕರ್ನಾಟಕ 2013ರ ಕಾಯ್ದೆಗೆ ಇತ್ತೀಚಿಗೆ ನಡೆದ ವಿಧಾನಸಭಾ ಅಧಿವೇಶದನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಿ, ಚರ್ಚೆ ಇಲ್ಲದೇ ಅಂಗೀಕಾರ ಪಡೆದು, ರಾಜ್ಯಪಾಲರ ಸಹಿಗೆ ಕಳುಹಿಸಿದೆ. ಈ ತಿದ್ದುಪಡಿಯು 2013ರ ಕಾಯ್ದೆಯ ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇದು ಬ್ರಿಟಿಷರು ರೂಪಿಸಿದ್ದ ಕಾಯ್ದೆ ಮುಂದುವರೆಸುವ ಭಾಗವಾಗಿದ್ದು, ಬಂಡವಾಳ ಶಾಹಿಗಳ ಪರವಾಗಿದೆ. ಆದ್ದರಿಂದ, ಕೂಡಲೇ ತಿದ್ದುಪಡಿ ಕಾಯ್ದೆ ಆದೇಶ ವಾಪಾಸ್ ಪಡೆಯಬೇಕು. ಭೂಸ್ವಾಧೀನ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ರೈತರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ತಿದ್ದುಪಡಿಯ ಅನ್ವಯ ರೈತರ ಅನುಮತಿಯಿಲ್ಲದೆಯೇ ಜಮೀನನ್ನು ಸರ್ಕಾರ ವಶಕ್ಕೆ ಪಡೆಯಬಹುದಾಗಿದೆ. ದಾವೆ ಹೂಡಲು ಅವಕಾಶ ಇಲ್ಲ. ಹೆದ್ದಾರಿ, ಕಾಲುವೆಗಳನ್ನು ನಿರ್ಮಿಸುವ ಗುತ್ತಿಗೆದಾರರು ಮತ್ತು ರಿಯಲ್‌ ಎಸ್ಟೆಟ್ ಕುಳಗಳ ಏಜೆಂಟ್‌ ಆಗಿ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಕ್ಷ್ಮಣಸ್ವಾಮಿ ಮಾತನಾಡಿ ‘ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿದರೆ ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ರೈತರ ಅನುಮತಿ ಅಗತ್ಯ ಇರುವುದಿಲ್ಲ. ಇದು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ. ಆಡಳಿತ ನಡೆಸುತ್ತಿರುವ ಸರ್ಕಾರಗಳು ರೈತ ಪರ ಎಂದು ಹೇಳಿಕೊಂಡು ರೈತ ಸಮುದಾಯದ ವಿರುದ್ಧ ಕಾಯ್ದೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ತಿಳಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಾದ ಬೈರೇಗೌಡ, ರಾಜೇಗೌಡ, ಶ್ರೀನಿವಾಸ್, ರಮೇಶ್, ಗೋವಿಂದರಾಜು, ಅನಂತರಾಜಪ್ರಸಾದ್, ನಾಗಮ್ಮ, ದೇವರಾಜು, ಗಿರೀಶ್, ಸ್ವಾಮಿ, ಕೆ. ಅಶೋಕ್, ರಂಗಸ್ವಾಮಿ, ರಾಮಲಿಂಗೇಗೌಡ, ನಂಜಪ್ಪ, ಶಿವರಾಮು, ಕರಿಯಪ್ಪ, ಉಮೇಶ್, ಲೋಕೇಶ್, ಶಿವರಾಜು, ಚಿಕ್ಕಮರಿಯಪ್ಪ, ಶಿವಣ್ಣ, ಜಗದೀಶ್, ಎಚ್. ನಾಗೇಶ್, ಮಂಜು ಇದ್ದರು.

ಸಂಚಾರ ಅಸ್ತವ್ಯಸ್ತ
ರೈತರು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ಕುಳಿತ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಕೆ. ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದ ಬಳಿಕವೂ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.

**
ರಾಜ್ಯ ಸರ್ಕಾರದ ತಿದ್ದುಪಡಿ ಮಸೂದೆಯು ಬಂಡವಾಳ ಶಾಹಿಗಳ ಪರವಾಗಿದೆ. ಈ ಮೂಲಕ ರೈತರ ಹಕ್ಕನ್ನು ಕಸಿಯುವ ಪ್ರಯತ್ನ ನಡೆದಿದೆ
ಅನಸೂಯಮ್ಮ, ಉಪಾಧ್ಯಕ್ಷೆ, ರಾಜ್ಯ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT